ಮಾಜಿ ಸಚಿವ ಡಾ.ಕೆ.ಸುಧಾಕರ್ । ನಾರಾಯಣಪುರದಲ್ಲಿ ಮನೆಮನೆಗೂ ಮಂತ್ರಾಕ್ಷತೆ
ಕನ್ನಡಪ್ರಭ ವಾರ್ತೆ ವಿಜಯಪುರಕಾಂಗ್ರೆಸ್ ಎಂದಿಗೂ ಹಿಂದೂಗಳ ಭಾವನೆಗೆ ಬೆಲೆ ನೀಡಿಲ್ಲ. ಯಾವಾಗಲೂ ಹಿಂದುತ್ವಕ್ಕೆ ವಿರುದ್ಧವಿರುವ ಕಪಟ ಪಕ್ಷ ಕಾಂಗ್ರೆಸ್ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಜಯಪುರ ಪಟ್ಟಣದ ಸಮೀಪ ಗೊಡ್ಲುಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಮನೆಗಳಿಗೆ ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ ಮತ್ತು ಕರಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ೬೦೦ ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ಯಾಚಾರ, ದರೋಡೆಗಳಿಂದ ಕಾನೂನು ಸುವ್ಯವಸ್ಥೆ ಕುಸಿದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇವೆಲ್ಲವೂ ಉಚಿತವಾಗಿ ದೊರೆಯುತ್ತಿವೆ. ರಾಮಮಂದಿರದ ವಿಷಯದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಬೆರೆಸುತ್ತಿದ್ದಾರೆ. ೧೯೫೧ ರಲ್ಲಿ ಬಿಜೆಪಿ ಇಲ್ಲದಿದ್ದಾಗ ಸೋಮನಾಥ ದೇವಸ್ಥಾನದ ಕಾರ್ಯಕ್ರಮಕ್ಕೂ ಜವಹರಲಾಲ್ ನೆಹರು ಹೋಗಿರಲಿಲ್ಲ. ಕಾಂಗ್ರೆಸ್ ಎಂದಿಗೂ ಹಿಂದೂಗಳ ಭಾವನೆಗೆ ಬೆಲೆ ನೀಡಿಲ್ಲ. ಯಾವಾಗಲೂ ಹಿಂದುತ್ವಕ್ಕೆ ವಿರುದ್ಧವಿರುವ ಪಕ್ಷ ಕಾಂಗ್ರೆಸ್, ‘ಜಾತ್ಯತೀತತೆ’. ‘ವಸುಧೈವ ಕುಟುಂಬಕಂ’, ‘ಸರ್ವೇ ಜನಾಃ ಸುಖಿನೋಭವಂತು’ ಎನ್ನುವುದು ಹಿಂದುತ್ವದ ಸಿದ್ಧಾಂತ. ಹಿಂದುತ್ವವನ್ನು ಲಘುವಾಗಿ ಕಂಡರೆ ಜನರು ತಕ್ಕ ಶಾಸ್ತಿ ಮಾಡುತ್ತಾರೆ. ಶ್ರೀರಾಮನ ವಿಚಾರದಲ್ಲಿ ಕಾಂಗ್ರೆಸ್‌ನವರು ಇನ್ನಾದರೂ ನಂಬಿಕೆಯಿಡಬೇಕು. ನಾವ್ಯಾರೂ ಅಲ್ಪಸಂಖ್ಯಾತರ ವಿರೋಧಿಗಳಲ್ಲ, ಶ್ರೀರಾಮ ಹಾಗೂ ಕರ್ನಾಟಕದ ನೆಲಕ್ಕೆ ದೊಡ್ಡ ನಂಟಿದೆ. ಶ್ರೀರಾಮನು ಸೀತೆಯನ್ನು ಲಂಕೆಯಿಂದ ಕರೆತರಲು ಹೊರಟಾಗ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆಗೆ ಬಂದಿದ್ದ. ಆಗ ವಾನರರು ಸಹಕಾರ ನೀಡಿ ಸೇತುವೆ ಕಟ್ಟಿದ್ದರು. ಹಿಂದಿನ ಬಿಜೆಪಿ ಸರ್ಕಾರ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿತ್ತು. ಚಿಂತಾಮಣಿಯ ಕೈವಾರ ಬೆಟ್ಟಕ್ಕೆ ಶ್ರೀರಾಮ ಕುಟುಂಬ ಸಮೇತ ಬಂದು ನೆಲೆಸಿದ್ದ. ವಾನರರು ಹೇಗೆ ಸೇತುವೆಯನ್ನು ಕಟ್ಟಿದ್ದರೋ, ಅದೇ ರೀತಿ ಕೋಟ್ಯಂತರ ಭಕ್ತರು ಪ್ರಾಣ ಪ್ರತಿಷ್ಠಾಪನೆ ಮಾಡಲು ಮಂತ್ರಾಕ್ಷತೆ ಹಂಚುತ್ತಿದ್ದಾರೆ ಎಂದರು.
ಗೊಡ್ಲುಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷ ಜಗದೀಶ್ ಮಾತನಾಡಿ, ನೂರಾರು ವರ್ಷಗಳಿಂದ ಕೋಟ್ಯಂತರ ಹಿಂದೂಗಳು ಕಾತುರದಿಂದ ಕಾಯುತ್ತಿದ್ದ ಪ್ರಭು ಶ್ರೀರಾಮನ ಮಂದಿರ ಜ.೨೨ರಂದು ಲೋಕಾರ್ಪಣೆಗೊಳ್ಳುತ್ತಿದ್ದು, ಇಂತಹ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿರುವ ನಾವೇ ಧನ್ಯರು, ರಾಮಮಂದಿರ ನಿರ್ಮಾಣಕ್ಕಾಗಿ ಲಕ್ಷಾಂತರ ಜನರು ಹೋರಾಡಿದ್ದರ ಫಲವೇ ಇಂದು ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಗೆ ಸಾಧ್ಯವಾಗಿದೆ. ೨೨ ರಂದು ನಾವಿರುವ ಜಾಗದಲ್ಲೇ ಶ್ರೀರಾಮನ ಪೂಜಿಸಿ, ದೀಪ ಹಚ್ಚುವ ಕೆಲಸ ಮಾಡುವಂತೆ ಗ್ರಾಮದ ಜನರಿಗೆ ತಿಳಿಸಿದರು.ಮಾಜಿ ಶಾಸಕ ರಾಜಣ್ಣ, ಮುಖಂಡರಾದ ಚೇತನ್, ಬುಳಹಳ್ಳಿ ರಾಜಪ್ಪ, ಶ್ರೀನಿವಾಸ್, ಪುರ ಕೃಷ್ಣಪ್ಪ, ಕಲ್ಯಾಣ ಬಾಬು, ಅನಂದಮ್ಮ ಸೇರಿದಂತೆ ಗೊಡ್ಲುಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಮುಖಂಡರು ಇದ್ದರು.
----