ಈಶ್ವರ ಶೆಟ್ಟರ
ಸ್ವಾತಂತ್ರ್ಯದ ನಂತರ ನಡೆದ ಎಲ್ಲ ಲೋಕಸಭೆ ಚುನಾವಣೆಗಳಲ್ಲೂ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸುಳಿದ ಬಾಳೆಹಣ್ಣಿನಂತೆ ಇತ್ತು. ಆದರೆ, 1984ರಲ್ಲಿ ನಡೆದ ಚುನಾವಣೆಯಲ್ಲಿ ಮಾತ್ರ ಪ್ರಯಾಸದ ಗೆಲವು ಕಂಡಿತು. ಅದಕ್ಕೆ ಹತ್ತು ಹಲವಾರು ಕಾರಣಗಳಿದ್ದವು.
1984 ಇಸವಿ ಭಾರತದ ಇತಿಹಾಸದಲ್ಲಿ ಕರಾಳ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಆ ವರ್ಷ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ನಡೆಯಿತು. ಇದು ರಾಜಕೀಯದ ಮೇಲೂ ಪ್ರಭಾವ ಬೀರಿತು. ಇಂದಿರಾ ಹತ್ಯೆಯಿಂದಾಗಿ 7ನೇ ಲೋಕಸಭೆಯ ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜಿಸಲ್ಪಟ್ಟಿತ್ತು. 8ನೇ ಲೋಕಸಭೆಗೆ ಚುನಾವಣೆ ಸಂದರ್ಭದಲ್ಲಿ ದೇಶದೆಲ್ಲೆಡೆ ಕಾಂಗ್ರೆಸ್ ಪರ ಬಲವಾದ ಗಾಳಿ ಬೀಸಿತ್ತು. ಆದರೂ ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಅತ್ಯಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದರು.ಅನೀರಿಕ್ಷಿತ ಟಿಕೆಟ್:ಕಾಂಗ್ರೆಸ್ ಹಾಗೂ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಉಭಯ ಅಭ್ಯರ್ಥಿಗಳು ಉತ್ತಮ ಸ್ನೇಹಿತರು. ಜೊತೆಗೆ ಚುನಾವಣೆಯನ್ನು ಸಹ ಅಷ್ಟೇ ಗಂಭೀರವಿಲ್ಲದೆ ನಡೆಸಿದವರು. ವಿಶೇಷವೆಂದರೆ ಚುನಾವಣೆ ಸಂದರ್ಭದಲ್ಲಿಯೂ ಪರಸ್ಪರ ವಿಶ್ವಾಸದಿಂದ ಇದ್ದೆವು ಎಂದು ನೆನಪಿಸಿಕೊಳ್ಳುತ್ತಾರೆ ಡಾ.ಎಂ.ಪಿ.ನಾಡಗೌಡ ಅವರು.
ಜನತಾ ಪಕ್ಷದಿಂದ ಡಾ.ಎಂ.ಪಿ.ನಾಡಗೌಡ ಅವರನ್ನು ಚುನಾವಣೆಗೆ ನಿಲ್ಲಿಸಲು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನಿರ್ಧರಿಸಿದಾಗ ಅವರು ಇಳಕಲ್ಲ ಪಟ್ಟಣದಲ್ಲಿ ವೈದ್ಯಾಧಿಕಾರಿಯಾಗಿ ಸೇವೆಯಲ್ಲಿದ್ದರು. ಅವರ ಸರ್ಕಾರಿ ಸೇವೆಗೆ ರಾಜೀನಾಮೆ ಕೊಡಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದು ಸಹ ವಿಶೇಷವಾಗಿತ್ತು.
84ರ ಚುನಾವಣೆ ಬಾಗಲಕೋಟೆ ಲೋಕಸಭೆ ಮಟ್ಟಿಗೆ ಹೊಸತನ ಮತ್ತು ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಬರುವಂತೆ ಮಾಡಿತ್ತು. ಕಾರಣ ಜನತಾ ಪಕ್ಷದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಆ ಪಕ್ಷದ ಪರ ಪ್ರಚಾರಕ್ಕೆ ಫಾರೂಕ್ ಅಬ್ದುಲ್ಲಾ, ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕ ನಾಯಕರು ಬಂದರೆ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಬಂಗಾರಪ್ಪ, ಗುಂಡೂರಾವ್ ಸೇರಿದಂತೆ ಅನೇಕ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ನೇರ ಸ್ಪರ್ಧೆ:
---