ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಬುಧವಾರಕ್ಕೆ (ಮೇ 20ಕ್ಕೆ) ಮೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅದರ ಸಂಭ್ರಮವನ್ನು ಆಚರಿಸಲು ತುಮಕೂರಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮೂರು ವರ್ಷಗಳ ಸಾಧನಾ ಸಮರ್ಪಣಾ ಸಮಾವೇಶ, ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿತು.
ಕನ್ನಡಪ್ರಭ ವಾರ್ತೆ ತುಮಕೂರು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಬುಧವಾರಕ್ಕೆ (ಮೇ 20ಕ್ಕೆ) ಮೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅದರ ಸಂಭ್ರಮವನ್ನು ಆಚರಿಸಲು ತುಮಕೂರಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮೂರು ವರ್ಷಗಳ ಸಾಧನಾ ಸಮರ್ಪಣಾ ಸಮಾವೇಶ, ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪ ಬೆಳಗಿಸುವ ಮೂಲಕ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಈ ಸಮಾವೇಶವನ್ನು ಉದ್ಘಾಟಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಸಚಿವರು, ಶಾಸಕರು, ಪಕ್ಷದ ಮುಖಂಡರ ದಂಡೇ ಸಮಾವೇಶದಲ್ಲಿ ಭಾಗಿಯಾಗಿತ್ತು. ಇದೇ ವೇಳೆ, ಮೂರು ವರ್ಷದ ಸರ್ಕಾರದ ಸಾಧನೆಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ, ‘ನವ ಕರ್ನಾಟಕ’ ಅಭಿವೃದ್ಧಿ ಮಾದರಿಯ ವಸ್ತು ಪ್ರದರ್ಶನ ಮತ್ತು ತುಮಕೂರು ಜಿಲ್ಲೆಯಲ್ಲಿ ನಡೆದಿರುವ 682 ಕೋಟಿ ರೂ.ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ನೆರವೇರಿಸಲಾಯಿತು.
ಬಳಿಕ, ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ಇ-ಪೌತಿ ಆಂದೋಲನಾ-1.6 ಲಕ್ಷ, ದರಖಾಸ್ತು ಪೋಡಿ - 24,256, ಕಂದಾಯ ಗ್ರಾಮ ಹಕ್ಕು ಪತ್ರ - 20,666 ಮತ್ತು ಪೋಡಿ ಮುಕ್ತ ಅಭಿಯಾನ - 1570 ಸೇರಿದಂತೆ ಒಟ್ಟು 1,52,492 ಫಲಾನುಭವಿಗಳಿಗೆ ಹಕ್ಕು ಪತ್ರ/ಆದೇಶ ಪತ್ರಗಳನ್ನು ಸಮಾವೇಶದಲ್ಲಿ ವಿತರಣೆ ಮಾಡಲಾಯಿತು. ರಾಜ್ಯದ ಇತಿಹಾಸದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಇಷ್ಟೊಂದು ಮಂದಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿರುವುದು ಇದೇ ಮೊದಲಾಗಿದ್ದು, ಈ ಸಾಧನೆ ಗಿನ್ನೆಸ್ ದಾಖಲೆಗೆ ಸೇರಿದೆ. ಈ ಸಾಧನೆ ದಾಖಲಿಸಲು ಸಮಾವೇಶಕ್ಕೆ ಆಗಮಿಸಿದ್ದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತೀರ್ಪುಗಾರ ಸ್ವಪ್ನಿಲ್ ಡಂಗರಿಕರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ದಾಖಲೆ ಪ್ರಮಾಣ ಪತ್ರ ವಿತರಿಸಿದರು.
ಜನವೋ ಜನ:
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 2 ಲಕ್ಷ ಜನ ಸಮಾವೇಶದಲ್ಲಿ ಭಾಗವಹಿಸಿದ್ದರು. ಜನರ ಆಗಮನಕ್ಕಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ನಿಗಮಗಳಿಂದ 3 ಸಾವಿರ ಬಸ್‌ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ತುಮಕೂರು ನಗರದ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಿ, 60 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ ಸುಮಾರು 4,500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು. ಸಮಾವೇಶದ ಬಳಿಕ ಮಧ್ಯಾಹ್ನ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.ಸರ್ಕಾರದ ಸಾಧನೆಗಳ ಅನಾವರಣ:
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು, ಸರ್ಕಾರದ ಸಾಧನೆಗಳನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಪ್ರಧಾನಿ ನರೇಂದ್ರ ಮೋದಿ ಸೇರಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಸಿದ್ದರಾಮಯ್ಯ ಮಾತನಾಡಿ, ನಮ್ಮ ಸರ್ಕಾರ ಯಾವಾಗಲೂ ನುಡಿದಂತೆ ನಡೆಯುವ ಸರ್ಕಾರ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಸದಾ ಮಾಡಿಕೊಂಡು ಬಂದಿದ್ದೇವೆ. ನಮ್ಮ ಸರ್ಕಾರ ರಾಜ್ಯದ ಬಡವರ ಹಿತ ಕಾಯುವಲ್ಲಿ ಸದಾ ಬದ್ದವಾಗಿದೆ, ಕೇವಲ ಒಂದು ವರ್ಷದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದೇವೆ ಎಂದರು.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ 592 ಭರವಸೆಗಳ ಪೈಕಿ ಈಗಾಗಲೇ 250ಕ್ಕೂ ಹೆಚ್ಚು ಭರವಸೆಗಳನ್ನು ಸರ್ಕಾರ ಯಶಸ್ವಿಯಾಗಿ ಈಡೇರಿಸಿದೆ ಎಂದು ಪ್ರತಿಪಾದಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ಕರ್ನಾಟಕದ ಪಂಚ ಗ್ಯಾರಂಟಿಗಳು ಇಡೀ ವಿಶ್ವದಲ್ಲೇ ಬಡವರ ಬದುಕಿನಲ್ಲಿ ಸಾಮಾಜಿಕ ಬದಲಾವಣೆ ತಂದಂತಹ ಕಾರ್ಯಕ್ರಮಗಳಾಗಿವೆ. ಇವು ವಿಶ್ವಕ್ಕೇ ಮಾದರಿ. ಪ್ರಧಾನಿ ಮೋದಿಯಾದಿಯಾಗಿ ಬಿಜೆಪಿ ನಾಯಕರು ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಾರೆ. ಆದರೆ, ನಾವು ಕೊಟ್ಟ ಗ್ಯಾರಂಟಿಯನ್ನು ಕಾಪಿ ಮಾಡಿಕೊಳ್ಳುತ್ತಿದ್ದಾರೆ. ಟೀಕೆಗಳು ಸಾಯ್ತವೆ, ಆದರೆ, ನಾವು ಮಾಡಿದ ಒಳ್ಳೆಯ ಕೆಲಸಗಳು ಉಳಿಯುತ್ತವೆ ಎಂದು ಹೇಳಿದರು.ಸಮಾವೇಶದಲ್ಲಿ ಸರ್ಕಾರದ ಸಾಧನೆಗಳ ವಸ್ತು ಪ್ರದರ್ಶನ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಬುಧವಾರಕ್ಕೆ (ಮೇ 20ಕ್ಕೆ) ಮೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅದರ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರದ 3 ವರ್ಷಗಳ ಸಾಧನೆಗಳನ್ನು ಬಿಂಬಿಸುವ ''''ಸಾಧನಾ ಸಮರ್ಪಣಾ ಸಮಾವೇಶ'''' ಮತ್ತು ''''ನವ ಕರ್ನಾಟಕ'''' ಅಭಿವೃದ್ಧಿ ಮಾದರಿಯ ಬೃಹತ್ ವಸ್ತು ಪ್ರದರ್ಶನವನ್ನು ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಸ್ತು ಪ್ರದರ್ಶನ ಉದ್ಘಾಟಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಇತರ ಸಚಿವರು ಈ ವೇಳೆ ಹಾಜರಿದ್ದರು. ಸರ್ಕಾರದ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ಮಾಹಿತಿ ನೀಡಲು ಈ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.''''ನವ ಕರ್ನಾಟಕ'''' ಅಭಿವೃದ್ಧಿ ಮಾದರಿ:ವಸ್ತು ಪ್ರದರ್ಶನದ ಪ್ರಮುಖ ಆಕರ್ಷಣೆಯಾದ ‘ನವ ಕರ್ನಾಟಕ ಅಭಿವೃದ್ಧಿ ಮಾದರಿ’ವಿಭಾಗದಲ್ಲಿ ಸರ್ಕಾರದ 32 ವಿವಿಧ ಇಲಾಖೆಗಳ ಸಾಧನೆಯನ್ನು ಪ್ರತಿಬಿಂಬಿಸುವ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಸರ್ಕಾರದ ಗ್ಯಾರಂಟಿ ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳು ಅನಾವರಣಗೊಂಡಿದ್ದವು. ಇದೇ ವೇಳೆ, ‘ತುಮಕೂರು ಮಾದರಿ ಅಭಿವೃದ್ಧಿ’ ವಿಭಾಗದಲ್ಲಿ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಒಳಗೊಂಡ ಮಳಿಗೆಗಳು ಆಕರ್ಷಣೆಯ ಕೇಂದ್ರಗಳಾಗಿದ್ದವು. ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಒಳಗೊಂಡ ಪ್ರದರ್ಶನದಲ್ಲಿ ಸಿಎಂರ ಕಾರ್ಯಕ್ರಮಗಳು, ‘ತುಮಕೂರು ಮಾಡೆಲ್’ ಅಭಿವೃದ್ಧಿ ದೃಷ್ಟಿಕೋನ, ಕ್ರೀಡಾ ಮೂಲಸೌಕರ್ಯ ಮತ್ತು ಅಂ,ರಾ. ಕ್ರೀಡಾಕೂಟಗಳು, ಸಾಮಾಜಿಕ ನ್ಯಾಯ ಮತ್ತು ಸಮಾನತೆ, ಯುವ ಸಬಲೀಕರಣ, ಸುಸ್ಥಿರ ತುಮಕೂರು, ಕಂದಾಯ ಇಲಾಖೆಯ ಸಾಧನೆ, ಮೂಲಸೌಕರ್ಯ ಹಾಗೂ ಭೂಸ್ವಾಧೀನ ಕಾರ್ಯಗಳನ್ನು ಆಕರ್ಷಕವಾಗಿ ಪ್ರದರ್ಶಿಸಲಾಗಿತ್ತು. ಜೊತೆಗೆ, ವಿಶೇಷವಾಗಿ, ಜಿಲ್ಲೆಯ ಫಲಾನುಭವಿಗಳಿಗೆ 22 ಸಾವಿರ ಹಕ್ಕುಪತ್ರಗಳ ವಿತರಣೆ ಮೂಲಕ ನಿರ್ಮಾಣವಾದ ‘ಗಿನ್ನೆಸ್ ವಿಶ್ವ ದಾಖಲೆ’ ಕುರಿತ ವಿಶೇಷ ವಸ್ತು ಪ್ರದರ್ಶನವನ್ನು ಜಿಲ್ಲಾಡಳಿತ ಆಯೋಜಿಸಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.