ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಕ್ರಿಸ್ಟಲ್ ಕೋಟ್೯ ಸಭಾಂಗಣದಲ್ಲಿ ಕೂರ್ಗ್ ಪ್ಲಾಂಟಸ್೯ ಅಸೋಸಿಯೇಷನ್ ನ 145 ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಜಗದೀಶ್, ಕಾಫಿ ಬೆಳೆಯ ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಭಾರತೀಯ ಕಾಫಿ ಬೆಳೆಗೆ ಎಂದಿಗೂ ಹಿನ್ನಡೆಯಾಗಲಾರದು, ಈ ನಿಟ್ಟಿನಲ್ಲಿ ಕಾಫಿ ಬೆಳೆಯ ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ಪ್ರತೀ ಹೋಬಳಿಯಲ್ಲಿಯೂ 100 ಕೃಷಿಕರನ್ನೊಳಗೊಂಡ ಸಮುದಾಯ ಗುಂಪನ್ನು ಪ್ರಾರಂಭಿಸಿ, ಅವರು ಬೆಳೆದ ಕಾಫಿಯನ್ನು ಸಂಗ್ರಹಿಸಿ ಅದರ ಗುಣಮಟ್ಟದ ಬಗ್ಗೆ ( ಕಾಫಿ ಕಪ್ಪಿಂಗ್ ಸ್ಕೋರ್ ) ಪ್ರಯೋಗಾಲಯದಿಂದ ಮಾಹಿತಿ ಪಡೆಯಲಾಗುತ್ತದೆ. ಗುಣಮಟ್ಟ ಹೆಚ್ಚಳವಾಗಬೇಕೆಂದಾದಲ್ಲಿ ಯಾವ ರೀತಿ ಗುಣಮಟ್ಟ ಹೆಚ್ಚಳ ಮಾಡಬಹುದು ಎಂಬ ಬಗ್ಗೆಯೂ ಕಾಫಿ ಮಂಡಳಿಯಿಂದ ಸೂಕ್ತ ಮಾಹಿತಿಯನ್ನು ತಜ್ಞರು ಕೃಷಿಕರಿಗೆ ನೀಡಲಿದ್ದಾರೆ, ಈ ಯೋಜನೆಯಿಂದ ಪ್ರತೀ ಗ್ರಾಮದ ಕಾಫಿ ಕೃಷಿಕರಿಗೆ ಕಾಫಿಯ ಗುಣಮಟ್ಟ ಹೆಚ್ಚಳ ಕಾಪಾಡಿಕೊಳ್ಳಲು ಸಾಧ್ಯವಾಗಿ ಉತ್ತಮ ಬೆಲೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಅಂತೆಯೇ ಹೆಚ್ಚುತ್ತಿರುವ ಕಾಫಿ ಕೆಫೆಗಳಿಗೆ ಸೂಕ್ತ ಸಿಬ್ಬಂದಿ ಅಗತ್ಯತೆಯನ್ನು ಮನಗಂಡು ಮಹಿಳೆಯರು, ಮಕ್ಕಳೂ ಸೇರಿದಂತೆ ಆಸಕ್ತಿಯುಳ್ಳವರಿಗೆ ಕೆಫೆ ಬರಿಸ್ಟಾ (ಕೆಫೆ ನಿವಾ೯ಹಕರು) ತರಬೇತಿಯನ್ನು ನೀಡುವ ಯೋಜನೆ ಮಂಡಳಿಯ ಮುಂದಿದೆ. ಈ ಮೂಲಕ ಕಾಫಿ ತೋಟಗಳಿಗೆ ಬರುವ ಸಂದರ್ಶಕರು, ಪ್ರವಾಸಿಗರಿಗೂ ಉತ್ತಮ ಗುಣಮಟ್ಟದ ಸ್ವಾದಿಷ್ಟ ಕಾಫಿಯನ್ನು ತಯಾರಿಸಿ ನೀಡಬಹುದಾಗಿದೆ ಎಂದೂ ಡಾ.ಜಗದೀಶ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಕೊಡಗಿನಲ್ಲಿ ಪರಿಸರ ಸ್ನೇಹಿ ಕಾಫಿ ಪ್ರವಾಸೋದ್ಯಮದ ಮೂಲಕ ಕಾಫಿ ತೋಟಗಳಿಗೆ ಸಂದರ್ಶಕರನ್ನು ಕರೆತರಲು ಸಾಧ್ಯವಿದೆ ಎಂದು ಸಲಹೆ ನೀಡಿದ ಜಗದೀಶ್, ಈ ನಿಟ್ಟಿನಲ್ಲಿ ಕಾಫಿ ತೋಟಗಳನ್ನು ಪರಿಸರ ಸ್ನೇಹಿಯಾಗಿ ಸಂರಕ್ಷಿಸಿಕೊಳ್ಳುವ ಹೊಣೆಗಾರಿಕೆ ತೋಟ ಮಾಲೀಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು. ಕೊಡಗೂ ಸೇರಿದಂತೆ ಕರ್ನಾಟಕದ ಕಾಫಿ ತೋಟಗಳಲ್ಲಿ ಹಲವಷ್ಟು ಜೀವವೈವಿಧ್ಯತೆಗಳಿವೆ, ಇದನ್ನೇ ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಕಾಫಿ ತೋಟಗಳಲ್ಲಿನ ವಿಶಿಷ್ಟತೆಗಳ ಕಥೆ ಹೇಳುವಂತಾಗಬೇಕೆಂದೂ ಕಾಫಿ ಮಂಡಳಿ ಕಾರ್ಯದಶಿ೯ ಡಾ. ಜಗದೀಶ್ ಸಲಹೆ ನೀಡಿದರು.
ಭವಿಷ್ಯದಲ್ಲಿ ಕಾಮಿ೯ಕರ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಹಿನ್ನಲೆಯಲ್ಲಿ ಶೇ. 60 ರಷ್ಟು ತೋಟವನ್ನಾದರೂ ಯಾಂತ್ರೀಕರಣಕ್ಕೆ ಒಳಪಡಿಸುವ ಅನಿವಾರ್ಯತೆ ಕಾಫಿ ಕೃಷಿಕರಿಗೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸದೇ ಕಾರ್ಮಿಕರನ್ನೇ ನಂಬಿಕೊಂಡರೆ ಸಮಸ್ಯೆ ಖಂಡಿತಾ ಎಂದು ಎಚ್ಚರಿಸಿದ ಜಗದೀಶ್, ಪ್ರಸ್ತುತ ಶೇ 5 ರಷ್ಟಿರುವ ಸ್ಪೆಷಾಲಿಟಿ ಕಾಫಿ ಶೇ. 40 ರಷ್ಟು ಮಾರುಕಟ್ಟೆ ಪ್ರಮಾಣ ಹೊಂದುವ ಸಾಧ್ಯತೆ ಇದೆ, ಹೀಗಾಗಿ ಸ್ಪೆಷಾಲಿಟಿ ಕಾಫಿಯತ್ತ ಹೆಚ್ಚಿನ ಗಮನ ನೀಡುವುದು ಸೂಕ್ತ ಎಂದೂ ಅವರು ಹೇಳಿದರು.
ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿದೇ೯ಶಕ ಪಿ ಎ ಮಂದಣ್ಣ ಮಾತನಾಡಿ, ಸುಸ್ಥಿರ ಕಾಫಿ ಬೆಳೆಯತ್ತ ಪ್ರತೀ ಬೆಳಗಾರರೂ ಆದ್ಯತೆ ನೀಡುವಂತಾಗಬೇಕು, ಪರಿಸರ, ಆರ್ಥಿಕತೆ ಮತ್ತು ಸಾಮಾಜಿಕ ಸೇವೆಯತ್ತಲೂ ತೋಟ ಕೃಷಿಕರು ಗಮನ ಹರಿಸಬೇಕೆಂದು ಹೇಳಿದರಲ್ಲದೇ, ಟಾಟಾ ಕಾಫಿ ಸಂಸ್ಥೆಯ ತೋಟಗಳಲ್ಲಿ ಪರಿಸರ ಸ್ನೇಹಿ ಪಲ್ಪರ್ ಗಳು, ಮಳೆ ಕೊಯ್ಲು ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿರುವ ಪರಿಣಾಮವೇ ಮಣ್ಣಿನ ಫಲವತ್ತತೆ ಹೆಚ್ಚಳವಾಗಿ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ, ಅಂತರ್ ಜಲದ ಮಟ್ಟದಲ್ಲಿಯೂ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು.
ಡಾ ರಾಜಾ ವಿಜಯ್ ಕುಮಾರ್, ಯುನೆಟೈಡ್ ಕಿಂಗ್ ಡಮ್ ನ ಕೃಷಿ ಪರಿಣಿತ ಮಾಕ್೯ ತ್ರಿಸ್ನಿ, ಕೆ ಸುದೀಂದ್ರ ಅವರು ಕಾಫಿ ಕೃಷಿ ಸಂಬಂಧಿತ ವಿವಿಧ ವಿಚಾರಗಳ ಬಗ್ಗೆ ಪ್ರಾತಕ್ಷಿಕೆ ಮೂಲಕ ಉಪಯುಕ್ತ ಮಾಹಿತಿಗಳನ್ನು ಬೆಳೆಗಾರರಿಗೆ ನೀಡಿದರು.