ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಾಂಗ್ರೆಸ್ ಸರ್ಕಾರದಿಂದ ಬಯಲುಸೀಮೆ ಜಿಲ್ಲೆಗಳಿಗೆ ಬಹಳ ಅನ್ಯಾಯವಾಗಿದೆ. ಎತ್ತಿನಹೊಳೆ, ಎಚ್‌ಎನ್ ವ್ಯಾಲಿ-ಕೆಸಿ ವ್ಯಾಲಿ ಮೇಲ್ದರ್ಜೆಗೇರಿಸುವ ಯೋಜನೆ ಇನ್ನೂ ಜಾರಿಯಾಗಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಬೇಸರ ವ್ಯಕ್ತಪಡಿಸಿದರು. ದಿಶಾ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿ ಇದ್ದಿದ್ದರೆ ಎತ್ತಿನಹೊಳೆ ಯೋಜನೆಯಡಿ ಚಿಕ್ಕಬಳ್ಳಾಪುರಕ್ಕೆ ಇಷ್ಟು ಹೊತ್ತಿಗೆ ನೀರು ದೊರೆಯುತ್ತಿತ್ತು. ಈ ಸರ್ಕಾರ ಇನ್ನೂ ಕಾಮಗಾರಿ ಮುಗಿಸಿಲ್ಲ. ಇನ್ನೂ ಸಕಲೇಶಪುರದಲ್ಲೇ ನೀರು ನಿಂತಿದೆ. ಎಚ್‌ಎನ್ ವ್ಯಾಲಿ, ಕೆಸಿ ವ್ಯಾಲಿ ಮೇಲ್ದರ್ಜೆಗೇರಿಸುವ ಕಾಮಗಾರಿಯೂ ನಡೆದಿಲ್ಲ ಎಂದು ಟೀಕಿಸಿದರು.ಹೂಡಿಕೆಗಳು ಆಂಧ್ರದ ಪಾಲು
ತಮಿಳುನಾಡಿನಲ್ಲಿ ಕಾಂಗ್ರೆಸ್ ಮಿತ್ರಪಕ್ಷ ಆಡಳಿತ ನಡೆಸುತ್ತಿದ್ದರೂ ಮೇಕೆದಾಟು ಯೋಜನೆ ಜಾರಿ ಮಾಡಲು ಸಾಧ್ಯವಾಗಿಲ್ಲ. ನಮ್ಮ ರಾಜ್ಯಕ್ಕೆ ಬರಬೇಕಾದ ಹೂಡಿಕೆಗಳು ಪಕ್ಕದ ರಾಜ್ಯಗಳಿಗೆ ಹೋಗುತ್ತಿದೆ. ಪಕ್ಕದ ರಾಜ್ಯದ ಸಿಎಂ ಚಂದ್ರಬಾಬು ನಾಯ್ಡು ಉದ್ಯಮ ಮೇಳ ನಡೆಸಿ 12 ಲಕ್ಷ ಕೋಟಿ ರು.ಗಳ. ಒಪ್ಪಂದ ಮಾಡಿಕೊಂಡಿದ್ದಾರೆ. ನಮ್ಮಲ್ಲಿ ಇಂತಹ ಕೆಲಸ ನಡೆಯುತ್ತಿಲ್ಲ ಎಂದರು. ರಾಜ್ಯದಲ್ಲಿ ಮಾತ್ರ ಪಿಎಂ ಜನೌಷಧಿ ಮಳಿಗೆಗಳನ್ನು ಮುಚ್ಚಿಸಲಾಗುತ್ತಿದೆ. ರಾಜ್ಯ ಸರ್ಕಾರ ಏಕೆ ಇಂತಹ ಅವಿವೇಕಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ತಿಳಿಯುತ್ತಿಲ್ಲ. ಬಡವರ ಬಗ್ಗೆ ಕಾಳಜಿ ಇದ್ದರೆ ಜನೌಷಧಿ ಮಳಿಗೆಗಳಿಗೆ ಪ್ರೋತ್ಸಾಹ ನೀಡಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ರೀತಿ ಆಗುವುದು ಅವರ ಘನತೆಗೆ ಸೂಕ್ತವಲ್ಲ ಎಂದರು. ಹೈಟೆಕ್ ಮಾರುಕಟ್ಟೆ ದೂರಬಿಜೆಪಿ ಸರ್ಕಾರ ಇದ್ದಾಗ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು 100 ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆದರೆ ಈ ಸರ್ಕಾರದಲ್ಲಿ ಚಿಕ್ಕಬಳ್ಳಾಪುರಕ್ಕೆ ಹೈ ಟೆಕ್ ಮಾರುಕಟ್ಟೆ ಸಿಗಲ್ಲ. ಏಕೆಂದರೆ ಈಗಷ್ಟೇ ಕಾರ್ಯಸಾಧ್ಯತಾ ವರದಿ ರೂಪಿಸಲು ಸಿದ್ಧತೆ ಮಾಡಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಅನುಕೂಲವಾದ ಜಾಗ ಗುರುತಿಸಿದ್ದರೆ, ಈಗ ಮಾರುಕಟ್ಟೆಯ ಜಾಗವನ್ನು ಇನ್ನಷ್ಟು ದೂರದಲ್ಲಿ ಗುರುತಿಸಲಾಗಿದೆ ಎಂದರು. ಯೋಜನೆಗಳ ಗುರಿ ಮುಟ್ಟಬೇಕುಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಉಸ್ತುವಾರಿ ಸಮಿತಿಯ ಸಭೆ ನಡೆಸಿ ಕೇಂದ್ರ ಸರ್ಕಾರಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಕೇಂದ್ರದ ಯೋಜನೆಗಳು ಸುಗಮವಾಗಿ ಜಾರಿಯಲ್ಲಿದೆ. ಕೆಲವು ಇಲಾಖೆಗಳಲ್ಲಿ ಪ್ರಗತಿ ಕಡಿಮೆಯಾಗಿದ್ದು, ಅದನ್ನು ಶೇ.100 ಕ್ಕೆ ಕೊಂಡೊಯ್ಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ನಾಲ್ಕು ತಿಂಗಳಲ್ಲಿ ಗುರಿ ಮುಟ್ಟುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಜಲಜೀವನ್, ಅಟಲ್ ಭೂ ಜಲ, ಸ್ವನಿಧಿ ಹೀಗೆ ಅನೇಕ ಯೋಜನೆಗಳ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದರು. ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ದೊರೆಯುತ್ತದೆ. ಆದರೆ ಬ್ಯಾಂಕ್‌ಗಳು ಕೆಲವು ಪ್ರಕ್ರಿಯೆಗಳನ್ನು ತಡ ಮಾಡುತ್ತಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಅಗಲಗುರ್ಕಿ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 152 ಕೋಟಿ ರೂ. ಮಂಜೂರಾಗಿದೆ. ಅಗಲಗುರ್ಕಿ ಮತ್ತು ಬಿಜಿಎಸ್ ಸಂಸ್ಥೆಗೆ ಹೋಗುವ ದಾರಿಯಲ್ಲಿ ಅಂಡರ್‌ಪಾಸ್ ನಿರ್ಮಿಸಲು 30 ಕೋಟಿ ರೂ. ವೆಚ್ಚದ ಯೋಜನೆ ಆರಂಭಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀದ್ರ, ಜಿಪಂ ಸಿಇಒ ಡಾ.ವೈ.ನವೀನ್ ಭಟ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಎಸ್ ಗಿರೀಶ್, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.