3 ದಿನದ ಅಧಿವೇಶನದಲ್ಲಿ ರೈತರಿಗೆಚೊಂಬು ಕೊಟ್ಟ ಕಾಂಗ್ರೆಸ್‌: ಅಶೋಕ್‌

KannadaprabhaNewsNetwork |  
Published : Sep 25, 2026, 03:45 AM IST
ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ರವೀಂದ್ರ ಮಾತನಾಡಿದರು. | Kannada Prabha

ಸಾರಾಂಶ

‘ರಾಜ್ಯದ ರೈತರು ಭೀಕರ ಬರದಿಂದ ಕಂಗೆಟ್ಟು, ಬೆಳೆ ಕಳೆದುಕೊಂಡು, ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟಪಡುತ್ತಿರುವ ಸಮಯದಲ್ಲಿ ಮೂರು ದಿನಗಳ ವಿಶೇಷ ಅಧಿವೇಶನ ಕರೆದ ಕಾಂಗ್ರೆಸ್‌ ಸರ್ಕಾರ ಕೊನೆಗೆ ರೈತರ ಕೈಗೆ ಕೇವಲ ₹2,500 ನೀಡಿದೆ. ಈ ಮೂಲಕ ರೈತರ ಕೈಗೆ ಸರ್ಕಾರ ಚೊಂಬು ನೀಡಿದೆ’ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ರಾಜ್ಯದ ರೈತರು ಭೀಕರ ಬರದಿಂದ ಕಂಗೆಟ್ಟು, ಬೆಳೆ ಕಳೆದುಕೊಂಡು, ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟಪಡುತ್ತಿರುವ ಸಮಯದಲ್ಲಿ ಮೂರು ದಿನಗಳ ವಿಶೇಷ ಅಧಿವೇಶನ ಕರೆದ ಕಾಂಗ್ರೆಸ್‌ ಸರ್ಕಾರ ಕೊನೆಗೆ ರೈತರ ಕೈಗೆ ಕೇವಲ ₹2,500 ನೀಡಿದೆ. ಈ ಮೂಲಕ ರೈತರ ಕೈಗೆ ಸರ್ಕಾರ ಚೊಂಬು ನೀಡಿದೆ’ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸಭಾ ಅಧಿವೇಶನದ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೇಡಿಕೆ ಇಟ್ಟಂತೆ ಪ್ರತಿ ಎಕರೆಗೆ ಪರಿಹಾರ ನೀಡಿಲ್ಲ. ಒಂದು ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ರೈತರ ಕಣ್ಣೀರನ್ನು ಒರೆಸಲು ವಿಶೇಷ ಅಧಿವೇಶನ ಕರೆದ ಸರ್ಕಾರ, ಕೊನೆಗೆ ರೈತರ ಕೈಗೆ ಚೊಂಬು ಕೊಟ್ಟು ಕಳುಹಿಸಿದೆ. ವಿಶೇಷ ಅಧಿವೇಶನ ಎಂದಾಗ ರೈತರಿಗೆ ಈ ಸರ್ಕಾರ ಇತಿಹಾಸದಲ್ಲಿ ದಾಖಲಾಗುವಂತಹ ವಿಶೇಷ ಪರಿಹಾರ ನೀಡಲಿದೆ ಎಂದು ನಿರೀಕ್ಷಿಸಿದ್ದೆವು ಎಂದರು.ಮೂರು ದಿನಗಳ ಚರ್ಚೆಯ ನಂತರ ಸಿಕ್ಕಿದ್ದು ₹2,500 ಮಾತ್ರ. ಇದು ರೈತರನ್ನು ಅಣಕಿಸುವ ಕೆಲಸ. ರೈತರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಕಣ್ಣು ಕಿವಿ ಇಲ್ಲದ ಈ ಸರ್ಕಾರಕ್ಕೆ ರಿಯಲ್‌ ಎಸ್ಟೇಟ್‌ ಮಾತ್ರ ಕಾಣುತ್ತದೆ. ರಾಹುಲ್‌ ಗಾಂಧಿಗೆ ಕಳುಹಿಸಲು ಇವರ ಬಳಿ ಹಣವಿದೆ. ಸಚಿವ ಸ್ಥಾನ ನೀಡಲು ಕೋಟಿಗಟ್ಟಲೆ ಲಂಚ ಪಡೆಯಲಾಗಿದೆ. ಆದರೆ ರೈತರ ವಿಚಾರ ಬಂದ ಹಣ ಕೊರತೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಂದು ಎಕರೆ ಜಮೀನಿನಲ್ಲಿ ಬೆಳೆ ಬೆಳೆಯಲು ಬೀಜ, ಉಳುಮೆ, ಕೂಲಿ, ಕಳೆ ತೆಗೆಯುವುದು, ನೀರಾವರಿ ಸೇರಿದಂತೆ ಕನಿಷ್ಠ ₹20,000 ರಿಂದ ₹30,000ವರೆಗೆ ಖರ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ₹2,500 ನೀಡಿ ರೈತರ ಸಂಕಷ್ಟ ಪರಿಹರಿಸಿದ್ದೇವೆ ಎಂದು ಹೇಳುವುದು ಯಾವ ನ್ಯಾಯ? ಬಿತ್ತನೆ ಬೀಜಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಉಳುಮೆ, ಕೂಲಿ, ನೀರು ಎಲ್ಲ ಸೇರಿಸಿದರೆ ಹತ್ತಾರು ಸಾವಿರ ರೂಪಾಯಿ ಖರ್ಚಾಗುತ್ತದೆ. ಗೃಹಲಕ್ಷ್ಮಿಗೆ 2,000 ರು. ಕೊಡುವಾಗ ರೈತರಿಗೆ 2,500 ರು.ನೀಡಲಾಗುತ್ತಿದೆ. ಕೂಲಿ ಕೆಲಸಕ್ಕೆ ಹೋದರೆ ಇದಕ್ಕಿಂತ ಹೆಚ್ಚು ದೊರೆಯುತ್ತದೆ. ಇದು ರೈತರಿಗೆ ಪರಿಹಾರವೇ? ರೈತರನ್ನು ಅವಮಾನಿಸುವುದೇ ಎಂದು ಅಶೋಕ್‌ ಪ್ರಶ್ನಿಸಿದರು.ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿದ್ದು, ಇನ್ನಷ್ಟು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆಯಿದೆ ಎಂದು ಸರ್ಕಾರವೇ ಹೇಳಿರುವ ಸಂದರ್ಭದಲ್ಲಿ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕಿತ್ತು. ನಾವು ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದೆವು. ಅದಾಗದಿದ್ದರೂ ಕನಿಷ್ಠ 25 ಸಾವಿರ ರು. ನೀಡಬೇಕಿತ್ತು. ರೈತರು ಹೊಲದ ಕಡೆ ಹೋಗಲಾಗದ ಸ್ಥಿತಿ ಬಂದಿದೆ. ಜಾನುವಾರುಗಳಿಗೆ ಮೇವು ಸಿಗದೆ ಕಾಡಿನತ್ತ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಮಕ್ಕಳು ಉದ್ಯೋಗಕ್ಕಾಗಿ ಊರು ಬಿಟ್ಟು ಹೋಗುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರಕ್ಕೆ ರೈತರ ನೋವು ಕಾಣುತ್ತಿಲ್ಲ. ಕಣ್ಣಿದ್ದರೂ ರೈತರ ಸಂಕಷ್ಟ ಕಾಣದ, ಕಿವಿಯಿದ್ದರೂ ರೈತರ ಕೂಗು ಕೇಳದ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೃತೀಯಲಿಂಗಿ ಕಿರುಕುಳ: ಮಾರ್ಗಸೂಚಿ ಪ್ರಕಟ
ಸತ್ತ ಬಾಲಕನ ಇಟ್ಕೊಂಡು 1 ಕೋಟಿ ರು. ಸುಲಿಗೆಗೆ ಸಂಚು