ಮೆಟ್ರೋ ದರ ಏರಿಕೆ ಕುರಿತಂತೆ ರಾಜ್ಯ ಸರ್ಕಾರ ಅನವಶ್ಯಕ ಗೊಂದಲ ಸೃಷ್ಟಿ ಮಾಡುತ್ತಿದೆ. ಬರೀ ಮೆಟ್ರೋ ಮೇಲೆಯೇ ಕಾಂಗ್ರೆಸ್ ಸರ್ಕಾರದ ಕಣ್ಣುಬಿದ್ದಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹರಿಹಾಯ್ದರು.
- ಕಾಂಗ್ರೆಸ್ ಸರ್ಕಾರ ಆಡಿದ್ದೇ ಆಟವಾಗಿದ್ದು, ರಾಜ್ಯದ ಜನ, ಬೆಂಗಳೂರು ಜನ ದಡ್ಡರಲ್ಲ - ನಿಮ್ಮ ತಪ್ಪುಗಳ ಮುಚ್ಚಿಕೊಳ್ಳಲು ಅನವಶ್ಯಕವಾಗಿ ಏನೇನೋ ಹೇಳುತ್ತಿದ್ದೀರಿ ಎಂದು ಟೀಕೆ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಮೆಟ್ರೋ ದರ ಏರಿಕೆ ಕುರಿತಂತೆ ರಾಜ್ಯ ಸರ್ಕಾರ ಅನವಶ್ಯಕ ಗೊಂದಲ ಸೃಷ್ಟಿ ಮಾಡುತ್ತಿದೆ. ಬರೀ ಮೆಟ್ರೋ ಮೇಲೆಯೇ ಕಾಂಗ್ರೆಸ್ ಸರ್ಕಾರದ ಕಣ್ಣುಬಿದ್ದಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹರಿಹಾಯ್ದರು.
ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಮಹರ್ಷಿ ಶ್ರೀ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೆಟ್ರೋ ಯೋಜನೆಯನ್ನು ಇದೇ ಕಾಂಗ್ರೆಸ್ಸಿನವರು ಬಿಳಿ ಆನೆ ಎನ್ನುತ್ತಿದ್ದರು. ಈ ಹಿಂದೆ ಡಾ.ವೀರಪ್ಪ ಮೊಯ್ಲಿ ಸಹ ಇದನ್ನು ಬಿಳಿ ಆನೆ ಅಂತಾ ಹೇಳಿದ್ದರು ಎಂದರು.
ನಿತ್ಯವೂ ಐದಾರು ಲಕ್ಷ ಜನರು ಇದೇ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದವರಿಗೆ ಬರೀ ಮೆಟ್ರೋ ಮೇಲೆ ಕಣ್ಣುಬಿದ್ದಿದ್ದು, ಬಡ, ಮಧ್ಯಮ ವರ್ಗದ ಜನರು ಹೇಗೆ ಓಡಾಡಬೇಕು? ಮೆಟ್ರೋ ದರ ನಿಗದಿಪಡಿಸಿದ್ದು ಭಾರತ ಸರ್ಕಾರದಿಂದಲೇ ಹೊರತು ನಾವಲ್ಲ ಎಂದು ಹೇಳಿದರು.
ಮೆಟ್ರೋ ದರ ಏರಿಕೆಗೆ ಸಂಬಂಧಪಟ್ಟ ಸಚಿವಾಲಯ ತಡೆಯಾಜ್ಞೆ ನೀಡಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಮಾಡಬೇಡಿ ಅಂತಾ ತಡೆಯಾಜ್ಞೆ ನೀಡಿದೆ. ನಿವೃತ್ತ ಅಧಿಕಾರಿಗಳನ್ನು ಸೇರಿಸಿಕೊಂಡು, ರಾಜ್ಯ ಸರ್ಕಾರದವರು ಆಡಿದ್ದೇ ಆಟವಾಗಿದೆ. ಅನವಶ್ಯಕವಾಗಿ ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಏನೇನೋ ಹೇಳುತ್ತಿದ್ದೀರಿ. ಇದು ಒಳ್ಳೆಯದಲ್ಲ ಎಂದು ಸೋಮಣ್ಣ ಎಚ್ಚರಿಸಿದರು.
ಆದೇಶವೆಂದರೆ ಏನು ಎಲ್ಲವೂ ಲಿಖಿತ ರೂಪದಲ್ಲಿಯೇ ಇರುತ್ತದಾ? ಸಂಬಂಧಿಸಿದ ಅಧಿಕಾರಿಗಳು ಹೇಳಿರುತ್ತಾರೆ. ಅವ್ರು ಹೇಳಿಲ್ಲ, ಇವ್ರು ಹೇಳಿಕ್ಕಾ ಅಂತಾ ಜನರ ಮೇಲೆ ಹೊರೆ ಹೇರಬಾರದು. ಮೆಟ್ರೋ ಬಿಳಿಆನೆ ಇದ್ದಂತೆ ಅಂತಾ ಅದೇ ಕಾಂಗ್ರೆಸ್ ಸರ್ಕಾರದಲ್ಲಿ ಬರೆದಿದ್ದರು. ಮೆಟ್ರೋ ಉಪಯುಕ್ತ ಯೋಜನೆಯಾಗಿದೆ. ಅದರ ಮೇಲೆ ಗಧಾಪ್ರಹಾರ ಬೇಡ. ಜನರಿಗೆ ನೀವು ಅನ್ಯಾಯ ಮಾಡಬೇಡಿ. ರಾಜ್ಯ ಜನತೆ, ಬೆಂಗಳೂರಿನ ಜನತೆ ದಡ್ಡರಲ್ಲ ಎಂದು ವಿ.ಸೋಮಣ್ಣ ರಾಜ್ಯ ಸರ್ಕಾರಕ್ಕೆ ಮಾತಿನ ಚಾಟಿ ಬೀಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.