- ಹೊಸ ಜಾತಿಗಳ ಸೃಷ್ಟಿ ನೋಡಿದರೆ ಸಾಮೂಹಿಕ ಮತಾಂತರಕ್ಕೆ ಹುನ್ನಾರ ನಡೆಯುವ ಅನುಮಾನ ಮೂಡಿದೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ಆರೋಪ ಮಾಡುತ್ತಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಕಳ್ಳತನ ಮಾಡುತ್ತಿದೆ. ಜಾತಿ ಕಳ್ಳತನ ಎನ್ನುವುದೇ ಹೊಸದು. ರಾಹುಲ್ ಗಾಂಧಿ ಅವರ ಸಹಮತಿ ಮೇರೆಗೆ ರಾಜ್ಯದಲ್ಲಿ ಜಾತಿ ಕಳ್ಳತನ ನಡೆಯುತ್ತಿದೆಯೇ ಅಥವಾ ರಾಹುಲ್ ಗಾಂಧಿಯವರೇ ಜಾತಿ ಕಳ್ಳತನದ ರೂವಾರಿಗಳೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೊಸ ಜಾತಿಗಳ ಸೃಷ್ಟಿಕರ್ತ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ಹೊಸ ಹೊಸ ಜಾತಿಗಳ ಸೃಷ್ಟಿ ನೋಡಿದರೆ ಸಾಮೂಹಿಕವಾಗಿ ಮತಾಂತರಕ್ಕೆ ಹುನ್ನಾರ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದರು.ರಾಜ್ಯದಲ್ಲಿ ನೋಟಿಫೈಟ್ ಜಾತಿಗಳು 877 ಇವೆ. ಆದರೆ, ಕಾಂತರಾಜು ವರದಿಯಲ್ಲಿ 400ಕ್ಕೂ ಹೆಚ್ಚು ಜಾತಿಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಯಿತು. ಇದೀಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಮತ್ತೆ ಹೊಸದಾಗಿ 200 ಜಾತಿ ಗಳನ್ನು ಸೇರ್ಪಡೆಗೊಳಿಸಲಾಗಿದೆ. ಕ್ರೈಸ್ತ ಮತದೊಂದಿಗೆ ಹಿಂದು ಜಾತಿಗಳನ್ನು ಸೇರಿಸಿ ಹೊಸ ಜಾತಿಗಳನ್ನು ಸೃಷ್ಟಿ ಮಾಡುತ್ತಿ ರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಸಿಎಂ ಸಿದ್ದರಾಮಯ್ಯ ಕಾಂತರಾಜು ವರದಿಯನ್ನು ಅನುಷ್ಠಾನ ಮಾಡುವುದಾಗಿ ಹೇಳಿದ್ದರು. ಆದರೆ, ವರದಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆದರು. ಒಳ ಮೀಸಲಾತಿಗೆ ನಾಗಮೋಹನ ದಾಸ್ ನೇತೃತ್ವದಲ್ಲಿ ಎಸ್ಸಿ ಎಸ್ಟಿ ವರ್ಗಗಳ ಸಮೀಕ್ಷೆ 60 ದಿನಗಳ ಕಾಲ ನಡೆಯಿತು. ಕೇವಲ ಒಂದು ಕೋಟಿ ಜನರನ್ನು 60 ದಿನಗಳ ಕಾಲ ಸಮೀಕ್ಷೆ ಮಾಡಲಾಯಿತು. ಇದೀಗ ಕೇವಲ 15 ದಿನದಲ್ಲಿ ರಾಜ್ಯದ ಏಳು ಕೋಟಿ ಜನರನ್ನು ಹೇಗೆ ಸಮೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿತರಿದ್ದರು.-- ಬಾಕ್ಸ್ --ಹೊಸ ಕಮ್ಯುನಿಷ್ಟ್ ಪ್ರಭಾವಹಿಂದೆ ಕಮ್ಯುನಿಷ್ಟರು ವರ್ಗ ಸಂಘರ್ಷ ಹುಟ್ಟು ಹಾಕಲು ಯತ್ನಿಸುತ್ತಿದ್ದರು. ಆದರೆ, ಅದರಲ್ಲಿ ಅವರು ವಿಫಲರಾದರು. ಇದೀಗ ಹೊಸ ಕಮ್ಯುನಿಷ್ಟರು ಶ್ರದ್ಧೆ ಇರುವ ಕಡೆ ಅಶ್ರದ್ಧೆ ಸೃಷ್ಟಿಸುತ್ತಿದ್ದಾರೆ. ಇಂಥವರ ಪ್ರಭಾವ ಸಿಎಂ ಸಿದ್ದರಾಮಯ್ಯ ಅವರ ಮೇಲಾದಂತಿದೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.