ರಟ್ಟೀಹಳ್ಳಿ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಹಾಗೂ ಸಾರ್ವಜನಿಕರ ಪಾಲಿಗೆ ಸತ್ತೇಹೋಗಿದೆ. ಶೇ. 60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.
ವಿವಿಧ ಬೇಡಿಕೆ ಈಡೇರಿಕೆ, ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕದ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ವಿರುದ್ಧ ಇಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸರ್ಕಾರ ಇದ್ದರೂ ಮುಖ್ಯಮಂತ್ರಿಗೆ, ಸಚಿವರಿಗೆ ಹಾಗೂ ಶಾಸಕರ ಅಭಿವೃದ್ಧಿಗೆ ಇದೆಯೇ ಹೊರತೂ ನಮ್ಮ ಪಾಲಿಗೆ ಇಲ್ಲ ಎಂದು ಗಂಭೀರವಾಗಿ ಆರೋಪಿಸಿದರು.ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಡ್ಲಿ-ವಡೆ, ಉಪ್ಪಿಟ್ಟು ತಿನ್ನೋಕೆ ಇವರು ಅವರ ಮನೆಗೆ ಇವರು ಬರುತ್ತಾರೆ. ಅವರು ಇವರ ಮನೆಗೆ ಹೋಗುತ್ತಾ ಕುರ್ಚಿಗಾಗಿ ಕಿತ್ತಾಡುವಂತಹ ಸರ್ಕಾರಕ್ಕೆ ಕಿಂಚಿತ್ತು ನಾಚಿಕೆ ಇಲ್ಲದಂತಾಗಿದೆ. ನಮ್ಮ ತಾಲೂಕಿನ ಶಾಸಕರು ಜನಪರ ಆಡಳಿತ ಮಾಡದೆ ಕೇವಲ ಹುಟ್ಟಿದ ಹಬ್ಬ, ಮದುವೆ ಮುಂಜಿ, ಹುಟ್ಟಿದ ಮನೆಗೆ, ಸತ್ತೋರ ಮನೆಗೆ ಹೋಗೋದೆ ದೊಡ್ಡ ಸಾಧನೆ ಮಾಡಿಕೊಂಡು ತಾಲೂಕಿನ ಅಭಿವೃದ್ಧಿ ಕಡೆಗಣಿಸಿದ ನಿಮಗೆ ಅಧಿಕಾರದಲ್ಲಿ ಮುಂದುವರಿಯಲು ಯಾವ ನೈತಿಕತೆನೂ ಇಲ್ಲ. ಆದ್ದರಿಂದ ತಕ್ಷಣ ರಾಜೀನಾಮೆ ನೀಡಿ ಜನರ ಮುಂದೆ ಹೋಗೋಣ, ಆಗ ಜನರೆ ತೀರ್ಮಾನ ಮಾಡಲಿ, ಯಾವ ಪಕ್ಷ ಅಧಿಕಾರ ಮಾಡಲಿ ಎಂದು ಸವಾಲು ಹಾಕಿದರು.
ರಟ್ಟೀಹಳ್ಳಿ ಮಾಸೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿದ್ದನ್ನು ಕೆಳದರ್ಜೆಗೆ ಇಳಿಸಿದ ಶಾಸಕರಿಗೆ ಜನಪರ ಕಾಳಜಿ ಇದೆಯೇ ಎಂದು ಪ್ರಶ್ನಿಸಿದರು. ಆಸ್ಪತ್ರೆಗಳನ್ನು ಕೆಳದರ್ಜೆಗೆ ಇಳಿಸಿದ್ದೆ ಆದಲ್ಲಿ ಆಸ್ಪತ್ರೆ ಮುಂದೆಯೇ ಧರಣಿ ಮಾಡಲಾಗುವುದು ಎಂದು ಡಿಎಚ್‌ಒಗೆ ತಾಕೀತು ಮಾಡಿದರು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸದ ಸರ್ಕಾರ ರೈತರನ್ನು ಬೀದಿಗೆ ಬಿಟ್ಟಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಮಧ್ಯೆ ಅಳಿದ ಉಳಿದ ಬೆಳೆಗಳನ್ನು ಸರ್ಕಾರ ಖರೀದಿ ಮಾಡದೆ ನಿರ್ಲಕ್ಷ್ಯ ಮಾಡಿದೆ. ಕೇಂದ್ರ ಸರ್ಕಾರ ₹2400 ಎಂಎಸ್‌ಪಿ ದರ ನಿಗದಿ ಮಾಡಿದ್ದರೂ ಖರೀದಿ ಮಾಡದೇ ಕೇವಲ ಕೆಎಂಎಫ್‌ಗೆ ನೀಡಿದ್ದು, ಖರೀದಿ ಹಣ ನೀಡುವವರು ಯಾರು ಎಂದು ಪ್ರಶ್ನಿಸಿದರು.ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ, ಇಸ್ಪೀಟ್, ಗಾಂಜಾ ಮಾರಾಟ ಸರ್ಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯದ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರೂ ಇದುವರೆಗೂ ಉತ್ತರವಿಲ್ಲ. ಅದಕ್ಕೆ ತಾಳ ಹಾಕುವ ಜಿಲ್ಲಾಡಳಿತ ಬಡವರ ರಕ್ತ ಹಿರುತ್ತಿದೆ. ಆದ್ದರಿಂದ ಈ ಕ್ಷಣದಿಂದಲೇ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಡಿಎಚ್‌ಒ ಹಾಗೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕಾಗಮಿಸಿದಾಗ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡ ಪರಿಣಾಮ ಕೆಲಕಾಲ ಗೊಂದಲದ ಗೂಡಾಯಿತು. ಆನಂತರ ಸಚಿವರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರ ಅಹವಾಲುಗಳನ್ನು ನಿರ್ಲಕ್ಷ್ಯ ಮಾಡದೇ ಎಲ್ಲ ಬೇಡಿಕೆ ಈಡೇರಿಕೆಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಂಜಾನೆ 11 ಗಂಟೆಯಿಂದ ಪ್ರಾರಂಭವಾದ ಬೃಹತ್ ಪ್ರತಿಭಟನೆ ಮಧ್ಯಾಹ್ನ 3 ಗಂಟೆ ವರೆಗೂ ನಡೆಯಿತು.