- ಅಬ್ದುಲ್ ರೆಹಮಾನ್ ಹತ್ಯೆಯಾದಾಗ ಮನೆಗೆ ಭೇಟಿ ದ್ವಿಮುಖ ನೀತಿಗೆ ಸಾಕ್ಷಿ । ದಿನೇಶ ಗುಂಡೂರಾವ್ ಸಂಪುಟದಿಂದ ಕೈಬಿಡಲು ಒತ್ತಾಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕರಾವಳಿ ಭಾಗದಲ್ಲಿ ಕೋಮು ಸಂಘರ್ಷಕ್ಕೆ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಹಾಗೂ ಸುಹಾಸ್ ಶೆಟ್ಟಿ ಮತ್ತು ಅಬ್ದುಲ್ ರೆಹಮಾನ್ ಹತ್ಯೆಯಂತಹ ಪ್ರಕರಣಗಳಲ್ಲಿ ಆಡಳಿತ ಪಕ್ಷದ ದ್ವಿಮುಖ ನೀತಿಗಳೇ ಕಾರಣವಾಗುತ್ತಿವೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಹತ್ಯೆಯಾದಾಗ ಮೃತನ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನು ಸಚಿವ ದಿನೇಶ ಗುಂಡೂರಾವ್ ಆಗಲಿ, ಕಾಂಗ್ರೆಸ್ಸಿನ ಯಾವುದೇ ನಾಯಕರು ಮಾಡಲಿಲ್ಲ. ಆದರೆ, ಅಬ್ದುಲ್ ರೆಹಮಾನ್ ಹತ್ಯೆಯಾದಾಗ ಆತನ ಮನೆಗೆ ಭೇಟಿ ನೀಡಿದ್ದಾರೆ. ಇದು ಕಾಂಗ್ರೆಸ್ಸಿನ ದ್ವಿಮುಖ ನೀತಿಗೆ ಸಾಕ್ಷಿ ಎಂದರು.
ಅಸಮರ್ಥ ಸಚಿವ ದಿನೇಶ್:ಮಾಜಿ ಸಿಎಂ ಗುಂಡೂರಾವ್ ಮಗ ಎಂಬ ಕಾರಣಕ್ಕೆ ದಿನೇಶ ಗುಂಡೂರಾವ್‌ಗೆ ಆರೋಗ್ಯ ಸಚಿವರನ್ನಾಗಿ ಮಾಡಲಾಗಿದೆ. ಜನೌಷಧ ಕೇಂದ್ರಗಳನ್ನು ಬಂದ್ ಮಾಡಿ, ಬಡವರಿಗೆ ತೊಂದರೆ ಕೊಡುತ್ತಿರುವ ಅಸಮರ್ಥ ಸಚಿವ ದಿನೇಶ ಗುಂಡೂರಾವ್. ಅವರನ್ನು ತಕ್ಷಣೇ ಸಂಪುಟದಿಂದ ತೆಗೆದು ಹಾಕಬೇಕು. ಹತ್ಯೆಯಾದ ಹಿಂದೂ ಕಾರ್ಯಕರ್ತನ ಮನೆಗೆ ಹೋಗಿ, ಸಾಂತ್ವನ ಹೇಳಿದರೆ, ಮುಸ್ಲಿಂ ಓಟು ಹೋಗುತ್ತವೆಂಬ ಭಯ ಕಾಂಗ್ರೆಸಿಗರಿಗಿದೆ. ಈ ಕಾಂಗ್ರೆಸ್ಸಿನಿಂದಲೇ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ ಹೆಚ್ಚುತ್ತಿದೆ ಎಂದು ದೂರಿದರು.
ಕಳೆದೊಂದು ವರ್ಷದಿಂದ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ ಹೆಚ್ಚಾಗಿದೆ. ಕೋಮು ನಿಗ್ರಹ ದಳ ಸ್ಥಾಪಿಸುವುದೇ ಹಿಂದು ಮುಖಂಡರು, ಬಿಜೆಪಿಯವರನ್ನು ನೇರ ಟಾರ್ಗೆಟ್ ಮಾಡಿ. ಹಿಂದುಗಳ ಸಭೆ ಮಾಡುವ ಬದಲು ಅಲ್ಲಿ ಅಲ್ಪಸಂಖ್ಯಾತರ ಸಭೆ ಮಾಡಿ, ಕಾಂಗ್ರೆಸ್ ಸಚಿವ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಸೌಜನ್ಯಕ್ಕಾದರೂ ಕರಾವಳಿ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ ಎಂದು ರೇಣುಕಾಚಾರ್ಯ ಟೀಕಿಸಿದರು.ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡಿದ್ದ ಆರೋಪಕ್ಕೆ ಲೋಕಾಯುಕ್ತವೇ ಕ್ಲೀನ್ ಚಿಟ್ ನೀಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೇ.60 ಕಮಿಷನ್‌ನ ಲೂಟಿ ಸರ್ಕಾರ, ಜನವಿರೋಧಿ ಸರ್ಕಾರವಾಗಿದೆ. ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವಂತೆ ಧ್ವನಿ ಎತ್ತಿ, ಪ್ರತಿಭಟಿಸಿದ ಬಡಶಿಕ್ಷಕನನ್ನೇ ಅಮಾನತುಪಡಿಸಲಾಗಿದೆ. ರಾಜ್ಯದಲ್ಲಿ ಬೆಲೆ ಏರಿಕೆ ಹೆಚ್ಚುತ್ತಿದ್ದು, ರೈತರಿಗೆ ರಸಗೊಬ್ಬರವೇ ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮುಖಂಡರಾದ ಆಲೂರು ನಿಂಗರಾಜ, ಹೊನ್ನಾಳಿ ಮಂಡಲ ಅಧ್ಯಕ್ಷ ನಾಗರಾಜ ಅರಕೆರೆ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್, ಕೆ.ಎನ್. ವೆಂಕಟೇಶ, ಅಜಯ್, ಚೇತನ್, ರವಿ, ರಾಜು, ಮಂಜುನಾಥ, ಜಯಣ್ಣ ಇತರರು ಇದ್ದರು.- - -
(ಕೋಟ್) * ಕಮಲ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಹಿರಿಯ ನಟ ಕಮಲ್ ಹಾಸನ್ ನಟನೆ ಬಗ್ಗೆ ಅಭಿಮಾನವಿದೆ. ಆದರೆ, ಕನ್ನಡಕ್ಕೆ ಅಪಮಾನ ಮಾಡಿದರೆ ಅದನ್ನು ನಾವ್ಯಾರೂ ಸಹಿಸುವುದಿಲ್ಲ. ತಕ್ಷಣವೇ ಕಮಲ್ ಹಾಸನ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ, ಕಟಕಟೆಯಲ್ಲಿ ನಿಲ್ಲಿಸಬೇಕು. ಕಾಂಗ್ರೆಸ್‌ಗೆ ಭಾಷಾ ಪ್ರೇಮವೇ ಇಲ್ಲ. ಕನ್ನಡ ವಿರುದ್ಧ ಮಾಡುವವರ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮವನ್ನೇ ಕೈಗೊಂಡಿಲ್ಲ. ಇಂಥವರ ಸಿನಿಮಾಗಳನ್ನು ಬ್ಯಾನ್ ಸಹ ಮಾಡುವುದಿಲ್ಲ. ಕನ್ನಡದ ಹಿರಿಯ ನಟ ಶಿವರಾಜಕುಮಾರ ಮುಂದೆಯೇ ಕಮಲ್ ಹಾಸನ್ ಹೇಳಿಕೆ ನೀಡಿದ್ದು ಖಂಡನೀಯ.
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ- - -
-1ಕೆಡಿವಿಜಿ6, 7.ಜೆಪಿಜಿ:ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.