ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಂಚಾರ ದಟ್ಟಣೆ ತೆರಿಗೆ ಹಾಕುವ ಕುರಿತಂತೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಯಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.ಕೆಲದಿನಗಳ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಕಾರುಗಳಲ್ಲಿ ಒಬ್ಬರೇ ಸಂಚರಿಸುವವರಿಗೆ ಸಂಚಾರ ದಟ್ಟಣೆ ತೆರಿಗೆ ಅಥವಾ ಶುಲ್ಕ ವಿಧಿಸುವ ಕುರಿತಂತೆ ಸಲಹೆಗಳು ಬಂದಿದ್ದವು. ಆದರೆ, ಅದರ ಬಗ್ಗೆ ಸರ್ಕಾರ ಯಾವುದೇ ಚರ್ಚೆ ನಡೆಸಿಲ್ಲ. ಆದರೂ, ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳಲ್ಲಿ, ಸರ್ಕಾರ ಸಂಚಾರ ದಟ್ಟಣೆ ತೆರಿಗೆ ವಿಧಿಸಲು ಮುಂದಾಗಿದೆ ಎಂದು ವರದಿಯಾಗಿತ್ತು. ಈ ಕುರಿತು ವಿರೋಧ ಪಕ್ಷದ ನಾಯಕರು, ಸರ್ಕಾರವನ್ನು ಟೀಕಿಸಿದ್ದರು.
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಡಿ.ಕೆ. ಶಿವಕುಮಾರ್, ಅದೆಲ್ಲವೂ ಸುಳ್ಳು. ಕೆಲ ಉದ್ಯಮಿಗಳು ಬೆಂಗಳೂರಿನ ನಾಗರಿಕರಿಗೆ ಒಳ್ಳೆಯದಾಗಲಿ ಎಂದು ಸಲಹೆ ನೀಡಿದ್ದಾರೆ. ಬೆಂಗಳೂರಿನ ಬಗ್ಗೆ ಆಸಕ್ತಿ ಇರುವವರು ಕೆಲ ಸಲಹೆ ನೀಡುತ್ತಾರೆ. ನಾವು ಆ ಸಲಹೆಗಳನ್ನು ಪರಿಶೀಲನೆ ಮಾಡುತ್ತೇವೆ. ಆದರೆ, ಅದನ್ನು ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಕೇಂದ್ರ ಸರ್ಕಾರದ ಮುಂದೆ ಆ ಪ್ರಸ್ತಾಪವಿರಬೇಕು. ನಮ್ಮ ಮುಂದೆ ಯಾವುದೇ ಚರ್ಚೆ ಅಥವಾ ಪ್ರಸ್ತಾವನೆಯಿಲ್ಲ ಎಂದು ಹೇಳಿದರು.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಸಂಚಾರ ದಟ್ಟಣೆ ತೆರಿಗೆ ವಿಧಿಸಲು ಮುಂದಾಗಿರುವ ಸರ್ಕಾರ ದಿವಾಳಿಯಾಗಿದೆ ಎಂದು ಬಿಜೆಪಿ ಆರೋಪ ಸರಿಯಲ್ಲ. ಬಿಜೆಪಿಯೇ ದಿವಾಳಿಯಾಗಿದೆ. ಅವರಿಗೆ ಸರ್ಕಾರದ ಮೇಲೆ ಆರೋಪಿಸಲು ಯಾವುದೇ ವಿಷಯಗಳೂ ಉಳಿದಿಲ್ಲ. ಧರ್ಮಸ್ಥಳ ವಿಚಾರದಲ್ಲಿ ಅವರು ಯಾವ ರೀತಿ ನಡೆದುಕೊಂಡರು ಎಲ್ಲರಿಗೂ ತಿಳಿದಿದೆ. ಕೊನೆಗೆ ವೀರೇಂದ್ರ ಹೆಗ್ಗಡೆ ಅವರೇ ಎಸ್‌ಐಟಿ ರಚನೆಗೆ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಆ ವಿಚಾರದ ಬಗ್ಗೆ ಸರ್ಕಾರವನ್ನು ಟೀಕಿಸಲು ಬಿಜೆಪಿಗೆ ಆಗುತ್ತಿಲ್ಲ. ಹೀಗಾಗಿ ಈಗ ಸಂಚಾರ ದಟ್ಟಣೆ ತೆರಿಗೆ ಎಂದು ಟೀಕಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಹೊರವರ್ತುಲ ರಸ್ತೆಗೆ ಹೆಚ್ಚಿನ ಬಿಎಂಟಿಸಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತೇವೆ. ಸಾರ್ವಜನಿಕ ಸಾರಿಗೆ ಬಳಸುವಂತೆ ಜನರಲ್ಲಿ ಮನವಿ ಮಾಡುತ್ತೇವೆ. ಇನ್ನು, ಜನರು ಕೂಡ ಸಂಚಾರ ದಟ್ಟಣೆ ಇರುವಾಗ ಒಬ್ಬರೇ ಕಾರಿನಲ್ಲಿ ಸಂಚರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.