ಹುಬ್ಬಳ್ಳಿ:
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಇತ್ತೀಚಿಗೆ ಬಿಡುಗಡೆ ಮಾಡಿದ್ದ ₹ 340 ಕೋಟಿ ಅನುದಾನವನ್ನು ಸಮೀಕ್ಷೆಗೆಂದು ಹಿಂಪಡೆಯುವ ಮೂಲಕ ಸರ್ಕಾರ ಹಿಂದುಳಿದವರಿಗೆ ಅನ್ಯಾಯ ಮಾಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿಗದ ವರ್ಗಗಳ ಅಭಿವೃದ್ಧಿಗೆ ನೀಡಿದ್ದ ಅನುದಾನ ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಎಸ್‌ಸಿಪಿ, ಟಿಎಸ್‌ಪಿಯ ಕಾನೂನು ಜಾರಿಗೆ ತಂದಿದ್ದಾರೆ ವಿನಃ ಒಂದು ಬಾರಿಯೂ ವಿಶೇಷ ಅನುದಾನ ನೀಡಿಲ್ಲ. ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಸಿಕ್ಕ ಬಳಿಕ ಅಂಬೇಡ್ಕರ್ ಅವರು ಮೀಸಲಾತಿ ಕೊಟ್ಟಾಗ ಎಸ್ಸಿ-ಎಸ್ಟಿಯಲ್ಲಿ ಕೇವಲ ಆರು ಜಾತಿಗಳಿದ್ದವು. ಇದೀಗ 106 ಜಾತಿಗಳಾಗಿವೆ. ಕಾಂಗ್ರೆಸ್‌ನವರು ಮೀಸಲಾತಿ ಪಟ್ಟಿಗೆ ಜಾತಿಗಳನ್ನು ಸೇರಿಸಿದರೇ ವಿನಃ ಜನಸಂಖ್ಯೆ ಹೆಚ್ಚಾದಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಿಲ್ಲ. ಈಗಿರುವ ಶೇ. 13ರಲ್ಲೇ ಮತ್ತಷ್ಟು ಜಾತಿಗಳನ್ನು ಸೇರಿಸಿದರೆ ಇವರು ದಲಿತರ ಪರವೋ, ವಿರುದ್ಧವೋ ಎಂದು ಪ್ರಶ್ನಿಸಿದರು.ಸಮೀಕ್ಷೆಯಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿ ಸಮಾಜದಲ್ಲಿ ಒಡಕು ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಬಹಳಷ್ಟು ಗೊಂದಲವಾಗಿದೆ. ಹೀಗಾಗಿಯೇ ಹೈಕೋರ್ಟ್ ಜನರಿಗೆ ಒತ್ತಾಯ ಮಾಡದಂತೆ ನಿರ್ದೇಶನ ನೀಡಿದೆ. ಈ ಮೂಲಕ ಇದು ಅಸಾಂವಿಧಾನಿಕ, ಇದನ್ನು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎನ್ನುವುದನ್ನು ಹೈಕೋರ್ಟ್ ಪರೋಕ್ಷವಾಗಿ ಹೇಳಿದೆ ಎಂದರು.
ಸಿದ್ದರಾಮಯ್ಯ ಜಾತ್ಯತೀತತೆ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಜಾತಿ ಪದ್ಧತಿಯನ್ನು ತಂದು ಸಮಾಜವನ್ನು ಒಡೆದಿರುವ ಅಪಖ್ಯಾತಿಗೆ ಒಳಗಾಗಿದ್ದಾರೆ. ಕೇಂದ್ರ ಜನವರಿಯಲ್ಲಿ ಇಡಿ ದೇಶದ ತುಂಬ ಸರ್ವೇ ಮಾಡಲಿದೆ. ಆಗ ಎಲ್ಲ ಅಂಕಿ-ಅಂಶ ಸಿಗಲಿದೆ. ಅದರ ಆಧಾರದ ಮೇಲೆ ಕಾರ್ಯಕ್ರಮ, ಯೋಜನೆ ಜಾರಿ ಮಾಡಬಹುದು. ರಾಜಕೀಯ ಲಾಭ ಪಡೆಯುವ ಉದ್ದೇಶದಿಂದಲೇ ಕೇಂದ್ರ ಸರ್ವೇ ಮಾಡುವ ಮೊದಲೇ ಸಮೀಕ್ಷೆ ಮಾಡಲಾಗುತ್ತಿದೆ. ಮೂರು ತಿಂಗಳು ಮೊದಲು ಸರ್ವೇ ಮಾಡಿ ಏನು ಸಾಧಿಸುವವರಿದ್ದೀರಿ ಎಂದು ಬೊಮ್ಮಾಯಿ ಪ್ರಶ್ನಿಸಿದರು.ಬೇರೆ-ಬೇರೆ ಮೂಲಗಳಿಂದ ಎಲ್ಲ ಮಾಹಿತಿ ಈಗಾಗಲೇ ಸರ್ಕಾರದ ಬಳಿ ಇದೆ. ಈ ಹಿಂದೆ ಸಮೀಕ್ಷೆಗೆ ₹150 ಕೋಟಿ ಖರ್ಚಾಗಿದೆ. ಈಗ ₹400 ಕೋಟಿ ಖರ್ಚು ಮಾಡಲಾಗುತ್ತಿದೆ. ಇದು ಯಾರ ಉದ್ಧಾರಕ್ಕಾಗಿ? ಸಮೀಕ್ಷೆ ಮಾಡುವ ಮೊದಲು ಯಾಕೆ ಮಾಡಲಾಗುತ್ತಿದೆ ಎನ್ನುವುದರ ಕುರಿತು, ಯಾವ ಯೋಜನೆ ಜಾರಿ ಮಾಡುತ್ತೇವೆ ಎನ್ನುವುದನ್ನು ಜನರಿಗೆ ತಿಳಿಸಬೇಕಿತ್ತು ಎಂದರು.
ಬಿಜೆಪಿಯ ಲಿಂಗಾಯತ ವೋಟ್ ಬ್ಯಾಂಕ್ ಒಡೆಯುವ ನಿಟ್ಟಿನಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ ಎಂಬುದರ ಕುರಿತು ಪ್ರತಿಕ್ರಿಯಿಸಿದ ಅವರು, 2013ರಿಂದಲೇ ಈ ಪ್ರಯತ್ನ ನಡೆದಿದೆ. 2018ರಲ್ಲಿ ಜನ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಮತ್ತೆ ಅಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಮತ್ತೆ ಜನ ಪಾಠ ಕಲಿಸುತ್ತಾರೆ ಎಂದರು.