ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳು ಜನ ವಿರೋಧಿ: ಕಡಾಡಿ

KannadaprabhaNewsNetwork | Published : Apr 12, 2024 1:04 AM

ಸಾರಾಂಶ

ಆರು ತಿಂಗಳಿಂದ ಹಾಲು ಉತ್ಪಾದಕರಿಗೆ ಸರ್ಕಾರ ₹ 5 ಪ್ರೋತ್ಸಾಹ ಧನ ನೀಡದೇ, ₹ 650 ಕೋಟಿ ಬಾಕಿ ಉಳಿಸಿಕೊಂಡಿದೆ. ರೈತರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾನಿಧಿಯನ್ನು ಸಹ ಕಾಂಗ್ರೆಸ್‌ ಸ್ಥಗಿತಗೊಳಿಸಿದೆ.

ಹುಬ್ಬಳ್ಳಿ:

ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಜನ ವಿರೋಧಿಯಾಗಿದ್ದು, ಬೋಗಸ್‌ ಯೋಜನೆಗಳಾಗಿವೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಧಾರವಾಡ ಲೋಕಸಭಾ ಪ್ರಭಾರಿ ಈರಣ್ಣ ಕಡಾಡಿ ಟೀಕಿಸಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ದುಡ್ಡು ನೀಡಿದರೂ ಪ್ರಯಾಣಿಕರಿಗೆ ಸೀಟು ಸಿಗದಂತಾಗಿದೆ. ಆರಂಭದಲ್ಲಿ 200 ಯುನಿಟ್‌ ವಿದ್ಯುತ್‌ ಉಚಿತ ಎಂದ ಕಾಂಗ್ರೆಸ್‌, ಈಗ ಅದನ್ನು ಕಡಿತಗೊಳಿಸಿದೆ ಎಂದು ಲೇವಡಿ ಮಾಡಿದರು.

ಆರು ತಿಂಗಳಿಂದ ಹಾಲು ಉತ್ಪಾದಕರಿಗೆ ಸರ್ಕಾರ ₹ 5 ಪ್ರೋತ್ಸಾಹ ಧನ ನೀಡದೇ, ₹ 650 ಕೋಟಿ ಬಾಕಿ ಉಳಿಸಿಕೊಂಡಿದೆ. ರೈತರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾನಿಧಿಯನ್ನು ಸಹ ಕಾಂಗ್ರೆಸ್‌ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.

ವಿನೂತನ ಅಭಿಯಾನ:

‘ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಭಾನುವಾರ’ ಎಂಬ ವಿನೂತನ ಅಭಿಯಾನದ ಮೂಲಕ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅಭಿಯಾನದ ಅಂಗವಾಗಿ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿ ಭಾನುವಾರ ಹಿರಿಯ ಮುಖಂಡರು, ನಿವೃತ್ತ ಸೈನಿಕರು ಹಾಗೂ ನಾಯಕರು ಪ್ರಧಾನಿಯವರ ಆಡಳಿತ ಹಾಗೂ ದೂರದೃಷ್ಟಿಯ ಕುರಿತು ಜನರಿಗೆ ಮನವರಿಕೆ ಮಾಡುವ ಮೂಲಕ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.

ಕ್ಷೇತ್ರದ ಎಲ್ಲ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಮನೆಯಂಗಳದಲ್ಲಿ ಸಂವಾದ ಆಯೋಜಿಸಿದ್ದಾರೆ. ಪ್ರಹ್ಲಾದ ಜೋಶಿ ಅವರ ನಾಮಪತ್ರ ಸಲ್ಲಿಕೆಯ ನಂತರ ಈ ಅಭಿಯಾನ ಜಿಲ್ಲಾದ್ಯಂತ ನಿರಂತರ ನಡೆಯಲಿದೆ ಎಂದರು.

ಐಎನ್‌ಡಿಐಎ ಒಕ್ಕೂಟ ಚುನಾವಣೆ ಗೆಲ್ಲಬೇಕೆಂಬ ಅಜೆಂಡಾ ಹಾಗೂ ಸುಳ್ಳು ಭರವಸೆಯ ಮೂಲಕ ಷಡ್ಯಂತ್ರ ನಡೆಸಿದೆ. ಇನ್ನೊಂದೆಡೆ ದೇಶ ಹಾಗೂ ಧರ್ಮ ಉಳಿವಿಗಾಗಿ ಹೋರಾಡುತ್ತಿರುವ ಬಿಜೆಪಿ ಅಸಂಖ್ಯಾತ ಭಾರತೀಯರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ಐಎನ್‌ಡಿಐಎ ಪಕ್ಷಗಳು ರಾಷ್ಟ್ರೀಯತೆ ಹಾಗೂ ಅಭಿವೃದ್ಧಿ ಪರವಾದ ವಿಷಯಗಳ ಚರ್ಚೆಗೆ ಬರದೇ, ಕೀಳುಮಟ್ಟದ ಹೇಳಿಕೆಗಳ ಮೂಲಕ ರಾಜಕಾರಣ ಮಾಡುತ್ತಿರುವುದು ಖಂಡನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರ ಮಾ. ನಾಗರಾಜ, ಮಾಧ್ಯಮದ ರಾಜ್ಯ ಸಮಿತಿ ಸದಸ್ಯ ಪ್ರಮೋದ ಕಾರಕೂನ, ಗುರು ಪಾಟೀಲ ಇದ್ದರು.ಶ್ರೀಗಳ ಸ್ಪರ್ಧೆಯಿಂದ ಸಮಸ್ಯೆ ಆಗದು

ಚುನಾವಣೆಯಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಬಿಜೆಪಿ ಪಕ್ಷಕ್ಕೆ ತನ್ನದೇ ಆದ ಶಕ್ತಿ ಹಾಗೂ ಕಾರ್ಯಕರ್ತರ ಪಡೆ ಇದೆ. ಈ ಬಾರಿ ಲೋಕಸಭಾ ಚುನಾವಣೆಯ ಗೆಲುವು ಐತಿಹಾಸಿಕ ದಾಖಲೆಯಾಗಲಿದೆ. ಧಾರವಾಡ ಕ್ಷೇತ್ರದಲ್ಲಿ ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆ ಮಾಡಿದರೂ ಜೋಶಿ ಅವರ ಗೆಲುವಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಜೋಶಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಮೋದಿ ಅವರ ಜನಪರ ಆಡಳಿತ ಪರಿಗಣಿಸಿ ಜನರು ಬಿಜೆಪಿಗೆ ಮತ ನೀಡುವ ಮೂಲಕ ಗೆಲ್ಲಿಸುತ್ತಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿಶ್ವಾಸ ವ್ಯಕ್ತಪಡಿಸಿದರು.

Share this article