ಹಳಿಯಾಳ: ಜೆಡಿಎಸ್ ಮುಖಂಡ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರನ್ನು ಹಣಿಯಲು ಕಾಂಗ್ರೆಸ್- ಬಿಜೆಪಿಗಳೆರಡು ಸಜ್ಜಾಗಿವೆ.
ಈಗ ಇವರಿಬ್ಬರೂ ಘೋಟ್ನೇಕರ ಅವರನ್ನು ಶಕ್ತಿಹೀನರನ್ನಾಗಿಸಲು ಸಹಕಾರ ಸಂಘಗಳ ಮೇಲೆ ಕಣ್ಣು ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡು ರಾಜಕೀಯ ಚದುರಂಗದಾಟವನ್ನು ಆರಂಭಿಸಿದ್ದು, ಮೊದಲ ದಾಳವಾಗಿ ಘೋಟ್ನೇಕರ ಅವರ ಪರಮಾಪ್ತ ಶಿಷ್ಯ, ಹಳಿಯಾಳ ರೈತ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸಂಜು ಪಾಟೀಲ ಹೊರಹೊಮ್ಮಿದ್ದಾರೆ.ಘೋಟ್ನೇಕರ ದೊಸ್ತಿ ಬೇಡ: ಕಳೆದ ಅ. 19ರಂದು ದೇಶಪಾಂಡೆಯವರ ಕಾರ್ಯಾಲಯದಲ್ಲಿ ರೈತ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಸಂಜು ಪಾಟೀಲ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿಕೊಂಡು ಸುದ್ದಿಗೋಷ್ಠಿ ನಡೆಸಿ, ಘೋಟ್ನೇಕರ ಅವರನ್ನು ಮನಬಂದಂತೆ ಟೀಕಿಸಿದ್ದರು. ಅಲ್ಲದೇ ಶಾಸಕ ದೇಶಪಾಂಡೆಯವರೇ ಶ್ರೇಷ್ಠ ನಾಯಕರು, ಅವರಿಂದಲೇ ಹಳಿಯಾಳದ ಅಭಿವೃದ್ಧಿ ಸಾಧ್ಯ, ಅದಕ್ಕಾಗಿ ನಾವು ಮತ್ತೆ ಕಾಂಗ್ರೆಸ್ ಸೇರಲು ಬಯಸಿದ್ದು, ನಮ್ಮ ಮಿತ್ರರೂ ಅ. 28ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಘೋಷಿಸಿದ್ದರು.
ಬಿಜೆಪಿ ಸೇರ್ಪಡೆ: ಸಂಜು ಪಾಟೀಲರು ಘೋಟ್ನೇಕರ ಪುತ್ರನೊಂದಿಗೆ ಜತೆಗೂಡಿ ಸಂಸದರೊಂದಿಗೆ ನಿಂತಿರುವ ಪೋಟೋವನ್ನು ಘೋಟ್ನೇಕರ ಅವರ ಪುತ್ರ ಶ್ರೀನಿವಾಸ ಹಾಗೂ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಜು ಪಾಟೀಲರು ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆಂದು ಹೇಳಲಾಗುತ್ತಿದೆ. ಪ್ರಸ್ತಾಪವಾಗಿಲ್ಲ: ರೈತ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಸಂಜು ಪಾಟೀಲ ಅವರು ಬಿಜೆಪಿ ಸೇರ್ಪಡೆಯಾಗಿಲ್ಲ. ಪಕ್ಷ ಸೇರ್ಪಡೆಯಾಗಬೇಕಾದರೆ ಪಕ್ಷದ ನಿಯಾಮಾವಳಿಯಂತೆ ಮಂಡಲ ಅಧ್ಯಕ್ಷರಿಗೆ ಮೊದಲು ಅರ್ಜಿಯನ್ನು ಸಲ್ಲಿಸಬೇಕು. ಆದರೆ ಅವರಿಂದ ಅರ್ಜಿ ಬಂದಿಲ್ಲ. ಕೋರ್ ಕಮಿಟಿಯಲ್ಲೂ ಈ ವಿಷಯವು ಪ್ರಸ್ತಾಪವಾಗಿಲ್ಲ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.ಕಾದು ನೋಡ್ತೇವೆ: ಈ ಮೊದಲೇ ನಿಗದಿಪಡಿಸಿದಂತೆ ಅ. 28ರಂದು ಶಾಸಕ ಆರ್.ವಿ. ದೇಶಪಾಂಡೆಯವರ ಉಪಸ್ಥಿತಿಯಲ್ಲಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ನಡೆಯಲಿದೆ. ಅಲ್ಲಿಯವರೆಗೂ ಕ್ಷೇತ್ರದ ರಾಜಕೀಯ ಬೆಳವಣಿಗೆಗಳನ್ನು ಕಾದು ನೋಡಲಾಗುವುದು ಎಂದು ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ತಿಳಿಸಿದರು.