ಕಾಂಗ್ರೆಸ್‌ ಸರ್ಕಾರ ಅಲುಗಾಡೂವುದು ಇಲ್ಲ: ಎಸ್ಸೆಸ್ಸೆಂ

KannadaprabhaNewsNetwork | Published : Nov 2, 2023 1:00 AM

ಸಾರಾಂಶ

ಸರ್ಕಾರ ಈವಾಗ ಬೀಳುತ್ತೆ ಅಂತ ಬಿಜೆಪಿಯವರು ಕನಸು ಕಾಣುತ್ತಿದ್ದಾರಷ್ಟೇ

ಸರ್ಕಾರ ಈವಾಗ ಬೀಳುತ್ತೆ ಅಂತ ಬಿಜೆಪಿಯವರು ಕನಸು ಕಾಣುತ್ತಿದ್ದಾರಷ್ಟೇ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬೆಳಗಾವಿಯ ಗ್ಯಾಂಗ್‌ನಿಂದ ಪತನಗೊಳ್ಳುತ್ತದೆ ಎಂಬುದು ಕನಸಿನ ಮಾತು, ಅದೊಂದು ರೀತಿ ಹೋರಿ ಮತ್ತು ನರಿ ಕಥೆಯಂತೆ ಅಷ್ಟೇ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಮಾರ್ಮಿಕವಾಗಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದೆ ಹೊರಟಿದ್ದ ಹೋರಿ, ಹಿಂದೆ ಬರುತ್ತಿದ್ದ ನರಿ ಕಥೆಯಂತೆ ಕೆಲವರು ಸರ್ಕಾರ ಈವಾಗ ಬೀಳುತ್ತೆ, ಆಮೇಲೆ ಬೀಳುತ್ತದೆಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರಷ್ಟೇ ಎಂದರು.

ಅವಧಿಗಿಂತ ಮೊದಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಸರ್ಕಾರ ಅಲ್ಲಾಡುತ್ತಿದೆಯೆಂದು ಬಿಜೆಪಿಯವರು ಹೇಳುತ್ತಿರುತ್ತಾರೆ. ನಮ್ಮ ಸರ್ಕಾರವಂತೂ ಬೀಳುವುದಿಲ್ಲ, ಅಲ್ಲಾಡುವುದೂ ಇಲ್ಲ ಎಂದರು.

ದಾವಣಗೆರೆ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಸೂಕ್ತ ನಿರ್ದೇಶನಗಳನ್ನೂ ನೀಡಿದ್ದೇವೆ ಎಂದು ತಿಳಿಸಿದರು.

..........

ವಿಶ್ವ ಕನ್ನಡ ಸಮ್ಮೇಳನ ಸದ್ಯಕ್ಕಿಲ್ಲ: ಸಚಿವ

ರಾಜ್ಯದಲ್ಲಿ ಬರ ಇದ್ದು, ವಿಶ್ವ ಕನ್ನಡ ಸಮ್ಮೇಳನವನ್ನು ಸದ್ಯ ನಡೆಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಮುಖ್ಯಮಂತ್ರಿಯವರ ಬಳಿ ಮುಂದಿನ ತಿಂಗಳು ಚರ್ಚಿಸಿ, ಮುಂಬರುವ ಬಜೆಟ್‌ನಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಅನುದಾನ ಮೀಸಲಿಡಲು ಚರ್ಚಿಸುವೆ ಎಂದು ಸಚಿವ ಮಲ್ಲಿಕಾರ್ಜುನ್‌ ಹೇಳಿದರು. ಸದ್ಯಕ್ಕೆ ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಸಲು ಯಾವುದೇ ಸಮಸ್ಯೆ ಎದುರಾಗಿಲ್ಲ. ಈಗಾಗಲೇ ಜಿಲ್ಲಾ ಕೇಂದ್ರಕ್ಕೆ ಕುಡಿಯುವ ನೀರು ಪೂರೈಸುವ ಒಂದನೇ ಹಂತದ ಸಮಗ್ರ ನೀರು ಪೂರೈಕೆ ಕೇಂದ್ರವಾದ ಟಿವಿ ಸ್ಟೇಷನ್ ಕೆರೆಯಲ್ಲಿ ನೀರು ತುಂಬಿಸಲಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗಂತೂ ಸಮಸ್ಯೆ ಆಗುವುದಿಲ್ಲ.

ಎಸ್ಸೆಸ್ ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವವಾಲ್ಮೀಕಿ ಸಮುದಾಯ ಭವನಕ್ಕೆ₹2 ಕೋಟಿ ಅನುದಾನ

ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭರವಸೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದಲ್ಲಿ ಅಪೂರ್ಣವಾಗಿರುವ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಅಗತ್ಯವಿರುವ 2 ಕೋಟಿ ರು. ಅನುದಾನ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಹಾಗೂ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ 11 ದಿನಗಳ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ 3ನೇ ದಿನವಾದ ಬುಧವಾರ ವೇದಿಕೆಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕೋಲಾಟ, ಮಹಿಳಾ ಭಜನೆ, ಸೋಬಾನೆ ಸ್ಪರ್ಧಿಗಳಿಗೆ ಶುಭ ಹಾರೈಸಿ ಮಾತನಾಡಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಗರದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 5 ಕೋಟಿ ರು. ನೀಡಲಾಗಿತ್ತು. ಕಾಮಗಾರಿ ತ್ವರಿತಗತಿಯಲ್ಲಿ ಮುಗಿದು ಮುಂದಿನ ವಾಲ್ಮೀಕಿ ಜಯಂತಿ ಈ ಸಮುದಾಯ ಭವನದಲ್ಲಿಯೇ ನಡೆಯಬೇಕೆಂದು ಆಶಿಸಿದರು. ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಜಾನಪದ ಕಲೆಗಳ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಅನೇಕ ಸ್ಪರ್ಧೆಗಳ ಏರ್ಪಡಿಸಿ ಕಲಾವಿದರ ಪ್ರೋತ್ಸಾಹಿಸುವುದು ಶ್ಲಾಘನೀಯ ವಿಷಯ ಎಂದರು. ಮಾಸಾಶನ ದೊರಕಿಸಬೇಕೆನ್ನುವುದು ಕಲಾವಿದರ ಬೇಡಿಕೆ, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.

ಈ ಸಂದರ್ಭದಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ್, ಪೂಜಾರ ಅಂಜಿನಪ್ಪ, ಆಲೂರು ಪರಶುರಾಮ್, ಚಿರಂಜೀವಿ, ರಾಜನಹಟ್ಟಿ ರಾಜು, ಪಾಮೇನಹಳ್ಳಿ ಗೌಡ್ರು ಶೇಖರಪ್ಪ, ಯರವನಾಗತಿಹಳ್ಳಿ ಪೂಜಾರ ಪರಮೇಶ್ವರಪ್ಪ, ಎಸ್.ಎನ್.ಟಿ. ತಿಪ್ಪೇಸ್ವಾಮಿ, ಹುಲ್ಮನಿ ಗಣೇಶ್, ಪಾಮೇನಹಳ್ಳಿ ಗೌಡರ ನಾಗರಾಜ್, ಪಿ.ಸಿ.ಗೋವಿಂದಸ್ವಾಮಿ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಇತರರಿದ್ದರು.

ಸ್ಪರ್ಧೆಯ ಫಲಿತಾಂಶ:

ಕೋಲಾಟ ಸ್ಪರ್ಧೆಯಲ್ಲಿ ರಂಗನಾಥ್ ಕೋಲಾಟ ಸಂಘ ಜೋಗಿಹಟ್ಟಿ ಚಿತ್ರದುರ್ಗ ಪ್ರಥಮ, ಈಶ್ವರ ಆಂಜನೇಯ ಸಂಘ ಕೋಲ್ಕುಂಟೆ, ದಾವಣಗೆರೆ ದ್ವಿತೀಯ,ಜಗಳೂರು ತಾಲೂಕಿನ ಕಾನನ ಕಟ್ಟೆಯ ಸಂಘ ತೃತೀಯ.

ಮಹಿಳಾ ಭಜನೆ:

ಶಿಕಾರಿಪುರದ ಅಕ್ಕಮಹಾದೇವಿ ತಂಡ ಪ್ರಥಮ, ಹುಬ್ಬಳ್ಳಿಯ ದುರ್ಗಾ ಭಜನಾ ಮಂಡಳಿ ದ್ವಿತೀಯ, ಜಗಳೂರು ತಾಲ್ಲೂಕು ಮುಸ್ಟೂರಿನ ಎಲ್ಲಮ್ಮದೇವಿ ತಂಡ ತೃತಿಯ ಬಹುಮಾನ ಪಡೆದವು.

ಸೋಬಾನೆ ಪದ: ಸಿದ್ದಮ್ಮನಹಳ್ಳಿಯ ಗಾಳಿ ಮಾರಮ್ಮ ತಂಡ ಪ್ರಥಮ, ಕನಕ ದುರ್ಗಾಂಬಿಕಾ ತಂಡ ಚಿಕ್ಕಮಲ್ಲನಹೊಳೆ ದ್ವಿತಿಯ ಮತ್ತು ಶಿವ ದುರ್ಗಾಂಬ ಜಾನಪದ ಕಲಾ ತಂಡ ಚಿಕ್ಕಮಲ್ಲನಹೊಳೆ ತಂಡ ತೃತಿಯ ಬಹುಮಾನ ಪಡೆದವು.

ವಿಜೇತರಿಗೆ ಎಸ್‌ಎನ್‌ಟಿ ತಿಪ್ಪೇಸ್ವಾಮಿ, ಹರಪನಹಳ್ಳಿ ಹಾಲೇಶ್, ಹುಚ್ಚವ್ವನಹಳ್ಳಿ ಮಂಜುನಾಥ್, ಎಲೋದಹಳ್ಳಿ ರವಿ, ಪೂಜಾರ ಅಂಜಿನಪ್ಪ, ದಾಗಿನಕಟ್ಟೆ ಬಸವರಾಜ್ ಬಹುಮಾನ ವಿತರಿಸಿದರು.

ವಾಲಿಬಾಲ್ ಪಂದ್ಯ: ನ.5 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಯಾವುದೇ ತಂಡಗಳು ಭಾಗವಹಿಸಬಹುದು.

Share this article