ಗದಗ: ಕೃಷಿಕರ, ಕೂಲಿಕಾರ್ಮಿಕರ ಮಕ್ಕಳು ತಮ್ಮಂತೆ ಕೂಲಿ ಕಾರ್ಮಿಕರನ್ನಾಗುವುದನ್ನು ತಪ್ಪಿಸಲು ಮೋದಿ ನೇತೃತ್ವದ ಸರ್ಕಾರ ಉಚಿತ ಹಾಗೂ ಮೀಸಲಾತಿ ವರ್ಗಕ್ಕನುಗುಣವಾಗಿ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಈ ದೇಶದ ಉನ್ನತ ಅಧಿಕಾರಿಗಳನ್ನಾಗಿ ಮಾಡುತ್ತಿದೆ ಎಂದು ಬಿಜೆಪಿಯ ಹಿರಿಯ ಧುರೀಣ ದತ್ತಾತ್ರೇಯ ಜೋಶಿ ಹಾಗೂ ಲಕ್ಕುಂಡಿ ಬಿಜೆಪಿ ಮಂಡಳದ ಎಸ್ ಸಿ ಯುವ ಘಟಕದ ಅಧ್ಯಕ್ಷ ಬಸವರಾಜ ಮುಳ್ಳಾಳ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಭಾನುವಾರ ರೈತರ ಜಮೀನಿನಲ್ಲಿ ಮನೇರೆಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೂಲಿ ಕಾರ್ಮಿಕರು ಮಕ್ಕಳು ಕೂಲಿಕಾರರಾಗಿ ಬದುಕಬೇಕೆ? ಇಲ್ಲ ವಿದ್ಯಾವಂತರಾಗಿ ಉತ್ತಮ ಹುದ್ದೆ ಪಡೆಯಬೇಕು ಎಂಬ ಉದ್ದೇಶದಿಂದ ಮೋದಿ ಗ್ಯಾರಂಟಿ ಸರ್ಕಾರವು ದೇಶದಲ್ಲಿ ೧೦೦೦ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಿದೆ. ಐಐಟಿ, ಎಮ್ಸ್, ಅಲ್ಪಸಂಖ್ಯಾತರ ವಸತಿ ನಿಲಯ, ಮೊರಾರ್ಜಿ ವಸತಿ ನಿಲಯ ಸೇರಿದಂತೆ ಉತ್ತಮ ಶಿಕ್ಷಣ ನೀತಿ ಜಾರಿಗೆ ತಂದಿದೆ ಎಂದರು.ಬಿಟ್ಟಿ ಭಾಗ್ಯ ಕೊಟ್ಟು ದೇಶದ ಜನರನ್ನು ಸೋಮಾರಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಬಡವರನ್ನು ಇನ್ನಷ್ಟು ಪರಾವಲಂಬಿಯಾಗುವುದನ್ನು ರೂಢಿಸುತ್ತಿದ್ದು, ೬೦ ವರ್ಷ ಇದನ್ನೇ ಮುಂದುವರಿಸಿಕೊಂಡು ಬರುತ್ತಿದೆ. ಆದರೆ ಬಿಜೆಪಿಯು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಮಹಿಳಾ ಸ್ವ ಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ₹೧೦ ಲಕ್ಷ ಸಾಲ ಸೌಲಭ್ಯ, ಸುಕನ್ಯಾ ಯೋಜನೆಯಡಿಯ ಖಾತೆ ಹಣಕ್ಕೆ ಹೆಚ್ಚಿನ ಬಡ್ಡಿ ದರ, ಬೀದಿ ಬದಿ ವ್ಯಾಪಾರಸ್ಥರಿಗೆ ₹೧೦ ಸಾವಿರದಿಂದ ₹೧ ಲಕ್ಷದವರೆಗೆ ದಾಖಲೆ ಹಾಗೂ ಜಾಮೀನು ರಹಿತ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ, ಮುದ್ರಾ ಯೋಜನೆಯಡಿ ಹೊಸ ಉದ್ಯೋಗ ಸೃಷ್ಠಿಗೆ ₹ ೩೦ ಲಕ್ಷ ದವರೆಗೂ ಮೀಸಲಾತಿಗನುಗುಣವಾಗಿ ಸಬ್ಸಿಡಿ ಸಾಲ, ಸೌರ ವಿದ್ಯುತ್ ಯೋಜನೆಯಡಿಯಲ್ಲಿ ೩೦೦ಯುನಿಟ್ ವಿದ್ಯುತ್ ಉಚಿತ ಬಳಕೆ ಉಳಿದ ವಿದ್ಯುತ್‌ನ್ನು ಸರ್ಕಾರಕ್ಕೆ ಮಾರಾಟ ಸೇರಿದಂತೆ ಮೇಕ್ ಇನ್ ಇಂಡಿಯಾ, ವಿಶ್ವಕರ್ಮ ಯೋಜನೆ, ದೇಶದ ಭದ್ರತೆ, ಶಿಕ್ಷಣ, ಔಷಧ, ಆಹಾರ ವಲಯವು ಸದೃಢವಾಗಿದೆ ಎಂದು ಮೋದಿ ಸರ್ಕಾರದ ಸಾಧನೆ ತಿಳಿಸುತ್ತಾ ಕಾಂಗ್ರೆಸ್ ಕೊಟ್ಟಿದ್ದು ಮನೆತನಕ, ಬಿಜೆಪಿ ಕೊಟ್ಟಿದ್ದು ಕೊನೆತನಕ ಉಳಿಯುವಂತಾಗಿದ್ದು, ಈ ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಿಸಲು ಕಮಲಕ್ಕೆ ಮತ ನೀಡಬೇಕೆಂದು ವಿನಂತಿಸಿಕೊಂಡರು.
ಈ ವೇಳೆ ಅಂದಪ್ಪ ತಿಮ್ಮಾಪೂರ, ಮಹೇಶ ಮುಸ್ಕಿನಭಾವಿ, ಸಿದ್ದು ಮುಳಗುಂದ, ಪ್ರಕಾಶ ಅರಹುಣಶಿ, ವೀರಣ್ಣ ಚಕ್ರಸಾಲಿ, ಮರಿಯಪ್ಪ ವಡ್ಡರ, ಮೃತ್ಯಂಜಯ ನಡುವಿನಮಠ, ಪ್ರಕಾಶ ಹಣವಾಳ ಇದ್ದರು.