ಮುದ್ದೇಬಿಹಾಳ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ಸರ್ಕಾರ ದರ್ಬಾರ್ ನಡೆಸಿದ್ದು, ಜನರ ಲೂಟಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಶನಿವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಬಳಿಕ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.
ಕಿಸಾನ್ ಸಮ್ಮಾನ್ ಯೋಜನೆ ಅಡಿ ನಾನು ₹4000 ಕೊಡುತ್ತಿದ್ದೆ, ನೀವ್ಯಾಕೆ (ಕಾಂಗ್ರೆಸ್) ಬಂದ್ ಮಾಡಿದಿರಿ? ಭಾಗ್ಯ ಲಕ್ಷ್ಮೀ ಯೋಜನೆ ಯಾಕೆ ನಿಲ್ಲಿಸಿದಿರಿ. ಸುವರ್ಣ ಭೂಮಿ ಯೋಜನೆ ನಿಲ್ಲಿಸಿದಿರಿ ಎಂದು ಆಕ್ರೋಶ ಹೊರಹಾಕಿದರು.
ಜನರ ಆಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿರೋಧಿ ಅಲೆ ಹೆಚ್ಚಾಗಿದೆ ಎಂದ ಅವರು, ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ. ಶುಕ್ರವಾರ ಮತದಾನ ನಡೆದ ಕ್ಷೇತ್ರಗಳಲ್ಲಿ ಬಿಜೆಪಿ 14 ಕ್ಷೇತ್ರಗಳಲ್ಲಿಯೂ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ಹಣ ಬಲ, ಜಾತಿ ಬಲ, ತೋಳ್ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ನವರು ನಂಬಿದ್ದರು. ಕಾಂಗ್ರೆಸ್‌ಗೆ ಪ್ರಚಾರ ಮಾತ್ರ ಬೇಕಿದೆ. ಈ ಸರ್ಕಾರಕ್ಕೆ ಜನರು ಕೊಟ್ಟ ತೆರಿಗೆ ಹಣ ಏನಾಯಿತು? ವಿದ್ಯುತ್ ದರ ಏರಿಕೆಯಾಗಿದೆ. ಎಲ್ಲಾ ಯೋಜನೆಗಳು ನಿಂತು ಹೋಗಿವೆ. ಇದನ್ನು, ರಾಜ್ಯದ ಜನರು ಅರ್ಥೈಸಿಕೊಳ್ಳಬೇಕಿದೆ ಎಂದರು.
ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಗೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದರೂ ಯಾರೂ ಬರಲಿಲ್ಲ. ಅವರಿಗೆ ರಾಮನ ಬಗ್ಗೆ ಭಕ್ತಿಯಿಲ್ಲ. ಅದು ಅವರಿಗೆ ಇಷ್ಟವೂ ಇರಲಿಲ್ಲ. ಹಾಗಾಗಿ ಈ ಕಾಂಗ್ರೆಸ್‌ನವರಿಗೆ ತಕ್ಕ ಪಾಠ ಕಲಿಸಬೇಕು.
- ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ