ಕಾಂಗ್ರೆಸ್‌ನಿಂದ ಜನತೆಯ ಸುಲಿಗೆ: ನಿಖಿಲ್‌ ಕುಮಾರಸ್ವಾಮಿ

KannadaprabhaNewsNetwork |  
Published : Jul 11, 2025, 11:48 PM ISTUpdated : Jul 12, 2025, 11:05 AM IST
ಜೆಡಿಎಸ್ | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್‌ ಸರ್ಕಾರ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ತೆರಿಗೆ ಮೂಲಕ ಜನತೆಯ ಸುಲಿಗೆ ಮಾಡುತ್ತಿದೆ ಎಂದು ರಾಜ್ಯ ಯುವ ಜೆಡಿಎಸ್‌ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

 ಚಿಂತಾಮಣಿ :  ರಾಜ್ಯದ ಕಾಂಗ್ರೆಸ್‌ ಸರ್ಕಾರ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ತೆರಿಗೆ ಮೂಲಕ ಜನತೆಯ ಸುಲಿಗೆ ಮಾಡುತ್ತಿದೆ ಎಂದು ರಾಜ್ಯ ಯುವ ಜೆಡಿಎಸ್‌ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಹೊರವಲಯದ ಕಡಪ-ಬೆಂಗಳೂರು ರಸ್ತೆಯ ಜೆ.ಕೆ.ಭವನದಲ್ಲಿ ಶುಕ್ರವಾರ ಜೆಡಿಎಸ್‌ ಸದಸ್ಯತ್ವ ಡಿಜಿಟಲ್ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ನಿಖಿಲ್‌, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸತ್ತ ಸರ್ಕಾರವಾಗಿದೆ. ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಜನರಿಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆಯನ್ನು ಹಿಡಿದಿದೆ. ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವ ಮೂಲಕ ಜನತೆಯ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಯಾವುದೋ ಒಂದು ಭಾಗಕ್ಕೆ ಜೆಡಿಎಸ್‌ ಸೀಮಿತವಾಗಿಲ್ಲ. ಬದಲಾಗಿ ರಾಜ್ಯದ ಉದ್ದಗಲಕ್ಕೂ ಪ್ರಾದೇಶಿಕ ಪಕ್ಷಕ್ಕೆ ಜನರ ಮನ್ನಣೆ ದೊರೆತಿದೆ. ಈಗಾಗಲೇ ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡಿದ್ದು ಅದನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದರು.

ಜಿಪಂ, ತಾಪಂ ಚುನಾವಣೆ:

ಯಾವುದೇ ಚುನಾವಣೆಯನ್ನು ಹಗುರವಾಗಿ ಪರಿಗಣಿಸದೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪಣ ತೊಡಬೇಕು. ಕಾರ್ಯಕರ್ತರಿಗೆ ಪಕ್ಷದಲ್ಲಿ ಉತ್ತಮ ಸ್ಥಾನಮಾನವನ್ನು ನೀಡುವ ನಿಟ್ಟಿನಲ್ಲಿ ಪಕ್ಷ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಮುಂಬರುವ ಡಿಸೆಂಬರ್– ಜನವರಿಯಲ್ಲಿ ಗ್ರಾ.ಪಂ., ತಾ.ಪಂ., ಜಿ.ಪಂ. ಚುನಾವಣೆಗಳು ಬರಲಿದ್ದು ಅವುಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದರು.

ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ತೆರವುಗೊಳಿಸಿದ್ದಾರೆ. ಪುತ್ಥಳಿ ತೆರವುಗೊಳಿಸುವುದು ಅಂಬೇಡ್ಕರ್‌ ಅವರಿಗೆ ರಾಜ್ಯ ಕಾಂಗ್ರೆಸ್‌ ಮಾಡಿದ ಅವಮಾನ ಎಂದು ಅವರು ಕಿಡಿಕಾರಿದರು.

ನಿಖಿಲ್‌ಗೆ ಅದ್ಧೂರಿ ಸ್ವಾಗತ

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಸಂತೇಕಲ್ಲಹಳ್ಳಿ ಬಳಿ ನಿಖಿಲ್ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಬೃಹತ್ ಹೂವಿನ ಹಾರದೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು. ನಂತರ, ಶ್ರೀಕ್ಷೇತ್ರ ಕೈವಾರ ತಾತಯ್ಯನವರ ಮಠಕ್ಕೆ ಅವರು ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಬಳಿಕ, ತೆರೆದ ವಾಹನದಲ್ಲಿ ಚಿನ್ನಸಂದ್ರಕ್ಕೆ ಆಗಮಿಸಿದರು.

ಬಳಿಕ, ನಗರದ ಹೊರವಲಯದ ಕಡಪ-ಬೆಂಗಳೂರು ರಸ್ತೆಯ ಜೆ.ಕೆ.ಭವನದಲ್ಲಿ ನಡೆದ ಜೆಡಿಎಸ್‌ ಸದಸ್ಯತ್ವ ಡಿಜಿಟಲ್ ನೋಂದಣಿ ಅಭಿಯಾನದಲ್ಲಿ ಅವರು ಭಾಗಿಯಾದರು. ಈ ವೇಳೆ, ನಿಖಿಲ್ ಅವರನ್ನು ತಾಲೂಕು ಕುರುಬ ಸಮಾಜದ ವತಿಯಿಂದ ಕುರಿಮರಿ ನೀಡಿ, ಕಂಬಳಿ ಹೊದಿಸಿ ಸನ್ಮಾನಿಸಲಾಯಿತು. ಅಲ್ಲದೆ, ಶೀಘ್ರವೇ ಅವರು ಅಧಿಕಾರದ ಗದ್ದುಗೆ ಏರಲಿ ಎಂದು ಶುಭ ಹಾರೈಸಲಾಯಿತು.

PREV
Read more Articles on