ನೇಕಾರಿಕೆ ಉತ್ತೇಜಕ ಯೋಜನೆ ಕಡೆಗಣಿಸಿದ ಕಾಂಗ್ರೆಸ್‌ : ಬಿ.ವೈ. ವಿಜಯೇಂದ್ರ

KannadaprabhaNewsNetwork |  
Published : Feb 13, 2026, 03:00 AM IST
Vijayendra

ಸಾರಾಂಶ

ರೈತ ಮತ್ತು ನೇಕಾರರು ದೇಶದ ಎರಡು ಕಣ್ಣುಗಳಿದ್ದಂತೆ.   ಕಡೆಗಣನೆಯಾದರೆ ಪಾರಂಪರಿಕ ವೃತ್ತಿ ಪದ್ಧತಿ ನಾಶವಾಗಿ ಸಾಮಾಜಿಕ ವೈರುಧ್ಯ ಸೃಷ್ಟಿಯಾಗುವುದು ಖಂಡಿತ. ವೃತ್ತಿಪರ ನೇಕಾರಿಕೆ ಉದ್ಯೋಗ ನಶಿಸದಂತೆ ನಾವೆಲ್ಲರೂ ನೇಕಾರರೊಡನೆ ಹೋರಾಟ ನಡೆಸಲು ಬದ್ಧ ಎಂದು  ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.

  ರಬಕವಿ-ಬನಹಟ್ಟಿ :  ರೈತ ಮತ್ತು ನೇಕಾರರು ದೇಶದ ಎರಡು ಕಣ್ಣುಗಳಿದ್ದಂತೆ. ಯಾವುದಕ್ಕಾದರೂ ಕಡೆಗಣನೆಯಾದರೆ ಪಾರಂಪರಿಕ ವೃತ್ತಿ ಪದ್ಧತಿ ನಾಶವಾಗಿ ಸಾಮಾಜಿಕ ವೈರುಧ್ಯ ಸೃಷ್ಟಿಯಾಗುವುದು ಖಂಡಿತ. ವೃತ್ತಿಪರ ನೇಕಾರಿಕೆ ಉದ್ಯೋಗ ನಶಿಸದಂತೆ ನಾವೆಲ್ಲರೂ ನೇಕಾರರೊಡನೆ ಹೋರಾಟ ನಡೆಸಲು ಬದ್ಧ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.

ಬನಹಟ್ಟಿ ಸಹಕಾರಿ ನೂಲಿನ ಗಿರಣಿ ಸಭಾಂಗಣದಲ್ಲಿ ಗುರುವಾರ ನಡೆದ ನೇಕಾರರೊಡನೆ ಸಂವಾದ ಕಾರ್ಯಕ್ರಮದಲ್ಲಿ ನೇಕಾರರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ನೇಕಾರಿಕೆ ಉತ್ತೇಜಕ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡೆಗಣಿಸಿರುವುದು ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಬಹುದೊಡ್ಡ ಪ್ರಮಾದ. ಇದಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.ರಾಜ್ಯದ ಜನತೆ ಇಟ್ಟಿದ್ದ ನಿರೀಕ್ಷೆಗಳನ್ನು ಮಣ್ಣುಗೂಡಿಸಿದ್ದಲ್ಲದೇ ಜನ ವಿರೋಧಿ ತುಘಲಕ್ ಆಡಳಿತ ನೀತಿಯಿಂದ ಸರ್ಕಾರಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಭರಾಟೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ ಜನತೆಯ ನ್ಯಾಯಯುತ ಯೋಜನೆಗಳಿಗೆ ತಿಲಾಂಜಲಿ ನೀಡುವ ಮೂಲಕ ಬಡವರ, ದಲಿತರ, ಹಿಂದುಳಿದವರ ಜೀವನ ನರಕವಾಗಿಸಿದ ಶ್ರೇಯಸ್ಸು ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದು ದೂರಿದರು.

ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಜಾರಿಗೊಳಿಸಿದ್ದ ಜವಳಿ ಪಾರ್ಕ್, ನೇಕಾರ ಪ್ಯಾಕೇಜ್, ನೇಕಾರ ಸಾಲ ಮನ್ನಾ, ಉಚಿತ ವಿದ್ಯುತ್ ನೀಡಿಕೆ, ಹೊಸ ಮಗ್ಗದ ಖರೀದಿಗೆ ಸರ್ಕಾರ ನೀಡುತ್ತಿದ್ದ ಸಹಾಯಧನ ಸೌಲಭ್ಯ ಸ್ಥಗಿತಗೊಳಿಸಿದ್ದರಿಂದ ನೇಕಾರಿಕೆ ಕುಲಕಸಬು ಸರ್ಕಾರದ ನಿರ್ಲಕ್ಷ್ಯದಿಂದ ಅವನತಿಯ ಅಂಚಿನಲ್ಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಗ್ಯಾರಂಟಿ ಹೆಸರಲ್ಲಿ ದರೋಡೆ ನಡೆಯುತ್ತಿದೆ. ಶಾಸಕರಿಗೆ ಕ್ಷೇತ್ರದಲ್ಲಿ ಅನುದಾನ ಇಲ್ಲದೆ ಜನತೆಗೆ ಮುಖ ತೋರದ ದುಃಸ್ಥಿತಿ ಬಂದಿದೆ ಎಂದು ಅದೇ ಪಕ್ಷದ ಎಚ್.ಕೆ.ಪಾಟೀಲ, ಬಿ.ಆರ್.ಪಾಟೀಲ, ರಾಜು ಕಾಗೆ ಸದನದಲ್ಲೇ ಚಾಟಿ ಬೀಸಿದ್ದಾರೆ. ಸರ್ಕಾರ ಎಐಸಿಸಿಯ ಎಟಿಎಂ ಆಗಿದೆ ಎಂಬುವುದರ ಕುರುಹು ಆಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ತಮ್ಮ ಕುರ್ಚಿಯನ್ನು ಭದ್ರಗೊಳಿಸಲು ಪರದಾಡುತ್ತಿದ್ದು, ಭ್ರಷ್ಟಾಚಾರ ಮಿತಿಮೀರಿದೆ. ಬೆಳಗಾವಿ ಅಧಿವೇಶನದಲ್ಲಿ ಎರಡು ತಿಂಗಳ ಭಾಗ್ಯಲಕ್ಷ್ಮೀ ಯೋಜನೆಯ ₹500 ಕೋಟಿ ಹಣ ಎಲ್ಲಿ ಹೋಗಿದೆ ಎಂಬ ಪ್ರಶ್ನೆಗೆ ಎರಡು ತಿಂಗಳಾದರೂ ಇನ್ನೂ ಉತ್ತರ ನೀಡದೇ ಸರ್ಕಾರ ಭ್ರಷ್ಟತೆಯ ಕರಾಳತೆ ಬಿಂಬಿಸಿದೆ. ಮುಡಾ, ನಿಗಮಗಳ ಹಣ ದುರುಪಯೋಗ, ಇದೀಗ ಅಬಕಾರಿ ಆದಾಯಕ್ಕೆ ಮಿತಿ ಹಾಕುವ ಮೂಲಕ ರಾಜ್ಯದೆಲ್ಲೆಡೆ ದಿನಸಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡುವ ಹೀನ ಸ್ಥಿತಿಗೆ ಸರ್ಕಾರ ನಿಂತ ಕಾರಣ ರಾಜ್ಯ ಕುಡುಕರ ರಾಜ್ಯವಾಗಿದೆ ಎಂದು ಕಿಡಿಕಾರಿದರು.

ಸಂವಾದದಲ್ಲಿ ನೇಕಾರ ಧುರೀಣರಾದ ದುಂಡಪ್ಪ ಮಾಚಕನೂರ, ಮನೋಹರ ಶಿರೋಳ, ಬಸವರಾಜ ತೆಗ್ಗಿ, ಶಂಕರ ಜುಂಜಪ್ಪನವರ, ಜಿ.ಎಸ್.ಗೊಂಬಿ, ಸಂಜಯ ಜವಳಗಿ, ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶೇ.೫೦ರ ಸಹಾಯಧನದಡಿ ಮಗ್ಗ ಖರೀದಿ ನಿಲ್ಲಿಸಿ, ಎಸ್.ಸಿ/ಎಸ್.ಟಿ. ಸಮುದಾಯದ ನೇಕಾರರಿಗೆ ಮಾತ್ರ ಶೇ.90ರಷ್ಟು ಸಹಾಯಧನ ನೀಡುತ್ತಿರುವುದು ರಾಜ್ಯದ ಜವಳಿ ವಿಭಾಗಕ್ಕೆ ಮರಣಶಾಸನವಾಗಿದೆ. ನಮ್ಮ ಉತ್ಪನ್ನಗಳ ತಯಾರಿಕೆ ವೆಚ್ಚ ಹೆಚ್ಚಿದ್ದು, ಬೇಡಿಕೆ ಕುಸಿತವಾಗಿರುವುದು ಸರ್ಕಾರದ ಪ್ರೋತ್ಸಾಹದ ಕೊರತೆ ಕಾರಣವಾಗಿದ್ದರೆ, ನೆರೆಯ ಮಹಾರಾಷ್ಟ್ರದಲ್ಲಿ ೨೬ ಲಕ್ಷ ಮಗ್ಗಗಳಿದ್ದು, ನಮ್ಮಲ್ಲಿ ಅವುಗಳ ಸಂಖ್ಯೆ ಕುಸಿತವಾಗಿದೆ. ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ, ಆಸ್ಪತ್ರೆಗಳು, ನೌಕರರಿಗೆ ಮತ್ತು ಬಡವರಿಗೆ ಪಡಿತರ ಮಾದರಿಯಲ್ಲಿ ನಮ್ಮ ಸೀರೆ, ಬಟ್ಟೆ ವಿತರಿಸುವುದು, ಹೊಸ ಮಗ್ಗ ಖರೀದಿಗೆ ಶೇ.50 ಸಹಾಯಧನ ಪುನಾರಂಭ, ನೇಕಾರರಿಗೆ ನೀಡುವ ಸಾಲದ ಪ್ರಮಾಣ ಏರಿಕೆ, ಬಡ್ಡಿ ಹಣ ಎರಡು ವರ್ಷಗಳಿಂದ ಮರುಪಾವತಿಯಾಗದ್ದರಿಂದ ನೇಕಾರರಿಗೆ ಹೊಸ ಸಾಲ ಸಿಗುತ್ತಿಲ್ಲ. ನೇಕಾರರಿಂದಲೇ ಆರಂಭಗೊಂಡ ರಾಜ್ಯದ ಏಕೈಕ ಸಹಕಾರಿ ನೂಲಿನ ಗಿರಣಿಯ ಅವಧಿ ಮುಗಿದ ಕಾರಣ ಹೊಸ ಲೀಸ್ ಮಾಡಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಜವಳಿಪಾರ್ಕ್‌ ಆರಂಭಿಸಬೇಕು

ನೇಕಾರರಿಗೆ ಕಾರ್ಯಾಗಾರ ಸೇರಿದ ಮನೆಗಳನ್ನು ವಿತರಿಸಲು, ಹಳೆಯ ಯಂತ್ರಗಳಿಂದ ಗುಣಮಟ್ಟದ ಉತ್ಪನ್ನ ಸಾಧ್ಯವಾಗದ್ದರಿಂದ ನೇಕಾರರೇ ಇಲ್ಲದ ಯಾದಗಿರಿಯಲ್ಲಿ ಜವಳಿ ಪಾರ್ಕ್ ಆರಂಭಿಸಿದ ಮೂರ್ಖ ನಿರ್ಧಾರ ಬಿಟ್ಟು ನೇಕಾರರೇ ಅಧಿಕವಾಗಿರುವ ಬಾಗಲಕೋಟ ಜಿಲ್ಲೆಯ ಅದರಲ್ಲೂ ರಬಕವಿ-ಬನಹಟ್ಟಿಯಲ್ಲಿ ಮಂಜೂರಾದ ಜವಳಿಪಾರ್ಕ್‌ ಆರಂಭಿಸಬೇಕು ಎಂದು ವಿಜಯೇಂದ್ರ ಅವರನ್ನು ಆಗ್ರಹಿಸಿದರು.

ಅಲ್ಲದೆ, ಕೇಂದ್ರ ಜವಳಿ ಇಲಾಖೆಯಿಂದ ನೇಕಾರಿಕೆ ಉದ್ಯೋಗ ಉಳಿಸಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹ, ವಿದ್ಯುತ್ ಬಿಲ್ ಬಾಕಿ ಹಣ ರದ್ದುಗೊಳಿಸಲು ಪ್ರತಿಭಟನೆ ನಡೆಸಿದ್ದರೂ ಜವಳಿ ಸಚಿವರು ಕೇವಲ ಭರವಸೆ ನೀಡಿತ್ತ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳು ನೇಕಾರರಿಗೆ ಹಣ ಪಾವತಿಸಲು ನೋಟಿಸ್ ನೀಡುತ್ತಿರುವುದನ್ನು ನಿಲ್ಲಿಸಬೇಕು. 4 ದಶಕಗಳಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನತೆಗೆ ಹಕ್ಕುಪತ್ರ ವಿತರಿಸಬೇಕು. ಜವಳಿ ಆಶ್ರಯ ಯೋಜನೆ ಆರಂಭಿಸಬೇಕು. ರೈತ-ನೇಕಾರರ ತಾರತಮ್ಯ ನಿವಾರಿಸಬೇಕು. ನೇಕಾರ ಸಮ್ಮಾನ ಮೊತ್ತವನ್ನು ₹10 ಸಾವಿರಕ್ಕೆ ಏರಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದರು.

ಬಿ.ಎಸ್.ಯಡಿಯೂರಪ್ಪ ನುಡಿದಂತೆ ನಡೆದ ಏಕೈಕ ಸಿಎಂ

ಬಿ.ಎಸ್.ಯಡಿಯೂರಪ್ಪ ನುಡಿದಂತೆ ನಡೆದ ಏಕೈಕ ಸಿಎಂ ಆಗಿದ್ದಾರೆಂದು ರಾಜ್ಯಾದ್ಯಂತ ಜನತೆ ಮಾತಾಡುತ್ತಿದ್ದಾರೆ. ಸಿಎಂ ಹುದ್ದೆಯಲ್ಲಿ ಎಷ್ಟು ವರ್ಷ ಇರುತ್ತೇವೆ ಎಂಬುವುದು ಮುಖ್ಯವಾಗದು. ಬದಲಾಗಿ ಜನತೆಯ ಆಶೋತ್ತರಗಳಿಗೆ, ಅಭಿವೃದ್ಧಿಗೆ ಸ್ಪಂದಿಸುವ ಮೂಲಕ ಜನಮನದಲ್ಲಿ ಉಳಿದಿದ್ದೇವೆ ಎಂಬುವುದು ಮುಖ್ಯವೆಂದು ಹೇಳಿದ ಬಿ.ವೈ.ವಿಜಯೇಂದ್ರ, ಎಲ್ಲ ರಂಗಗಳ ವೃತಿಪರರು ಸ್ವಾಭಿಮಾನಿಯಾಗಿ ಬದುಕಲು ಯೋಜನೆ ರೂಪಿಸಿ ರಾಜ್ಯದ ಪ್ರಗತಿಗೆ ನಾಂದಿ ಹಾಡುವುದು ಮುಖ್ಯ. ನಶಿಸುತ್ತಿರುವ ನೇಕಾರಿಕೆ ಉದ್ಯೋಗಕ್ಕೆ ನೆರವಾಗಲು ಮತ್ತವರ ಬವಣೆ ಖುದ್ದು ವೀಕ್ಷಿಸಲು ಬಂದಿದ್ದೇನೆ ಹೊರತು ಪ್ರಚಾರಕ್ಕಾಗಿ ಅಲ್ಲವೆಂದು ಸ್ಪಷ್ಟ ಪಡಿಸಿದ ಅವರು, ಕುಲಕಸಬು ನೇಕಾರಿಕೆ ಉಳಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿ ನಿಮ್ಮೊಂದಿಗೆ ಬಿಜೆಪಿಯ ಎಲ್ಲ ಶಾಸಕರೊಡನೆ ನಾನೂ ಎಂಥದೇ ಹೋರಾಟಕ್ಕಿಳಿಯಲು ಬದ್ಧ ಎಂದು ವಿಜಯೇಂದ್ರ ಭರವಸೆ ನೀಡಿದರು.

ಶಾಸಕ ಸಿದ್ದು ಸವದಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಹನುಮಂತ ನಿರಾಣಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವಿದ್ಯಾಧರ ಸವದಿ, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಬೀಳಗಿ, ಮನೋಹರ ಶಿರೋಳ, ರೇವಪ್ಪ ಗುಣಕಿ, ಶಂಕರ ಜುಂಜಪ್ಪನವರ, ಮಲ್ಲಿನಾಥ ಕಕಮರಿ, ಸುರೇಶ ಭದ್ರನ್ನವರ, ಅಶೋಕ ರಾವಳ, ಸಂಜಯ ತೆಗ್ಗಿ, ಓಪ್ರಕಾಶ ಕಾಬರಾ, ಆನಂದ ಕಂಪು, ಮಹಾದೇವ ಆಲಕನೂರ, ಪ್ರಭು ಪೂಜಾರಿ, ಸಿದ್ರಾಮ ಸವದತ್ತಿ, ಗೌರಿ ಮಿಳ್ಳಿ, ಸವಿತಾ ಹೊಸೂರ, ಶಂಕರ ಅಂಗಡಿ, ಶರಣು ತಳಕೇರಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಶಿಫ್ಟ್‌ : ಸಂಪುಟ
ಶಕ್ತಿ ಯೋಜನೆ ಫಲಾನುಭವಿ ಸ್ತ್ರೀಯರಿಗೆ ಸ್ಮಾರ್ಟ್‌ಕಾರ್ಡ್‌