ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಿಎಂನಿಂದ ಸಚಿವರು, ಶಾಸಕರ ತನಕ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನಡೆದ ಮುಡಾ ಹಗರಣದಿಂದ ಹಿಡಿದು ಡಿ.ಕೆ.ಶಿವಕುಮಾರ್ ಸಿಎಂಯಾಗುತ್ತಲೇ ಕೈಗೆತ್ತಿಕೊಂಡ ಬಿಡದಿ ಟೌನ್‌ಶಿಪ್‌ವರೆಗಿನ ನಿದರ್ಶನ ಕೊಡಬಹುದು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದ್ದಾರೆ.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಕಳಂಕ ಹೊತ್ತಿರುವ ಸಚಿವರಾದ ಬಿ.ನಾಗೇಂದ್ರ, ಸಂತೋಷ್ ಲಾಡ್‌ರನ್ನು ಸಂಪುಟದಿಂದ ಕೈಬಿಡಬೇಕು, ಸಿಎಂ ಡಿ.ಕೆ.ಶಿವಕುಮಾರ್ ಇವರನ್ನು ಸಂಪುಟದಿಂದ ಕೈ ಬಿಡುವ ತನಕ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಕೋಟ್ಯಂತರ ರುಪಾಯಿ ಹಗರಣ ನಡೆಸಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ, ಡಿಕೆಶಿ ಸಂಪುಟ ರಚನೆ, ವಿಸ್ತರಣೆ ಸಂದರ್ಭದಲ್ಲಿ ಹೈಕಮಾಂಡ್ ನಾಯಕರಿಗೆ ‘ಹಣ’ಕೊಟ್ಟವರಿಗೆ ಮಣೆ ಹಾಕಲಾಗಿದೆ. ರಾಜ್ಯದ ದಲಿತರು, ಬಡವರು, ಕೂಲಿಕಾರ್ಮಿಕರ ಹಣ ಲೂಟಿ ಮಾಡಿದವರಿಗೂ ಮಂತ್ರಿಗಿರಿ ನೀಡಿದೆ, ಇದರ ವಿರುದ್ಧ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದೆ, ಬರುವ ಸೋಮವಾರದಿಂದ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಲಾಡ್‌ರ ಇಲಾಖೆಯಲ್ಲಿ ಕಾರ್ಮಿಕರಿಗೆ ವಿತರಿಸುವ ಕಿಟ್‌ಗಳ ಖರೀದಿಯಲ್ಲಿ ಭಾರಿ ಅಕ್ರಮ ನಡೆಸಿದ್ದಾರೆ. ೫೦೦ ರು. ಮೌಲ್ಯದ ಕಿಟ್‌ಗಳನ್ನು ೨ ಸಾವಿರ ರು.ಗೆ ಖರೀದಿ ಮಾಡುವ ಮೂಲಕ ಭಾರಿ ಕಿಕ್‌ಬ್ಯಾಕ್ ಪಡೆದುಕೊಂಡಿದ್ದಾರೆ. ಇಂತಹ ಭ್ರಷ್ಟ ಸಚಿವರನ್ನು ಕೈಬಿಡುವ ತನಕ ಹೋರಾಟ ನಿಲ್ಲದು ಎಂದು ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಭ್ರಷ್ಟಾಚಾರದ ಕಳಂಕ ಹೊತ್ತ ಸಚಿವರನ್ನು ಸಂಪುಟದಿಂದ ಕೈಬಿಡಲು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ಅನಿರ್ದಿಷ್ಟ ಧರಣಿಯಲ್ಲಿ ಮಾಜಿ ಸಂಸದ, ಶಾಸಕರು, ಪಕ್ಷದ ಜಿಲ್ಲಾ ಪ್ರಮುಖರು ಭಾಗಿಯಾಗಲಿದ್ದಾರೆ. ಹಣ ಪಡೆದು ಮಂತ್ರಿಗಿರಿ ನೀಡಲಾಗಿದೆ. ಕಳಂಕಿತರನ್ನು ಕೈಬಿಡುವವರೆಗೆ ಹೋರಾಟ ನಿಲ್ಲದು ಎಂದು ಹೇಳಿದರು.