ಕಲಬುರಗಿಯಲ್ಲಿಂದು ಕಾಂಗ್ರೆಸ್‌ ಗ್ಯಾರಂಟಿ ಸಮಾವೇಶ

KannadaprabhaNewsNetwork |  
Published : Mar 13, 2024, 02:08 AM IST
ಫೋಟೋ- ಕಾಂಗ್ರೆಸ್‌ 1 ಮತ್ತು ಕಾಂಗ್ರೆಸ್‌ 2 | Kannada Prabha

ಸಾರಾಂಶ

ಕಲಬುರಗಿ ನಗರದ ಎನ್.ವಿ. ಮೈದಾನದಲ್ಲಿ ಮಾ.13ರಂದು ಬೆ.11 ಗಂಟೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರದ ಎನ್.ವಿ. ಮೈದಾನದಲ್ಲಿ ಮಾ.13ರಂದು ಬೆ.11 ಗಂಟೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ಮತ್ತು 1,330 ಕೋಟಿ ರು. ಮೊತ್ತದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದರು.

ಬೇಸಿಗೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಗೆ ಕುಡಿವ ನೀರು ಬಿಡುಗಡೆ ಕುರಿತಂತೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ. ಇದೂವರೆಗೆ ಅಲ್ಲಿನ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪತ್ರಿಕಾಗೋಷ್ಠಿಗೆ ಬರುವ ಮುನ್ನ ಸಹ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಇದೇ ವಿಷಯದ ಕುರಿತು ಚರ್ಚಿಸಿರುವೆ. ಇಂದು ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ಮೂರು ತಿಂಗಳಿನಿಂದ ನರೇಗಾ ಕೂಲಿ ಹಣ ಕಾರ್ಮಿಕರಿಗೆ ಪಾವತಿಯಾಗಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದಿಂದ ಕಳೆದ 6 ತಿಂಗಳಿನಿಂದ ಕೂಲಿ ಕಾರ್ಮಿಕರಿಗೆ ವೇತನಾನುದಾನ ನೀಡಿಲ್ಲ. ಸುಮಾರು 1,200 ಕೋಟಿ ರು. ಅನುದಾನ ಬರಬೇಕಿದೆ. ನರೇಗಾ ಯೋಜನೆಯಡಿ ಅಗತ್ಯ ಸಲಕರಣೆಗಳ ಖರೀದಿಗೆ, ಆಡಳಿತಾತ್ಮಕ್ಕ ವೆಚ್ಚಕ್ಕೂ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪೂರ್ವಸಿದ್ಧತೆ ಪರಿಶೀಲನೆ:

ಕಲಬುರಗಿ ನಗರದಲ್ಲಿ ಮಾ.13ರಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನಿಡಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ನಗರದ ಎನ್.ವಿ.ಮೈದಾನಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆ ಪರಿಶೀಲಿಸಿದರು.

ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುವ ಕಾರಣ ಎನ್.ವಿ.ಮೈದಾನದಲ್ಲಿ ಸೂಕ್ತ ಅಸನ ಭದ್ರತಾ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಊಟಕ್ಕೆ ಪ್ರತ್ಯೇಕ ಕೌಂಟರ್ ತೆರೆಯಬೇಕು. ಅಲ್ಲಲ್ಲಿ ಬಯೋ ಟಾಯಲೆಟ್ ಅಲವಡಿಸಬೇಕು. ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದ‌ ಸಚಿವರು, ಕಾರ್ಯಕ್ರಮ‌ದ ರೂಪು ರೇಷೆ ಕುರಿತು ಇವೆಂಟ್ ಮ್ಯಾನೇಜರ್ ಗಳಿಂದ ಮಾಹಿತಿ ಪಡೆದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಡಿ.ಸಿ.ಬಿ.ಫೌಜಿಯಾ ತರನ್ನುಮ್, ಅಪರ‌ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೆ.ಕೆ.ಆರ್.ಟಿ.ಸಿ. ಎಂ.ಡಿ. ಎಂ.ರಾಚಪ್ಪ, ಸಹಾಯಕ ಆಯುಕ್ತರಾದ ರೂಪಿಂದರ್ ಕೌರ್, ಆಶಪ್ಪ ಪೂಜಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!