ಧಾರವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರ ಆಡಳಿತವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಕುದುರೆ ವ್ಯಾಪಾರದ ಮೂಲಕ ಸಚಿವಗಿರಿ ಪಡೆಯುವ ಮಟ್ಟಕ್ಕೆ ರಾಜ್ಯದ ರಾಜಕಾರಣವನ್ನು ಕಾಂಗ್ರೆಸ್ ತಂದಿದೆ ಎಂದು ಮಾಜಿ ಶಾಸಕ ಪಿ. ರಾಜೀವ್ ಆರೋಪಿಸಿದರು.
ಕೈಗಾರಿಕೆಗಳ ವಿದ್ಯುತ್ ದರ ಹೆಚ್ಚಳದಿಂದ ಉದ್ಯಮ ವಲಯಕ್ಕೆ ಹೊಡೆತ ಬಿದ್ದಿದೆ. ಪಕ್ಕದ ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ಎಷ್ಟು ದರದಲ್ಲಿ ವಿದ್ಯುತ್ ನೀಡಲಾಗುತ್ತಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಅಬಕಾರಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ₹45 ಸಾವಿರ ಕೋಟಿ ಗುರಿ ಇಟ್ಟುಕೊಂಡಿದೆ. ಗುರಿ ಮುಟ್ಟಿಸಲು ಎಲ್ಲೆಂದರಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ನಡೆಯುತ್ತಿದ್ದರೂ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ದೂರಿದರು.ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಉದ್ಯೋಗದ ಭರವಸೆಗಳನ್ನು ಈಡೇರಿಸಿಲ್ಲ. ಒಂದೇ ವರ್ಷದಲ್ಲಿ ಎರಡು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದ ಸರ್ಕಾರದ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಸಾವಿರಾರು ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿದ್ದು, ಶಿಕ್ಷಕರ ಕೊರತೆ ಮುಂದುವರಿದಿದೆ ಎಂದರು.
ಸರ್ಕಾರ ಕೂಡಲೇ ರೋಸ್ಟರ್ ವ್ಯವಸ್ಥೆಯಲ್ಲಿನ ಗೊಂದಲ ಸರಿಪಡಿಸಬೇಕು. ಈ ಕುರಿತು ಎಲ್ಲ ಸಮುದಾಯಗಳ ಯುವಕರೊಂದಿಗೆ ಸಂವಾದ ನಡೆಸಲಾಗುವುದು. ಉದ್ಯೋಗ ಭರ್ತಿ ಮಾಡದಿದ್ದರೆ ಜನರೇ ಈ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ಪಿ. ರಾಜೀವ್ ಎಚ್ಚರಿಸಿದರು.