ಸರ್ವಜ್ಞ ಏತ ನೀರಾವರಿ ಯೋಜನೆ ಕಾಂಗ್ರೆಸ್ ಸರ್ಕಾರದಿಂದ ಯಶಸ್ವಿ ಜಾರಿ

KannadaprabhaNewsNetwork |  
Published : Jul 15, 2026, 02:30 AM IST
ಸರ್ವಜ್ಞ ಕೆರೆ ತುಂಬಿಸುವ ಯೋಜನೆಗೆ ಸಾಂಕೇತಿಕವಾಗಿ ಜಿಲ್ಲಾ ಉಸ್ತವಾರಿ ಸಚಿವ ಸತೀಶ ಜಾರಕಿಹೋಳಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಸರ್ವಜ್ಞ ಏತ ನೀರಾವರಿ ಯೋಜನೆ ಜಾರಿಗಾಗಿ ಸುಮಾರು 30 ವರ್ಷಗಳ ಹೋರಾಟದ ಫಲವಾಗಿ ಕಾಂಗ್ರೆಸ್ ನೇತೃತ್ವದ ಸರಕಾರ ಅದಕ್ಕೆ ಸೂಕ್ತ ಅನುದಾನ ನೀಡಿ ಜಾರಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೋಳಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ರಟ್ಟೀಹಳ್ಳಿ: ಸರ್ವಜ್ಞ ಏತ ನೀರಾವರಿ ಯೋಜನೆ ಜಾರಿಗಾಗಿ ಸುಮಾರು 30 ವರ್ಷಗಳ ಹೋರಾಟದ ಫಲವಾಗಿ ಕಾಂಗ್ರೆಸ್ ನೇತೃತ್ವದ ಸರಕಾರ ಅದಕ್ಕೆ ಸೂಕ್ತ ಅನುದಾನ ನೀಡಿ ಜಾರಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೋಳಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಉಕ್ಕಡಗಾತ್ರಿಯ ತುಂಗಾ ಮೇಲ್ದಂಡೆ ಯೋಜನಾ ವಲಯದ ಹಿರೇಕೆರೂರ-ರಟ್ಟೀಹಳ್ಳಿ ಸರ್ವಜ್ಞ ಕೆರೆ ತುಂಬಿಸುವ ಯೋಜನೆಯ ಪರಿವೀಕ್ಷಣೆ ಮಾಡಿ ನಂತರ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದರು.

ಯಾವುದೇ ಸರಕಾರಗಳು ಯೋಜನೆಗಳನ್ನು ಜಾರಿ ಮಾಡುವುದು ಮುಖ್ಯವಲ್ಲ, ಯೋಜನೆಗಳ ಅನುಷ್ಠಾನ ಹಾಗೂ ಸೂಕ್ತ ಅನುದಾನ ನೀಡಿ ಅದರ ಲಾಭ ಆ ಭಾಗದ ಜನತೆಗೆ ತಲುಪಿದರೆ ಮಾತ್ರ ಅಂತ ಯೋಜನೆಗಳು ಜನ ಮಾನಸದಲ್ಲಿ ಉಳಿಯಲಿವೆ. ಆ ನಿಟ್ಟಿನಲ್ಲಿ ರಟ್ಟೀಹಳ್ಳಿ-ಹಿರೇಕೆರೂರ ಸರ್ವಜ್ಞ ಏತ ನೀರಾವರಿ ಯೋಜನೆಯಾಗಿದ್ದು, ಅದರ ಅನುಷ್ಠಾನಕ್ಕಾಗಿ ಅನೇಕ ವರ್ಷಗಳ ಹೋರಾಟದ ಫಲವಾಗಿ ನಮ್ಮ ಕಾಂಗ್ರೆಸ್ ನೇತೃತ್ವದ ಸರಕಾರ ಸೂಕ್ತ ಅನುದಾನ ನೀಡಿದ್ದರಿಂದ ಮುಕ್ತಾಯದ ಹಂತ ತಲುಪಿದೆ. ಇಂತಹ ಮಹತ್ತರ ಯೋಜನೆ ಸಾಕಾರಗೊಳ್ಳಲು ಶಾಸಕ ಯು.ಬಿ. ಬಣಕಾರ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.

ಈ ಯೋಜನೆಯಿಂದಾಗಿ 42 ಗ್ರಾಮಗಳ ಒಟ್ಟು 88 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮುಕ್ತಾಯದ ಹಂತ ತಲುಪಿದ್ದು, ಕಳೆದ 4-5 ದಿನಗಳಿಂದ ಮಳೆರಾಯ ಮುನಿಸಿಕೊಂಡಿದ್ದು ದೇವರ ದಯೆಯಿಂದ ಆದಷ್ಟು ಬೇಗ ಮತ್ತೆ ಮಳೆ ಪ್ರಾರಂಭವಾಗಿ 88 ಕೆರೆಗಳಿಗೆ ನೀರು ತುಂಬಿಸಿ ಅಧಿಕೃತ ಚಾಲನೆ ನೀಡಲಾಗುವುದು ಎಂದರು.

ಹವಾಮಾನ ಇಲಾಖೆಯ ವರದಿ ಪ್ರಕಾರ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ. ಆ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ ನೇತೃತ್ವದ ಸರಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ನೀರಿನ ಕೊರತೆಯನ್ನು ನಿಭಾಯಿಸುವಲ್ಲಿ ಮುಖ್ಯಮಂತ್ರಿಗಳ ಹಾಗೂ ಸರಕಾರದ ಜೊತೆ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ ನೀರಿನ ಹರಿವು ಪ್ರಾರಂಭವಾದ ತಕ್ಷಣ ಎರಡು ನದಿ ದಂಡೆಗಳ ಮೇಲಿರುವ ಕೆರೆ ತುಂಬಿಸುವ ಯೋಜನೆಗಳನ್ನು ಪ್ರಾರಂಭಿಸಬೇಕೆನ್ನುವ ಸೂಚನೆ ಮೇರೆಗೆ ಸರ್ವಜ್ಞ ಕೆರೆ ತುಂಬಿಸುವ ಯೋಜನೆ ಮುಕ್ತಾಯ ಹಂತ ತಲುಪಿದೆ. ಆದ್ದರಿಂದ ಇಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವೀಕ್ಷಣೆ ಮಾಡಿ ಸಾಂಕೇತಿಕವಾಗಿ ಚಾಲನೆ ನೀಡಿದ್ದು ಕಾರಣ ಹಿರೇಕೆರೂರ-ರಟ್ಟೀಹಳ್ಳಿ ಭಾಗದ ಜನತೆ ಹಾಗೂ ರೈತರು ಸರಕಾರಕ್ಕೆ ಅಭಾರಿಯಾಗಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸಿದರು.

ಯಾವುದೇ ಸರಕಾರಗಳಾಗಲಿ ಯೋಜನೆಗಳನ್ನು ರೂಪಿಸಿ ಕೈ ಬಿಟ್ಟು ಆ ಭಾಗದ ಜನತೆಗೆ ತಲುಪದೇ ನನೆಗುದಿಗೆ ಬಿದ್ದಿರುವುದು ನಾವೆಲ್ಲ ನೋಡಿದ್ದೇವೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಹಿರೇಕೆರೂರ-ರಟ್ಟೀಹಳ್ಳಿ ವಿಧಾನಸಭಾ ಸರ್ವಜ್ಞ ಏತ ನೀರಾವರಿ ಯೋಜನೆಗೆ ಸೂಕ್ತ ಅನುದಾನ ಸಹಕಾರ ನೀಡಿದ್ದರಿಂದ ಇಂದು ಮುಕ್ತಾಯ ಹಂತ ತಲುಪಲು ಸಾಧ್ಯವಾಗಿದೆ. ಆದ್ದರಿಂದ ಯೋಜನೆ ಸಂಪೂರ್ಣವಾದ ನಂತರ ರಟ್ಟೀಹಳ್ಳಿಯಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಬಹು ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.

ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಹನಮಣ್ಣನವರ, ಅಪರ ಜಿಲ್ಲಾಧಿಕಾರಿ ನಾಗರಾಜ, ವಸಂತ ದ್ಯಾವಕ್ಕಳವರ, ರಮೇಶ ಮಡಿವಾಳರ, ತಹಸೀಲ್ದಾರ್ ಶ್ವೇತಾ ಅಮರಾವತಿ, ಮಲ್ಲಿಕಾರ್ಜುನ್ ಬುರಡಿಕಟ್ಟಿ ಹಾಗೂ ನೀರಾವರಿ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಗಾರು ಹಂಗಾಮಿನಲ್ಲೇ ಬರಿದಾದ ಚೆಕ್‌ ಡ್ಯಾಂಗಳು
15ನೇ ಹಣಕಾಸು ಅನುದಾನ ವಿಳಂಬ: ಸಂಕಷ್ಟದಲ್ಲಿ ಗ್ರಾಮ ಪಂಚಾಯಿತಿಗಳು