ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡಿದ್ದನ್ನು ವಿರೋಧಿಸಿ ನಗರದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಟ್ಟಿಗೆಗಳು, ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ಹಿಡಿದು ಬೃಹತ್ ಪ್ರತಿಭಟನೆ ನಡೆಯಿತು.ನಗರದ ಅಂಬೇಡ್ಕರ್ ವೃತ್ತದಿಂದ ಕಟ್ಟಿಗೆ, ಗ್ಯಾಸ್ ಸಿಲಿಂಡರ್‌ಗಳೊಂದಿಗೆ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಬಳಿಕ ಕ್ಲಾಕ್ ಟವರ್ ಎದುರು ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ದೇಶದಲ್ಲಿ ಯುಪಿಎ ಸರ್ಕಾರ ಇದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಬ್ಯಾರಲ್‌ಗೆ 141 ಡಾಲರ್ ಇದ್ದಾಗಲೂ ಜನರಿಗೆ ಹೊರೆಯಾಗಬಾರದು ಎಂಬ ಉದ್ದೇಶದಿಂದ 60 ರು.ಗೆ ಪೆಟ್ರೋಲ್ ವಿತರಿಸಲಾಗುತ್ತಿತ್ತು. ಅಡುಗೆ ಅನಿಲ ದರ 480 ರು. ಇತ್ತು. ಆದರೆ ಈಗ ಕಚ್ಚಾತೈಲದ ಬೆಲೆ 64 ಡಾಲರ್‌ಗೆ ಇಳಿಕೆಯಾಗಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದು ಏಕೆ? ರಾಜ್ಯ ಸರ್ಕಾರ 2 ರು. ದರ ಹೆಚ್ಚಿಸಿದರೆ ಜನಾಕ್ರೋಶ ಯಾತ್ರೆ ಮಾಡುವ ಬಿಜೆಪಿಯವರಿಗೆ ನಾಚಿಕೆಯಾಗಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ದೇಶದಲ್ಲಿ ಯುಪಿಎ ಸರ್ಕಾರ ಇದ್ದಾಗ ನರೇಂದ್ರ ಮೋದಿ ಮಾಡಿದ್ದ ಭಾಷಣದ ಮಾತುಗಳನ್ನು ಈಗ ನೆನಪಿಸುವ ಕಾಲ ಬಂದಿದೆ. ಬಿಜೆಪಿ ಬಂದ ನಂತರ ಬಹುದೊಡ್ಡ ಸಮಸ್ಯೆ ನಿರುದ್ಯೋಗ ಸಮಸ್ಯೆ ಮತ್ತು ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮಾತನಾಡಿದರು. ಮುಖಂಡರಾದ ಎಂ.ಎಸ್. ಮುಹಮ್ಮದ್, ಇನಾಯತ್ ಅಲಿ, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್, ಶಿವರಾಂ, ಭರತ್ ಮುಂಡೋಡಿ, ಶಾಲೆಟ್ ಪಿಂಟೊ, ಇಬ್ರಾಹಿಂ ನವಾಝ್, ವಿಶ್ವಾಸ್‌ದಾಸ್, ಸುಹಾನ್ ಆಳ್ವ, ಬಿ.ಎಂ. ಅಬ್ಬಾಸ್ ಆಲಿ, ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಮತ್ತಿತರರು ಇದ್ದರು.