ಈರುಳ್ಳಿ ದರ ₹500ಕ್ಕೆ ಕುಸಿತ: ರೈತ ಕಂಗಾಲು

KannadaprabhaNewsNetwork |  
Published : Oct 01, 2025, 01:00 AM IST
onion 1 | Kannada Prabha

ಸಾರಾಂಶ

ಬೇಡಿಕೆಗಿಂತ ಅಧಿಕ ಪೂರೈಕೆ, ನೆರೆ ರಾಜ್ಯ, ವಿದೇಶಗಳಿಗೆ ರಫ್ತು ಆಗದಿರುವ ಹಿನ್ನೆಲೆ ಹಾಗೂ ಮಳೆಯಿಂದ ಬೆಳೆ ಹಾನಿಯಾದ ಪರಿಣಾಮ ರಾಜ್ಯದಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿದಿದೆ. ಇದು ಗ್ರಾಹಕರಿಗೆ ಖುಷಿ ನೀಡಿದರೂ ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ.

ಮಯೂರ್‌ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೇಡಿಕೆಗಿಂತ ಅಧಿಕ ಪೂರೈಕೆ, ನೆರೆ ರಾಜ್ಯ, ವಿದೇಶಗಳಿಗೆ ರಫ್ತು ಆಗದಿರುವ ಹಿನ್ನೆಲೆ ಹಾಗೂ ಮಳೆಯಿಂದ ಬೆಳೆ ಹಾನಿಯಾದ ಪರಿಣಾಮ ರಾಜ್ಯದಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿದಿದೆ. ಇದು ಗ್ರಾಹಕರಿಗೆ ಖುಷಿ ನೀಡಿದರೂ ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಾರುಕಟ್ಟೆಗೆ ತಂದು ನಷ್ಟದಲ್ಲಿ ಮಾರುವ ಬದಲು ಕೊಯ್ಲು ಮಾಡದೆ ಜಮೀನಿನಲ್ಲೇ ಹಾಗೆಯೇ ಈರುಳ್ಳಿ ಬಿಡತೊಡಗಿದ್ದಾರೆ.

ರಾಜ್ಯದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಯಶವಂತಪುರ ಎಪಿಎಂಸಿಯಲ್ಲಿ ಹೊಸ ಈರುಳ್ಳಿ ಕ್ವಿಂಟಲ್‌ಗೆ ಸರಾಸರಿ ₹500- ₹1500ಕ್ಕೆ ಮಾರಾಟ ಆಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ₹10-12 ಬೆಲೆಯಿದೆ (ಹಳೆ ಈರುಳ್ಳಿ ₹30). ಕಳೆದ ವರ್ಷ ಇದೇ ವೇಳೆ ಬೆಳೆ ಕಡಿಮೆಯಿದ್ದ ಕಾರಣ ಕ್ವಿಂಟಲ್‌ಗೆ ₹4000 - ₹7000 ವರೆಗೂ ಬೆಲೆಯಿತ್ತು.

ಒಂದು ಕ್ವಿಂಟಲ್‌ ಈರುಳ್ಳಿ ಬೆಳೆಯಲು ಬಿತ್ತನೆಯಿಂದ ಮಾರುಕಟ್ಟೆಗೆ ತರುವತನಕ ₹1200 - ₹1400 ಖರ್ಚಾಗುತ್ತದೆ. ಆದರೆ, ಈಗ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಒಂದೆರಡು ಲಾಟ್‌ಗೆ ಮಾತ್ರ ₹1500 ದರ ಸಿಗುತ್ತಿದೆ. ಬಹುತೇಕ ₹500 - ₹800 ಗೆ ಕ್ವಿಂಟಲ್ ಬೆಲೆಯಿದ್ದು, ನಷ್ಟ ಅನುಭವಿಸುತ್ತಿದ್ದೇವೆ ಎಂದು ಮಾರುಕಟ್ಟೆಯಲ್ಲಿ ರೈತರು ಅಳಲು ತೋಡಿಕೊಂಡರು.

‘ಕನ್ನಡಪ್ರಭ’ ಜತೆ ಮಾತನಾಡಿದ ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಬಿ.ರವಿಶಂಕರ್‌ ಅವರು, ಸೋಮವಾರ ಬೆಂಗಳೂರಿನ ಯಶವಂತಪುರ, ದಾಸನಪುರ ಮಾರುಕಟ್ಟೆ ಸೇರಿ 340 ಲಾರಿಗಳಲ್ಲಿ 78 ಸಾವಿರ ಚೀಲ ಈರುಳ್ಳಿ ಬಂದಿದೆ. ಹಿಂದೆ 500-600 ಲಾರಿಗಳಲ್ಲಿ ಈರುಳ್ಳಿ ಬಂದರೂ ಬೆಲೆ ಕುಸಿಯುತ್ತಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ವಿರುದ್ಧವಾಗಿದೆ. ರಾಜ್ಯದ ಈರುಳ್ಳಿ ತಮಿಳುನಾಡು ಬಿಟ್ಟರೆ ಬೇರೆ ರಾಜ್ಯಗಳಿಗೆ ರಫ್ತಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಸಾಕಷ್ಟು ಹಳೆಯ ಈರುಳ್ಳಿ ಸ್ಟಾಕ್‌ ಇದೆ. ಅಲ್ಲಿಂದ ಒಡಿಶಾ, ಪಶ್ಚಿಮ ಬಂಗಾಲ ಸೇರಿ ಸಂಪೂರ್ಣ ಉತ್ತರಭಾರತಕ್ಕೆ ಪೂರೈಕೆ ಆಗುತ್ತದೆ. ಕೇರಳಕ್ಕೂ ಅಲ್ಲಿಯದೇ ಈರುಳ್ಳಿ ಬರುತ್ತಿದೆ. ಆಂಧ್ರದಲ್ಲಿ ಬೆಳೆಯಿದ್ದು, ತಮಿಳುನಾಡಿಗೆ ಅಲ್ಲಿಂದಲೂ ಬೆಳೆ ಬರುತ್ತಿದೆ ಎಂದು ತಿಳಿಸಿದರು.

ಬೆಲೆ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ ವರ್ಷ ಕೇಂದ್ರ ಸರ್ಕಾರ ದಾಸ್ತಾನು ಇಟ್ಟಿದ್ದ ಈರುಳ್ಳಿಯನ್ನು ಬಿಹಾರ, ಉತ್ತರಪ್ರದೇಶ ಮಾರುಕಟ್ಟೆಗೆ ಕಳಿಸುತ್ತಿದೆ. ಬಾಂಗ್ಲಾದೇಶ ಸೇರಿ ನೆರೆ ದೇಶಕ್ಕೆ ಕಳಿಸುವಷ್ಟು ಗುಣಮಟ್ಟದ ಈರುಳ್ಳಿ ನಮ್ಮಲ್ಲಿ ಲಭ್ಯವಿಲ್ಲ. ಹೀಗಾಗಿ ರಾಜ್ಯದ ಈರುಳ್ಳಿ ರಾಜ್ಯದಲ್ಲೇ ಮಾರಾಟ ಆಗುವಂತಾಗಿದ್ದು, ಹಿಂದಿನ ವರ್ಷದ ಬೆಲೆ ಗಮನಿಸಿ ರೈತರು ಹೆಚ್ಚಾಗಿ ಬೆಳೆದಿರುವುದು ದರ ಕುಸಿತವಾಗಲು ಕಾರಣವಾಗಿದೆ ಎಂದು ಸಂಘ ತಿಳಿಸಿದೆ.ರಾಜ್ಯ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಿ ತಕ್ಷಣ ಕ್ವಿಂಟಲ್‌ಗೆ ₹ 2000 ನಂತೆ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿ ಮಾಡಬೇಕು.

- ಸಿದ್ದೇಶ್ ಉತ್ತಂಗಿ, ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷನವೆಂಬರ್, ಡಿಸೆಂಬರ್‌ಗೆ ಬರಬೇಕಿದ್ದ ಎರಡನೇ ಬೆಳೆ ಮಳೆಯಿಂದ ಹಾಳಾಗಿದೆ. ಆದರೂ ಕೂಡ ಬೇಡಿಕೆಗಿಂತ ಹೆಚ್ಚು ಪೂರೈಕೆ ಇದ್ದು, ಈರುಳ್ಳಿ ಬೆಲೆ ಸದ್ಯ ಚೇತರಿಸಿಕೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

- ಬಿ.ರವಿಶಂಕರ್, ಬೆಂಗಳೂರು ಈರುಳ್ಳಿ, ಆಲುಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ

ಈಗ ಮಾರುಕಟ್ಟೆಗೆ ಹೆಚ್ಚಾಗಿ ಉತ್ತರ ಕರ್ನಾಟಕದ ವಿಜಯನಗರ, ಬಳ್ಳಾರಿಯಿಂದ ಹಿಡಿದು ಚಿತ್ರದುರ್ಗ, ಚಳ್ಳೆಕೆರೆವರೆಗಿನ ರೈತರು ಈರುಳ್ಳಿ ತರುತ್ತಿದ್ದಾರೆ. ಒಂದು ಎಕರೆಗೆ 50 ಸಾವಿರದಿಂದ 1ಲಕ್ಷದ ವರೆಗೆ ಖರ್ಚು ಮಾಡಿರುವ ರೈತರು ಈಗಷ್ಟೇ ಕಟಾವು ಮಾಡಿ ಈರುಳ್ಳಿ ಮಾರಾಟ ಮಾಡಬೇಕು‌ ಎಂದುಕೊಂಡಿದ್ದರು. ಅಷ್ಟರಲ್ಲಿ ಬೆಲೆ ಕುಸಿತವಾಗಿದೆ. ಒಂದು ಚೀಲ ಈರುಳ್ಳಿಯನ್ನು ದಲ್ಲಾಳಿಗಳು ಕೇವಲ 50 ರು.ಗೆ ಕೇಳುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ