ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ರಾಯಚೂರಿಗೆ 3, ಕಲಬುರಗಿಗೆ 1 ಸ್ಥಾನ ನೀಡುವ ಮೂಲಕ ಕೈ ಹೈಕಮಾಂಡ್ ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದೆ.
ಭಾನುವಾರ ಹೈಕಮಾಂಡ್ ಡಾ. ಮಲ್ಲಿಕಾರ್ಜುನ ಖರ್ಗೆ ಅನುಮೋದಿತ ಪಕ್ಷದ 8 ಅಭ್ಯರ್ಥಿಗಳ ಹೆಸರಿರುವ ಪಟ್ಟಿಯಲ್ಲಿ ರಾಯಚೂರಿನ ಮೂವರಿಗೆ, ಕಲಬುರಗಿಯ ಒಬ್ಬರು ಸೇರಿದಂತೆ ನಾಲ್ವರು ಕಲ್ಯಾಣ ನಾಡಿನವರೇ ಆಗಿರುವುದು ವಿಶೇಷವಾಗಿದೆ.ಅದರಲ್ಲಿಯೂ ಟಿಕೆಟ್ ಘೋಷಣೆಯಾಗಿರುವ ಕಲ್ಯಾಣದ ನಾಲ್ವರಲ್ಲಿ ಎ. ವಸಂತಕುಮಾರ್, ಜಗದೇವ ಗುತ್ತೇದಾರ್ ಬೇರುಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಕಲ್ಯಾಣದ ಭಾಗವಾಗಿರುವ ಭತ್ತದ ನಾಡು ರಾಯಚೂರಿಗೆ ಬಂಪರ್ ದಕ್ಕಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಆಯ್ಕೆ ಪ್ರಕ್ರಿಯೆಯಲ್ಲಿ ರಾಯಚೂರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ ಕಾಂಗ್ರೆಸ್ ಹೈಕಮಾಂಡ್ ಈ ಜಿಲ್ಲೆಗೆ ಸೇರಿರುವ ಮೂವರಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ.ಸಿದ್ದಾಮಯ್ಯ ಸರಕಾರದಲ್ಲಿ ಸಚಿವರಾಗಿರುವ ಎನ್.ಎಸ್.ಬೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತ ಕುಮಾರ ಹಾಗೂ ಕೆಪಿಸಿಸಿ ಯುವ ಘಟಕದ ಮಾಜಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರಿಗೆ ಎಂಎಲ್‌ಸಿ ಟಿಕೆಟ್ ಒಲಿದಿದೆ. ಇಂತಹ ಕ್ರಮ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿಯೇ ಮೊದಲು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಇನ್ನು ಕಲಬುರಗಿಯ ಜಿಲ್ಲಾಧ್ಯಕ್ಷರಾಗಿರುವ ಜಗದೇವ ಗುತ್ತೇದಾರ್ ಅವರಿಗೂ ಟಿಕೆಟ್ ಒಲಿದಿದ್ದು ಜಿಲ್ಲೆಯ ಮಟ್ಟಿಗೆ ಇದೂ ಸಹ ಅಚ್ಚರಿ ಎಂದೇ ಅರ್ಥೈಸಲಾಗುತ್ತಿದೆ. ಕಳೆದ 7 ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಕಮೀಟಿ ಅಧ್ಯಕ್ಷರಾಗಿದ್ದುಕೊಂಡು ಕೆಲಸ ಮಾಡುತ್ತಿದ್ದ ಜಗದೇವ ಗುತ್ತೇದಾರ್ ಈಡಿಗ ಸಮುದಾಯಕ್ಕೆ ಸೇರಿದವರು, ಖರ್ಗೆಯವರ ಆಪ್ತರ ಗುಂಪಿಗೆ ಸೇರಿದವರು.ಅವರ ಪಕ್ಷ ನಿಷ್ಠೆ ಹಾಗೂ ಖರ್ಗೆಯವರೊದಿಗಿನ ಒಡನಾಟವೇ ಅವರನ್ನು ಇಂದು ಮೇಲ್ಮನೆ ಸದಸ್ಯತ್ವದ ಹೊಸ್ತಿಲಿಗೆ ತಂದು ನಿಲ್ಲಿಸಿದೆ ಎಂದೇ ಹೇಳಲಾಗುತ್ತಿದೆ. ಜಿಪಂ ಸದಸ್ಯರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಕೀಯದಲ್ಲಿ ಮೆಟ್ಟಿಲು ಹತ್ತುತ್ತ ಬಂದ ಜಗದೇವ ಗುತ್ತೇದಾರ್ ಸತತ 3 ನೇ ಅವಧಿಗೆ ಜಿಲ್ಲಾ ಕಾಂಗ್ರೆಸ್ ಸಾರಥ್ಯ ಹೊಣೆ ಹೊತ್ತವರು.
ಇನ್ನು ರಾಯಚೂರಿನ ಎ ವಸಂತ ಕುಮಾರ್ ಅಲ್ಲಿನ ಜಿಲ್ಲಾ ಕಮೀಟಿ ಅಧ್ಯಕ್ಷರಾಗಿದ್ದವರಲ್ಲದೆ ಪ್ರಸಕ್ತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ. ಕೆಪಿಸಿಸಿ ವಕ್ತಾರರಾಗಿ, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಪಕ್ಷ ಸಂಘಟನೆಗೆ ತೊಡಗಿಸಿಕೊಂಡವರು.ಸಚಿವರಾಗಿರುವ ಬೋಸರಾಜು, 4 ಬಾರಿ ಶಾಸಕರಾಗಿರುವ ಬಸವನಗೌಡ ಬಾದರ್ಲಿಇವರಿಗೂ ಪಕ್ಷ ಆಯ್ಕೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಭಾಗಕ್ಕೆ ರಾಜಕೀಯವಾಗಿ ಮೇಲ್ಮನೆಯ ಆಯ್ಕೆಯಲ್ಲಿ ಸಿಂಹಪಾಲು ನೀಡಿ ಅಚ್ಚರಿ ಮೂಡಿಸಿದೆ.
ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಭದ್ರಕೋಟೆ. ಕಳೆದ ಲೋಕಸಭೆಯಲ್ಲಿ ಇದು ಬಿಜೆಪಿ ಪರ ವಾಲಿತ್ತಾದರೂ ಈ ಬಾರಿ ಮತ್ತೆ ಅಸೆಂಬ್ಲಿಯಲ್ಲಿ ಕೈಹಿಡಿದಿರುವ ಈ ಭೂಭಾಗ, ಲೋಕಸಭೆಯಲ್ಲಿಯೂ ಕೈ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿಯೇ ಕಾಂಗ್ರೆಸ್ ಹೈಕಮಾಂಡ್ ಡಾ. ಖರ್ಗೆಯವರು ತಮ್ಮ ತವರಿನ ಮುಖಂಡರಿಗೆ ಹೆಚ್ಚಿನ ಪ್ರಾಧಾನ್ಯತೆ ಮೇಲ್ಮನೆಯಲ್ಲಿ ಕೊಟ್ಟು ರಾಜಕೀಯವಾಗಿ ಮತತೆ ಕಲ್ಯಾಣ ಕಾಂಗ್ರೆಸ್ ಭದ್ರಕೋಟೆಯಾಗಿಸುವತ್ತ ಹೆಚ್ಚಿನ ಲಕ್ಷ ಕೊಟ್ಟಿದ್ದಾರೆ ಎಂದೇ ಹೇಳಲಾಗುತ್ತಿದೆ.