ಮಾಜಿ ಸೈನಿಕನ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಪೊಲೀಸರ ಬಂಧನ, ಅಮಾನತು

KannadaprabhaNewsNetwork |  
Published : Oct 01, 2025, 01:00 AM IST
30ಡಿಡಬ್ಲೂಡಿ6ಮಾಜಿ ಸೈನಿಕನ ಮೇಲಿನ ಹಲ್ಲೆ ಖಂಡಿಸಿ ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸರ ವಿರುದ್ಧ ನಡೆದ ಪ್ರತಿಭಟನೆ.  | Kannada Prabha

ಸಾರಾಂಶ

ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಮೇಲೆ ಸೆ. 28ರ ರಾತ್ರಿ 11ಕ್ಕೆ ಮೆಸ್‌ ಬಂದ್‌ ಮಾಡಿಸುವ ವಿಚಾರವಾಗಿ ಹಲ್ಲೆಯಾಗಿತ್ತು. ರಾಮಪ್ಪ ಹಾಗೂ ಆತನ ಪತ್ನಿ ನೀಡಿದ ದೂರಿನ ಅನ್ವಯ ಉಪನಗರ ಠಾಣೆಯ ಎಎಸೈ ವಿದ್ಯಾನಂದ ಸುಬೇದಾರ ಹಾಗೂ ಕಾನ್‌ಸ್ಟೆಬಲ್‌ ರಾಚಪ್ಪ ಕಣಬೂರ ಎಂಬುವರನ್ನು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಅಮಾನತು ಮಾಡಿದ್ದಾರೆ.

ಧಾರವಾಡ:

ಮೆಸ್‌ ಬಂದ್‌ ಮಾಡುವ ವಿಚಾರವಾಗಿ ಮಾಜಿ ಸೈನಿಕ ಹಾಗೂ ಉಪ ನಗರ ಪೊಲೀಸರ ಮಧ್ಯೆ ನಡೆದ ಮಾರಾಮಾರಿ ಪ್ರಕರಣದಲ್ಲಿ ಉಪನಗರ ಠಾಣೆ ಇಬ್ಬರು ಪೊಲೀಸರ ತಲೆದಂಡವಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇಲ್ಲಿಯ ಸಪ್ತಾಪುರದ ಡಾಲ್ಫಿನ್‌ ಹೋಟೆಲ್‌ ಬಳಿಯ ಸೈನಿಕ ಹೆಸರಿನ ಮೆಸ್‌ ನಡೆಸುತ್ತಿದ್ದ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಮೇಲೆ ಸೆ. 28ರ ರಾತ್ರಿ 11ಕ್ಕೆ ಮೆಸ್‌ ಬಂದ್‌ ಮಾಡಿಸುವ ವಿಚಾರವಾಗಿ ಹಲ್ಲೆಯಾಗಿತ್ತು. ರಾಮಪ್ಪ ಹಾಗೂ ಆತನ ಪತ್ನಿ ನೀಡಿದ ದೂರಿನ ಅನ್ವಯ ಉಪನಗರ ಠಾಣೆಯ ಎಎಸೈ ವಿದ್ಯಾನಂದ ಸುಬೇದಾರ ಹಾಗೂ ಕಾನ್‌ಸ್ಟೆಬಲ್‌ ರಾಚಪ್ಪ ಕಣಬೂರ ಎಂಬುವರನ್ನು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಅಮಾನತು ಮಾಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಘಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಅಮಾನತು ಜತೆಗೆ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ದೂರು ಪ್ರತಿದೂರು:

ಇದೇ ವೇಳೆ ಎರಡೂ ಕಡೆಗಳಿಂದ ದೂರು-ಪ್ರತಿದೂರು ದಾಖಲಿಸಲಾಗಿದ್ದು, ಇದೀಗ ಈ ಪ್ರಕರಣ ಮತ್ತಷ್ಟು ಮಹತ್ವದ ತಿರುವು ಪಡೆದುಕೊಂಡಿದೆ. ಘಟನೆಯಲ್ಲಿ ಭಾಗಿಯಾದ 10ರಿಂದ 12 ಜನ ಪೊಲೀಸ್ ಸಿಬ್ಬಂದಿ ಪೈಕಿ ಕೆಲವರು ಕುಡಿದ ನಶೆಯಲ್ಲಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವುದು ಸಹ ತೀವ್ರ ಚರ್ಚೆಗೆ ಗ್ರಾಸಗೊಳಿಸಿದೆ. ಪೊಲೀಸರು ಕುಡಿದು ಬಂದು ದಾಂಧಲೆ ನಡೆಸಿರುವ ಬಗ್ಗೆ ಮಾಜಿ ಸೈನಿಕ ದೂರಿದ್ದರೆ, ರಾಮಪ್ಪನೇ ತನ್ನ ಇಬ್ಬರು ಅಳಿಯಂದಿರ ಜತೆ ಸೇರಿ ನಮ್ಮ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ಪ್ರತಿದೂರು ದಾಖಲಿಸಿದ್ದಾರೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಉಲ್ಲಂಘಿಸಿದವರು ಯಾರೇ ಇರಲಿ, ಎಷ್ಟೇ ಜನರಿರಲಿ ಕ್ರಮ ಜರುಗಿಸುವುದಾಗಿ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

ಮಹಿಳೆ ಜತೆಗೂ ಅಸಭ್ಯ ವರ್ತನೆ:

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಪ್ಪನ ಪತ್ನಿ ಗೀತಾ ನಿಪ್ಪಾಣಿ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸೆ. 28ರಂದು 11ರ ಹೊತ್ತಿಗೆ ಇಬ್ಬರು ಪೊಲೀಸರು ಮೆಸ್ ಬಂದ್‌ ಮಾಡುವಂತೆ ಹೇಳುತ್ತಲೇ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದರು. ನಂತರ ಬಂದ 8-10 ಜನ ಪೊಲೀಸರು ಕುಡಿದ ನಶೆಯಲ್ಲಿ ಬಂದು ರಾಮಪ್ಪ ಹಾಗೂ ಅವರ ಅಳಿಯಂದಿರಾದ ರೋಹಿತ್, ಅಕ್ಷಯನ ಮೇಲೆ ಹಲ್ಲೆ ನಡೆಸಿದ್ದಾರೆ. ತಮ್ಮ ಬಟ್ಟೆ ಎಳೆದಾಡಿ, ಅಲ್ಲಿರುವ ಸಿಸಿ ಕ್ಯಾಮೆರಾ ಧ್ವಂಸಗೊಳಿಸಿ ಸಾಕ್ಷಿನಾಶ ಮಾಡಿದ್ದಾರೆ. ಜತೆಗೆ 4 ಮೊಬೈಲ್‌ ಕಸಿದುಕೊಂಡು ರಕ್ತಸ್ರಾವ ಆಗುತ್ತಿದ್ದ ರಾಮಪ್ಪನನ್ನು ಆಸ್ಪತ್ರೆಗೆ ಸಾಗಿಸಲು ಅಡ್ಡಿಪಡಿಸಿದ್ದಾರೆ ಎಂದು ದೂರಿದ್ದಾರೆ.

ಮೊದಲು ಹಲ್ಲೆ ಮಾಡಿದ್ದು ರಾಮಪ್ಪ:

ಮೆಸ್ ಬಂದ ಮಾಡುವಂತೆ ಹೇಳಿದಾಗ ಇದನ್ನು ಕೇಳಲು ನೀವ್ಯಾರು ಎಂದು ಅವಾಚ್ಯವಾಗಿ ನಿಂದಿಸಿದ ರಾಮಪ್ಪ ಬಂದ್ ಮಾಡುವುದಿಲ್ಲ ಎಂದು ವಾದಿಸಿದನು. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ನಮ್ಮ ಮೇಲೆಯೇ ಮೊದಲು ಹಲ್ಲೆ ಮಾಡಿದ್ದಾರೆ. ನಾನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೆಳಗೆ ಕೆಡವಿ ಗುದ್ದಿದರು. ಎಎಸ್‌ಐ ಬಿಡಿಸಲು ಹೋದಾಗ ಲಾಠಿ ಕಸಿದುಕೊಂಡು ಅವರ ಮೇಲೆಯೂ ಹಲ್ಲೆ ನಡೆಸಿ ಜೀವ ಬೆದರಿಕೆ ಕೂಡ ಹಾಕಿದರು ಎಂದು ಕಾನ್‌ಸ್ಟೆಬಲ್‌ ರಾಚಪ್ಪ ನೀಡಿದ ದೂರಿನಲ್ಲಿ ವಿವರಿಸಿದ್ದಾನೆ. ಏತನ್ಮಧ್ಯೆ ಮಾಜಿ ಸೈನಿಕನ ಮೇಲೆ ನಡೆದ ಹಲ್ಲೆ ಖಂಡಿಸಿ ನಿವೃತ್ತ ಯೋಧರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿದ ಪೊಲೀಸರನ್ನು ಕೂಡಲೇ ನೌಕರಿಯಿಂದ ವಜಾಗೊಳಿಸಬೇಕು ಅಥವಾ ಬಂಧಿಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.

ರಾಮಪ್ಪನ ಮೇಲಿವೆ ಮೂರು ಎಫ್ಐಆರ್‌..

ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ವಿರುದ್ಧ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಮೂರು ಎಫ್ಐಆರ್‌ ಗಳಿರುವುದು ಸಹ ಬೆಳಕಿಗೆ ಬಂದಿದೆ. 2011 ರಲ್ಲಿ ಅವರ ಪತ್ನಿ ವರದಕ್ಷಿಣೆ ಕಿರುಕುಳದ ಕೇಸು ದಾಖಲಿಸಿದ್ದರೆ, 2013 ಹಾಗೂ 2016 ರಲ್ಲಿ ಮತ್ತೆರಡು ಪ್ರಕರಣಗಳು ಬೇರೆ ಬೇರೆಯವರ ಕಡೆಯಿಂದ ದಾಖಲಾಗಿವೆ. ಪೊಲೀಸರು ತನಿಖೆಯ ವೇಳೆ ಇದನ್ನು ಪತ್ತೆ ಹಚ್ಚಿದ್ದಾರೆ. ಒಂದು ಕಡೆ ಪೊಲೀಸರು ಹೇಗೆ ತಮ್ಮ ಗೆರೆಯನ್ನು ದಾಟದೇ ಕರ್ತವ್ಯ ನಿರ್ವಹಿಸಬೇಕೋ ಅದೇ ರೀತಿ ಸಾರ್ವಜನಿಕರು ಸಹ ತಮ್ಮ ವ್ಯಾಪ್ತಿ ಮೀರದೇ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಕರ್ತವ್ಯ ನಿರ್ವಹಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ