ವಿಶ್ವಮಾನವ ಸಂದೇಶ ಸಾರಲು ಕುವೆಂಪು ನಾಟಕೋತ್ಸವ

KannadaprabhaNewsNetwork | Published : Dec 27, 2024 12:49 AM

ಸಾರಾಂಶ

ಕನಕಪುರ: ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಸಾರಲು ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ಡಿ.28ರಂದು ಕುವೆಂಪು ನಾಟಕೋತ್ಸವ ಆಯೋಜಿಸಲಾಗಿದೆ ಎಂದು ನಾಟಕೋತ್ಸವದ ಸಂಚಾಲಕ ಒಹಿಲೇಶ್ ಲಕ್ಷ್ಮಣ್ ತಿಳಿಸಿದರು.

ಕನಕಪುರ: ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಸಾರಲು ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ಡಿ.28ರಂದು ಕುವೆಂಪು ನಾಟಕೋತ್ಸವ ಆಯೋಜಿಸಲಾಗಿದೆ ಎಂದು ನಾಟಕೋತ್ಸವದ ಸಂಚಾಲಕ ಒಹಿಲೇಶ್ ಲಕ್ಷ್ಮಣ್ ತಿಳಿಸಿದರು.

ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಜನ್ಮ ದಿನೋತ್ಸವದ ಅಂಗವಾಗಿ ಬೆಂಗಳೂರಿನ ರಂಗ ಕಹಳೆ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ಕುವೆಂಪು ನಾಟಕೋತ್ಸವ ಆಯೋಜಿಸಲಾಗುತ್ತಿದೆ. 23ನೇ ಜಿಲ್ಲಾ ಮಟ್ಟದ ನಾಟಕೋತ್ಸವವನ್ನು ಕನಕಪುರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಹಾಗೂ ಬೆಂಗಳೂರಿನ ಪ್ರತಿಷ್ಠಿತ ತಂಡಗಳೊಂದಿಗೆ ನಾಟಟ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಮೊದಲ ದಿನ ಡಿ.28ರಂದು ಶನಿವಾರ ಸಂಜೆ 6 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಬೊಮ್ಮನಹಳ್ಳಿ ಕಿಂದರಿಜೋಗಿ, ಮೋಡಣ್ಣನ ತಮ್ಮ ನಾಟಕ ಪ್ರದರ್ಶನ ಮಕ್ಕಳಿಂದ ನಡೆಯಲಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ತಂಡಗಳಿಗೆ ಅವಕಾಶ ಕಲ್ಪಿಸಿಕೊಡಲು ಕುವೆಂಪು ಗೀತ ಗಾಯನ ನೃತ್ಯ ಸ್ಥಳೀಯ ತಂಡಗಳು ನಡೆಸಿಕೊಡಲಿವೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ಕುವೆಂಪು ಅವರ ಬಾಲ್ಯದ ದಿನಗಳ ಬಗ್ಗೆ ಬಾಲಕ ಕುವೆಂಪು ಕಿರುಚಿತ್ರ ಪ್ರದರ್ಶನ ನಡೆಯಲಿದೆ. ಬೆಂಗಳೂರು ತಂಡದಿಂದ ಶೂದ್ರ ತಪಸ್ವಿ ನಾಟಕ ಪ್ರದರ್ಶನ ಹಾಗೂ ಬಿಎಂಟಿಸಿ ನೌಕರರ ಕಲಾ ಕುಟಿರ ತಂಡದಿಂದ ಯಮನ ಸೋಲು ನಾಟಕ ಪ್ರದರ್ಶನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ರೋಟರಿ ಮಾಜಿ ಅಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಾವು ಸಾಕಷ್ಟು ಮಾಡಿದ್ದೇವೆ. ಕುವೆಂಪು ಅವರ ಹೆಸರು ಕೇಳಿದರೆ ಒಂದು ಉತ್ಸಾಹ, ಆತ್ಮಭಿಮಾನ, ಚೈತನ್ಯ ಹುಟ್ಟುತ್ತದೆ. ಕುವೆಂಪು ಅವರು ಬರೆದ ನಾಟಕಗಳಲ್ಲಿ ಸಮಾಜಕ್ಕೆ ಅಗತ್ಯವುಳ್ಳ ಉತ್ತಮ ಸಂದೇಶ ಇರುತ್ತದೆ. ಮಕ್ಕಳಿಂದ ಹಿರಿಯ ನಾಗರಿಕರವರೆಗೂ ಅವರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಜೊತೆಗೆ ಮಕ್ಕಳು ಅಭಿನಯಿಸುವುದರಿಂದ ಕಣ್ತುಂಬಿ ಕೊಳ್ಳಲು ನಮಗೂ ಬಹಳ ಕಾತುರ ಇದೆ ತಾಲೂಕಿನ ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪ್ರೌಢಶಾಲೆ ಸಹಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಟಿವಿಎನ್ ಪ್ರಸಾದ್ ಮಾತನಾಡಿ, ಕುವೆಂಪು ನಾಟಕೋತ್ಸವ ಜಿಲ್ಲಾ ಕಾರ್ಯಕ್ರಮ ಕನಕಪುರದಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ. ಎರಡು ದಿನಗಳಲ್ಲಿ ಸುಮಾರು 7 ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ನಮ್ಮ ತಾಲೂಕಿನ ಮಕ್ಕಳಲ್ಲಿರುವ ನಾಟಕದ ಕಲೆಗೆ ಪ್ರೇರಣೆ ನೀಡಲಿದೆ ನಾವು ಕೂಡ ನಾಟಕಗಳಲ್ಲಿ ಭಾಗವಹಿಸಬೇಕು ಎಂಬ ಉತ್ಸಾಹ ಮಕ್ಕಳಲ್ಲಿ ಹುಟ್ಟಲು ಈ ವೇದಿಕೆ ಸಹಕಾರಿಯಾಗಲಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ಜಯಶಂಕರ್, ಮಾಜಿ ಅಧ್ಯಕ್ಷ ಚಂದ್ರಪ್ಪ, ಶಿವಕುಮಾರ್ ಹಾಗೂ ನಿರ್ದೇಶಕ ದೇಸಾಯಿ, ಸಂಚಾಲಕ ಓಹಿಲೇಶ್, ಲಕ್ಷ್ಮಣ್ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದ ರೋಟರಿ ಭವನದಲ್ಲಿ ಕುವೆಂಪು ಅವರ ಜನ್ಮ ದಿನೋತ್ಸವದ ಪ್ರಯುಕ್ತ ಕುವೆಂಪು ನಾಟಕೋತ್ಸವ ಕುರಿತು ಸಂಚಾಲಕ ಒಹಿಲೇಶ್ ಲಕ್ಷ್ಮಣ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Share this article