ಕಾಂಗ್ರೆಸ್ ಮಹಾತ್ಮ ಗಾಂಧೀಜಿಯನ್ನು ಕಬ್ಜಾ ಮಾಡಲು ಹೊರಟಿದೆ: ಡಿ.ವಿ. ಸದಾನಂದಗೌಡ

KannadaprabhaNewsNetwork |  
Published : Dec 27, 2024, 12:49 AM IST
ಸ | Kannada Prabha

ಸಾರಾಂಶ

ಕಾಂಗ್ರೆಸ್ ಅಧಿವೇಶನದ ಮೂಲಕ ಮಹಾತ್ಮ ಗಾಂಧೀಜಿಯವರನ್ನು ಕಾಂಗ್ರೆಸ್ ಪಕ್ಷ ಕಬ್ಜಾ ಮಾಡಿಕೊಳ್ಳಲು ಹೊರಟಿದೆ.

ಸಂಡೂರು: ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಮೂಲಕ ಮಹಾತ್ಮ ಗಾಂಧೀಜಿಯವರನ್ನು ಕಾಂಗ್ರೆಸ್ ಪಕ್ಷ ಕಬ್ಜಾ ಮಾಡಿಕೊಳ್ಳಲು ಹೊರಟಿದೆ. ಇದು ಅಕ್ಷಮ್ಯ. ಇದಕ್ಕಾಗಿ ಅಧಿವೇಶನದಲ್ಲಿ ಪಕ್ಷದ ಮುಖಂಡರು ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಒತ್ತಾಯಿಸಿದರು.

ಇತ್ತೀಚೆಗೆ ಮುಕ್ತಾಯಗೊಂಡ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿನ ಕಾರಣಗಳ ಕುರಿತು ಆತ್ಮಾವಲೋಕನ ನಡೆಸಲು ಗುರುವಾರ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಪಕ್ಷದ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋತಿರಬಹುದು. ಅದಕ್ಕೆ ಅಲ್ಲಲ್ಲಿ ಸಣ್ಣಪುಟ್ಟ ಸ್ವಯಂಕೃತ ಅಪರಾಧವೂ ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ಈ ಕುರಿತು ಅಧ್ಯಯನ ಮಾಡುತ್ತಿದ್ದೇವೆ. ನಿಮ್ಮನ್ನು ಮನೆಗೆ ಕಳುಹಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ. ಆಗಿರುವ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸುತ್ತೇವೆ. ಉಪ ಚುನಾವಣೆಯಲ್ಲಿ ಸೋತರೂ ಬಿಜೆಪಿ ಜನರ ಪರವಾಗಿ ನಿಂತು ಕೆಲಸ ಮಾಡುತ್ತದೆ. ಬಿಜೆಪಿ ಆಡಳಿತಾವಧಿಯಲ್ಲಿಯೇ ಜಿಲ್ಲೆ ಅಭಿವೃದ್ಧಿ ಕಂಡಿದೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಪುನಃ ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತೇವೆ ಎಂದರು.

ಬಳ್ಳಾರಿಯಲ್ಲಿ ಇಂದು ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಗಳ ಸ್ಥಿತಿ ದಯನೀಯವಾಗಿದೆ. ಕಾರ್ಮಿಕರು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಜನರ ಮೂಲ ಸೌಕರ್ಯಗಳ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ. ಗೆದ್ದಿದ್ದೇವೆ ಎಂಬ ಅಧಿಕಾರದ ಅಮಲಿನಲ್ಲಿ ಸರ್ಕಾರ ನಡೆದರೆ, ಜನತೆ ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿಯು ಅಧಿಕೃತ ವಿರೋಧ ಪಕ್ಷವಾಗಿ ತನ್ನ ಜವಾಬ್ದಾರಿ ನಿರ್ವಹಿಸುತ್ತದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ, ದುರಾಚಾರ ಕುರಿತು ಜನತೆಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದರು.

ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿಯ ಕೆಲ ಮುಖಂಡರೇ ಟೀಕಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ವಿ. ಸದಾನಂದಗೌಡ, ಇದರಿಂದಾಗಿ ಪಕ್ಷದ ಕಾರ್ಯಕರ್ತರಿಗೂ ನೋವಾಗಿದೆ. ಪಕ್ಷದಲ್ಲಿ ಆಂತರಿಕ ಶಿಸ್ತು ಬಹಳ ಮುಖ್ಯ. ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಆಂತರಿಕ ಶಿಸ್ತು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈಗಾಗಲೇ ಬಸವನಗೌಡ ಯತ್ನಾಳ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರು ಮರಣ ಹೊಂದಿದಾಗ, ಅವರ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಅವಕಾಶ ಕಲ್ಪಿಸದೇ ಅವಮಾನ ಮಾಡಿತ್ತು. ಸ್ವಾತಂತ್ರ್ಯಾನಂತರ ಅಂಬೇಡ್ಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾಗಿದ್ದು ಕೂಡ ಇದೇ ಕಾಂಗ್ರೆಸ್‌ ಎಂದರು.

ಅಮಿತ್ ಶಾ ವಿರುದ್ಧ ರಾಜ್ಯಾದ್ಯಂತ ಹೋರಾಟದ ಸಪ್ತಾಹ ಮಾಡುತ್ತಿದೆ. ಇದಕ್ಕೆ ಬೆಲೆ ಸಿಗಲ್ಲ. ಸಂವಿಧಾನಕ್ಕೆ ಇಲ್ಲಿಯವರೆಗೆ ತಂದಿರುವ ೧೦೬ ತಿದ್ದುಪಡಿಗಳಲ್ಲಿ ೭೫ ತಿದ್ದುಪಡಿಗಳಾಗಿರುವುದು ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನದ ಮೂಲ ಸ್ವರೂಪ ತಿರುಚಲು, ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವ ತಿದ್ದುಪಡಿಗಳನ್ನು ತಂದಿದ್ದು ಕಾಂಗ್ರೆಸ್ ಪಕ್ಷ ಎಂದರು.

ಆತ್ಮಾವಲೋಕಸ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಎಸ್. ದಿವಾಕರ್, ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಮುಖಂಡರಾದ ಹನುಮಂತಪ್ಪ, ಉಡೇದ ಸುರೇಶ್, ರಾಮಕೃಷ್ಣ ಉಪಸ್ಥಿತರಿದ್ದರು.

ಸಂಡೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಮಾತನಾಡಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು