ಕನ್ನಡಪ್ರಭ ವಾರ್ತೆ ದಾವಣಗೆರೆ
ಬಸವರಾಜ ಪೇಟೆ, ಕಾಯಿಪೇಟೆ, ಸ್ವಾಗೇರಪೇಟೆ ಸೇರಿ ನಗರದ ವಿವಿಧೆಡೆ ಸತತ 2ನೇ ದಿನವೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಪರ ರೋಡ್ ಶೋ ನಡೆಸಿ, ಮತಯಾಚಿಸಿದರು. ಉರಿವ ಬಿಸಿಲನ್ನೂ ಲೆಕ್ಕಿಸದೆ ಸುಮಾರು 2 ಗಂಟೆ ಅವರು ರೋಡ್ ಶೋ ನಡೆಸಿದರು.
ದಕ್ಷಿಣದ ಬಸವರಾಜ ಪೇಟೆಯಿಂದ ತೆರೆದ ವಾಹನದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಭರ್ಜರಿ ರೋಡ್ ಶೋ ನಡೆಸಿ, ಮತಯಾಚಿಸಿದರು. ಹುಬ್ಬಳ್ಳಿ ಚೌಡಪ್ಪ ಗಲ್ಲಿ, ಮಹಾರಾಜ ಪೇಟೆ, ಹಾಸಭಾವಿ ವೃತ್ತ, ಕಾಯಿಪೇಟೆ ಬಸವೇಶ್ವರ ದೇವಸ್ಥಾನ ರಸ್ತೆ, ವಿಜಯಲಕ್ಷ್ಮೀ ರಸ್ತೆ, ದೊಡ್ಡಪೇಟೆ, ವೀರ ಮದಕರಿ ನಾಯಕ ವೃತ್ತ ಇತರೆಗೆ ರೋಡ್ ಶೋ ಸಾಗಿತು.ಹೋದಲ್ಲೆಲ್ಲಾ ಅಭಿಮಾನಿಗಳು, ಹಿತೈಷಿಗಳು ಯಡಿಯೂರಪ್ಪನವರಿಗೆ ಪುಷ್ಪವೃಷ್ಟಿ ಮೂಲಕ ಸ್ವಾಗತಿಸಿ, ರಾಜಾಹುಲಿ ಎಂಬ ಘೋಷಣೆ ಕೂಗುತ್ತಾ, ಸನ್ಮಾನಿಸುತ್ತಾ, ಕೈ ಮುಗಿಯುತ್ತಾ, ಕೈಬೀಸುತ್ತಾ, ಹೂವಿನ ರೀತಿ ಚಿಹ್ನೆ ತೋರಿಸುವ ಮೂಲಕ ಬೆಂಬಲಿಸುತ್ತಿದ್ದುದು ಕಂಡು ಬಂತು.
ರೋಡ್ ಶೋಗೂ ಮುನ್ನ ಡಿಸಿಎಂ ಲೇಔಟ್‌ನಲ್ಲಿ ಆರ್ಯ ವೈಶ್ಯ ಸಂಘ ಸಂಸ್ಥೆಗಳ ಸಮೂಹ ಆಯೋಜಿಸಿದ್ದ ‘ಆರ್ಯವೈಶ್ಯ ಬಂಧುಗಳ ಸ್ನೇಹ ಮಿಲನ’ ಸಮಾರಂಭದಲ್ಲಿ ಪಾಲ್ಗೊಂಡು, ಬಿಜೆಪಿ ಪರ ಮತಯಾಚಿಸಿದರು. ಅಲ್ಲದೆ, ಪಿ.ಜೆ.ಬಡಾವಣೆಯಲ್ಲಿರುವ ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನಿವಾಸಕ್ಕೆ ಭೇಟಿ ನೀಡಿ, ಮಾಜಿ ಸಚಿವ ದಿವಂಗತ ಎಚ್.ಶಿವಪ್ಪನವರ ಜನ್ಮದಿನಾಚರಣೆಯಲ್ಲಿ ಭಾಗಿಯಾದರು.