ಹೂವಿನಹಡಗಲಿ: ನಾರಿಯರಿಗೆ ಶೇ.33ರಷ್ಟು ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಮತ ಹಾಕಿದ ಕಾಂಗ್ರೆಸ್ ತನ್ನ ಕರಾಳಮುಖ ಅನಾವರಣಗೊಳಿಸಿ ತನ್ನ ಮೋಸದಾಟ ಮುಂದುವರಿಸಿದೆ. ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಕಸಿಯುವ ಕೆಲಸ ಮಾಡಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುವರ್ಣ ಆರುಂಡಿ ಆರೋಪಿಸಿದರು.
ಕಾಂಗ್ರೆಸ್ ಮಹಿಳೆಯರಿಗೆ 4 ಗ್ಯಾರಂಟಿ ಯೋಜನೆಗಳನ್ನು ನೀಡಿ ಬಾಯಿ ಮುಚ್ಚಿಸಿದೆ. ಆದರೆ ಕೇಂದ್ರ ಸರ್ಕಾರ ನಾರಿಯರಿಗೆ ಶಕ್ತಿ ನೀಡುವಂತಹ ಮಹತ್ವದ ಮಹಿಳಾ ಮೀಸಲಾತಿಗೆ ರಾಹುಲ್ ಗಾಂಧಿ ಮತ್ತು ಅವರ ಟೀಮ್ ಅಡ್ಡಿಪಡಿಸಿ, ಸಂಭ್ರಮಾಚರಣೆ ಮಾಡುತ್ತಿರುವುದು ಮಹಿಳಾ ಕುಲಕ್ಕೆ ಮಾಡಿದ ಮೋಸ ಎಂದು ಜರಿದರು.
ಶೇ.33 ರಷ್ಟು ಮಹಿಳಾ ಮೀಸಲಾತಿ ಮಸೂದೆ ಕುರಿತು ಹಳ್ಳಿಯಲ್ಲಿ ಜಾಗೃತಿ ಮೂಡಿಸಿ ಬದಲಾವಣೆ ತರಬೇಕಿದೆ. ಇವರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವದ ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ದೊಡ್ಡ ಅನ್ಯಾಯ ಮಾಡಿದೆ. ಈ ಕುರಿತು ಪ್ರತಿ ಹಳ್ಳಿಗಳ ಮಹಿಳೆಯರಿಗೆ ಬೂತ್ ಮಟ್ಟದಲ್ಲಿ ಅರಿವು ಮೂಡಿಸುತ್ತೇವೆಂದು ಹೇಳಿದರು.
ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೀರಾಬಾಯಿ ಮಾತನಾಡಿ, ಮಹಿಳೆಯರ ಬಹು ದಿನಗಳ ಕನಸಿಗೆ ಕಾಂಗ್ರೆಸ್ ಕೊಳ್ಳಿ ಇಟ್ಟಿದೆ. ಮಹಿಳಾ ಮೀಸಲಾತಿ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ಮಾಡುತ್ತಿದ್ದರೆ ಇತ್ತ ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ಶಾಪ ತಟ್ಟದೇ ಬಿಡುವುದಿಲ್ಲ ಎಂದು ಆರೋಪಿಸಿದರು.