ಶಿರಸಿ; ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ಮಾರಕ. ಈ ಸರ್ಕಾರ ಇರುವವರೆಗೂ ಜನರು ಕಷ್ಟಪಡುವುದು ತಪ್ಪುವುದಿಲ್ಲ ಎಂದು ಶಾಸಕ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ಅವರು ಶನಿವಾರ ಶಿರಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ತುಷ್ಟೀಕರಣಕ್ಕೆ ಏನು ಬೇಕಾದರೂ ಮಾಡಬಲ್ಲದು. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಪಂಚ ಗ್ಯಾರಂಟಿ ನೀಡಿದ್ದರಿಂದ ನಮ್ಮ ಸರ್ಕಾರ ಸುಭದ್ರವಾಗಿದ್ದು, ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಇಲ್ಲದೇ ರಾಜ್ಯದಲ್ಲಿ ಸರ್ಕಾರ ಇದೆ ಎಂದು ಅನಿಸುವುದಿಲ್ಲ. ಕೊಲೆ, ಸುಲಿಗೆ ಮೀತಿ ಮೀರಿದೆ. ಮುಖ್ಯಮಂತ್ರಿಯು ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಕೈ ಮಾಡಿದ್ದಾರೆ. ನಮಗೆ ರಕ್ಷಣೆ ನೀಡುವ ಪೊಲೀಸರನ್ನು ನಿಷ್ಕ್ರಿಯಗೊಳಿಸುವ ಕೆಲಸ ಆಗುತ್ತಿದೆ. ಇದೇ ಮುಂದುವರೆದರೆ ರಾಜ್ಯ ಅದೋಗತಿಗೆ ಹೋಗುತ್ತದೆ. ₹೧.೧೬ ಸಾವಿರ ಕೋಟಿ ಸಾಲ ತೆಗೆದುಕೊಳ್ಳಲು ಬಜೆಟ್ ಗಾತ್ರ ದೊಡ್ಡದಾಗಿ ಮಾಡಿದ್ದಾರೆ. ಬಜೆಟ್‌ನಲ್ಲಿ ಘೋಷಣೆ ಮಾಡಿರುವುದಕ್ಕೆ ಹಣ ಬಿಡುಗಡೆಯಿಲ್ಲ. ಸರ್ಕಾರದ ಆದೇಶವಾಗಿರುವ ಯೋಜನೆಗೂ ಹಣ ಸಿಗುವುದಿಲ್ಲ. ರಸ್ತೆಗೆ ಹಣವಿಲ್ಲ. ಕಟ್ಟಡಗಳ ನಿರ್ಮಾಣಕ್ಕೆ ಹಣವಿಲ್ಲ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೆ ಎಂದು ಹೇಳಿದರು.ದೇಶ ವಿಶೇಷ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿದೆ. ಭಾರತ-ಪಾಕಿಸ್ತಾನ ಯುದ್ಧ ಬಹಳ ದಿನಗಳಿಂದ ನಿರೀಕ್ಷೆ ಮಾಡಲಾಗಿತ್ತು. ಈಗಾಗಲೇ ಪ್ರಾರಂಭವಾಗಿದ್ದು, ಇಡೀ ದೇಶ ಏಕ ವ್ಯಕ್ತಿಯ ರೀತಿಯಲ್ಲಿ ಪಾಕಿಸ್ತಾನ ವಿರುದ್ಧ ಎದ್ದುನಿಲ್ಲಬೇಕಿದೆ. ಜಗತ್ತಿನ ಮುಸಲ್ಮಾನರು ಇಸ್ಲಾಂ ಉಳಿವಿಗಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಬೇಕು ಎಂದು ಅಲ್‌ಖೈದಾ ಮುಖಂಡರು ಈಗಾಗಲೇ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಆಂತರಿಕವಾಗಿ ಪಾಕಿಸ್ತಾನಿ ಸ್ಲೀಪರ್ ಸೆಲ್‌ಗಳಿದ್ದಾರೆ. ಅವರ ಮೇಲೆ ವಿಶೇಷ ನಿಗಾ ವಹಿಸಬೇಕಾದ ಅವಶ್ಯಕತೆ ಇದೆ. ದೇಶದ ಗಡಿಯಲ್ಲಿ ಸೈನಿಕರು ಹೋರಾಟ ಮಾಡುತ್ತಿದ್ದಾರೆ. ಪೊಲೀಸ್ ವ್ಯವಸ್ಥೆ ಗಮನವಹಿಸಬೇಕು. ಸಾರ್ವಜನಿಕರು ಮೈ ಎಲ್ಲ ಕಣ್ಣಾಗಿಸಿಕೊಳ್ಳಬೇಕು. ರಾಷ್ಟ್ರದ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಎಂದರು.
ಈ ವೇಳೆ ಶಿರಸಿ ಗ್ರಾಮೀಣ ಮಂಡಳದ ಮಾಜಿ ಅಧ್ಯಕ್ಷ ನರಸಿಂಹ ಹೆಗಡೆ ಬಕ್ಕಳ ಮತ್ತಿತರರು ಇದ್ದರು.ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದರಿಂದ ಕಡಿಮೆ ಸ್ಥಾನ ದೊರೆಯಿತು. ಆಸೆ-ಆಮಿಷಗಳಿಂದ, ಗ್ಯಾರಂಟಿ ಯೋಜನೆಗಳಿಂದ ಅವರಿಗೆ ಹೆಚ್ಚು ಸ್ಥಾನ ಲಭಿಸಿದೆ. ಇದು ಕಾಂಗ್ರೆಸ್‌ಗೆ ನಿಜವಾದ ಗೆಲುವಲ್ಲ. ನಮಗೆ ನಿಜವಾದ ಸೋಲಲ್ಲ ಎನ್ನುತ್ತಾರೆ ಶಾಸಕ ಅರಗ ಜ್ಞಾನೇಂದ್ರ.