ಕುಷ್ಟಗಿ:
ಕಾಂಗ್ರೆಸ್ ಸರ್ಕಾರದ ಧೋರಣೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಹೇಳಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬೂತ್ ಕಮಿಟಿ ಅಧ್ಯಕ್ಷರು ಹಾಗೂ ಸಕ್ರಿಯ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೇಲೆ ಆಡಳಿತ ನಡೆಸುತ್ತಿದ್ದು, ಬೆಲೆ ಏರಿಕೆ ಮೂಲಕ ಬಡಜನರಿಗೆ ಬರೆ ಎಳೆಯುತ್ತಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.ಏ. 22ರಂದು ಸರ್ಕಾರದ ಧೋರಣೆ ಹಾಗೂ ಬೆಲೆ ಏರಿಕೆ ವಿರುದ್ಧ ಕೊಪ್ಪಳದಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದ್ದು ಪ್ರತಿ ವಿಧಾನಸಭಾ ಕ್ಷೇತ್ರದಿಂದ 3000 ಜನರನ್ನು ಕರೆತರಬೇಕೆಂದು ಹೇಳಿದರು.
ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ₹ 60000 ಕೋಟಿ ಬರ ಪರಿಹಾರ ಕೊಟ್ಟಿತ್ತು. ಆದರೆ, ಈ ಸರ್ಕಾರ ಈ ವರೆಗೂ ನೀಡಿಲ್ಲ ಎಂದ ಅವರು, ನಮ್ಮ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರವೆಂದು ಆರೋಪಿಸಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಇದೀಗ 60 ಪರ್ಸೆಂಟ್ ಕಮಿಷನ್ ಪಡೆಯುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿದರು.ಶೈಕ್ಷಣಿಕ ಅಭಿವೃದ್ಧಿಗೆ ನಮ್ಮ ಸರ್ಕಾರ 10 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತ್ತು. ಆದರೆ, ಈ ಸರ್ಕಾರ ಅವುಗಳನ್ನು ಮುಚ್ಚಲು ಹೊರಟಿರುವುದು ವಿಪರ್ಯಾಸದ ಸಂಗತಿ ಎಂದ ಅವರು, ನಮ್ಮ ಸರ್ಕಾರ ಸಾಧನೆಗಳನ್ನು ಜನರಿಗೆ ತಿಳಿಸುವ ಜತೆಗೆ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಮನದಟ್ಟು ಮಾಡಬೇಕೆಂದು ಹೇಳಿದರು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಜೂನ್ ಅಥವಾ ಜುಲೈನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿದ್ದು ಕಾರ್ಯಕರ್ತರು ಇಂದಿನಿಂದಲೇ ಪಕ್ಷ ಸಂಘಟನೆಗೆ ಶ್ರಮಿಸಬೇಕೆಂದು ಕರೆ ನೀಡಿದರು.ಉದ್ದೇಶ ಪೂರ್ವಕವಾಗಿಯೇ ಇತಿಹಾಸದಲ್ಲಿ ಮೊದಲ ಬಾರಿಗೆ 18 ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಲಾಗಿದೆ ಎಂದು ಆರೋಪಿಸಿದ ಶಾಸಕರು, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಪರಿವರ್ತನೆಯಾಗಿವೆ. ಪೊಲೀಸರು ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಬಿಜೆಪಿ ಮುಖಂಡ ತಿಪ್ಪೆರುದ್ರಸ್ವಾಮಿ, ಪ್ರಮುಖರಾದ ಅಮೀನುದ್ದಿನ ಮುಲ್ಲಾ, ಮಹಾಂತೇಶ ಕಲಬಾವಿ, ಫಕೀರಪ್ಪ ಚಳಗೇರಿ, ಶೈಲಜಾ ಬಾಗಲಿ, ಪರಿಮಳ ಶೆಟ್ಟರ್ ಸೇರಿದಂತೆ ಕಾರ್ಯಕರ್ತರು ಇದ್ದರು.