ಸಂಡೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರ ಅಂತ್ಯಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ನೀಡದೇ ಅವರನ್ನು ಅವಮಾನಿಸಿದ ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಿ, ಅಂಬೇಡ್ಕರ್ ಜನ್ಮಸ್ಥಳ ಸೇರಿದಂತೆ ಪಂಚತೀರ್ಥಗಳನ್ನು ಅಭಿವೃದ್ಧಿ ಪಡಿಸಿ ಗೌರವ ನೀಡಿದ ಬಿಜೆಪಿ ಗೆಲ್ಲಿಸುವಂತೆ ಮಾಜಿ ಸಚಿವ ಎನ್.ಮಹೇಶ್ ಮನವಿ ಮಾಡಿದರು.ಪಟ್ಟಣದ ಕಾರ್ತಿಕೇಯ ಘೋರ್ಪಡೆ ಅವರ ಬಂಗಲೆಯ ಆವರಣದಲ್ಲಿ ಶುಕ್ರವಾರ ಬಿಜೆಪಿ ಸಂಡೂರು ಮಂಡಲದಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಸಮಾವೇಶ ಹಾಗೂ ಮತದಾನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಿಜೆಪಿ ಮುಖಂಡ ಕಾರ್ತಿಕೇಯ ಘೋರ್ಪಡೆ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿಗಳು ಜನತೆಗೆ ಸರಿಯಾಗಿ ತಲುಪುತ್ತಿಲ್ಲ. ಚುನಾವಣೆಯ ನಂತರ ಇವು ನಿಲ್ಲಬಹುದು. ರಾಜ್ಯದಲ್ಲಿ ಹಣಕಾಸಿನ ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.
ಸಫಾಯಿ ಕರ್ಮಚಾರಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿದರು.ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಸಂಡೂರು ಮಂಡಲ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್. ರಾಮಕೃಷ್ಣ, ಮುಖಂಡರಾದ ಯರ‍್ರಿಸ್ವಾಮಿ ಕರಡಿ, ಎಫ್.ಕುಮಾರನಾಯ್ಕ, ಸತೀಶ್ ಹೆಗಡೆ, ವೀರೇಶ್, ವಿ.ಶಂಕರ್, ಆರ್.ಟಿ. ರಘು, ದರೋಜಿ ರಮೇಶ್, ಚಂದ್ರಶೇಖರ, ರಾಜೇಶ್ ಹೆಗಡೆ, ಚಂದ್ರು, ತಾಯಪ್ಪ ಉಪಸ್ಥಿತರಿದ್ದರು.