ರಟ್ಟಿಹಳ್ಳಿ: ಕಾಂಗ್ರೆಸ್ ಯಾವತ್ತೂ ಜಾತಿ, ಧರ್ಮ, ದೇವರ ಮೇಲೆ ರಾಜಕೀಯ ಮಾಡುತ್ತಿಲ್ಲ, ಬಡವರ, ದೀನ-ದಲಿತರ ಪರ ಕಾರ್ಯಕ್ರಮಗಳನ್ನು ನೀಡಿ ಅದನ್ನು ಅನುಷ್ಠಾನಗೊಳಿಸಿ, ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಹಾವೇರಿ ಲೋಕಸಭಾ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚನೆಯ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.ನರೇಂದ್ರ ಮೋದಿ ಅವರು ರೈತರ ಆದಾಯ ದ್ವಿಗುಣ ಮಾಡುತ್ತೇನೆ, 60 ವರ್ಷ ಕಾಂಗ್ರೆಸ್ ಆಡಳಿತ ಅವಧಿಯಲ್ಲಿನ ಭ್ರಷ್ಟಾಚಾರದಿಂದ ವಿದೇಶಿ ಬ್ಯಾಂಕ್‌ಗಳಲ್ಲಿನ ಕಪ್ಪು ಹಣ ತಂದು ಎಲ್ಲರ ಅಕೌಂಟ್‌ಗೆ ₹15 ಲಕ್ಷ ಹಾಕುತ್ತೇನೆ, ಯುವ ಸಮುದಾಯಕ್ಕೆ ಉದ್ಯೋಗ ನೀಡುತ್ತೇನೆ, ಭಾರತೀಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತೇನೆ ಎಂದು ಸುಳ್ಳು ಹೇಳಿದರು. ಹತ್ತು ವರ್ಷ ಆಡಳಿತಾವಧಿಯಲ್ಲಿ ಏನನ್ನು ಮಾಡದೇ, ಬಡವರ ದಿನನಿತ್ಯದ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿದ್ದೇ ಬಿಜೆಪಿ ಸಾಧನೆ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಆರೋಪ ಮಾಡುವ ಬಿಜೆಪಿಯವರು ಚುನಾವಣಾ ಬಾಂಡ್ ಹೆಸರಿನಲ್ಲಿ ₹11 ಸಾವಿರ ಕೋಟಿ ಹಣ ಸಂಗ್ರಹ ಮಾಡಿದೆ. ಶೇ. 75ರಷ್ಟು ಔಷಧ ಕಂಪನಿಗಳಿಂದ ಹಣ ಸಂಗ್ರಹ, ಆನ್‌ಲೈನ್ ಗೇಮಿಂಗ್ ಕಂಪನಿಗಳಿಂದ ಒಂದು ಸಾವಿರ ಕೋಟಿ, ಬಿಜೆಪಿಯ ದಲ್ಲಾಳಿ ವಿದೇಶಗಳಿಗೆ ಗೋ ಮಾಂಸ ರಫ್ತು ವ್ಯಾಪಾರಿಯಿಂದ ನೂರಾರು ಕೋಟಿ ಪಡೆದಿದೆ ಎಂದು ಆರೋಪಿಸಿದರು.ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜಿಲ್ಲೆಗೆ ಕೊಟ್ಟ ಕೊಡುಗೆ ಶೂನ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಮೂರು ತಿಂಗಳಲ್ಲಿ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.
ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಶಾಸಕ ಯು.ಬಿ. ಬಣಕಾರ ಮತಯಾಚನೆ ಮಾಡಿದರು.ರಮೇಶ ಮಡಿವಾಳರ, ಸುನೀತಾ ದ್ಯಾವಕ್ಕಳವರ, ವಸಂತ ದ್ಯಾವಕ್ಕಳವರ, ರವಿ ಮುದಿಯಪ್ಪನವರ, ವಿಜಯ ಅಂಗಡಿ, ಪರಮೇಶಪ್ಪ ಕಟ್ಟೆಕಾರ, ಹನಮಂತಗೌಡ ಭರಮಣ್ಣನವರ, ಬೀರೇಶ ಕರಡೆಣ್ಣನವರ, ಬಾಬುಸಾಬ ಜಡದಿ, ಜಾಕೀರ ಮುಲ್ಲಾ, ಮಕಬುಲ್‌ಸಾಬ ಮುಲ್ಲಾ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.