ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನ ಹತ್ಯೆ ಮಾಡಿದ್ದ ಕಾಂಗ್ರೆಸ್‌: ಕೋಟ ಶ್ರೀನಿವಾಸ ಪೂಜಾರಿ

KannadaprabhaNewsNetwork |  
Published : Jun 25, 2025, 11:47 PM IST
25ತುರ್ತು | Kannada Prabha

ಸಾರಾಂಶ

ಬುಧವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ‘ತುರ್ತು ಪರಿಸ್ಥಿತಿಗೆ 50 ವರ್ಷ - ಸಂವಿಧಾನ ಹತ್ಯಾ ದಿವಸ್’ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ಕರಾಳತೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಶ್ಲೇಷಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಇಂದು ಕಾಂಗ್ರೆಸ್ ನಾಯಕರು ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ಓಡಾಡುತಿದ್ದಾರೆ. 50 ವರ್ಷಗಳ ಹಿಂದೆ ಇದೇ ಕಾಂಗ್ರೆಸ್ ಪಕ್ಷ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಅಂಬೇಡ್ಕರ್ ಸಂವಿಧಾನವನ್ನೇ ಹತ್ಯೆ ಮಾಡಿತ್ತು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬುಧವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ‘ತುರ್ತು ಪರಿಸ್ಥಿತಿಗೆ 50 ವರ್ಷ - ಸಂವಿಧಾನ ಹತ್ಯಾ ದಿವಸ್’ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ಕರಾಳತೆಯನ್ನು ವಿಶ್ಲೇಷಿಸಿ ಅವರು ಮಾತನಾಡಿದರು.

ದೇಶದ ಆಂತರೀಕ ಭದ್ರತೆಯ ಅಪಾಯವಾದಾಗ, ಪರಿಹರಿಸಲಾಗದ ವಿಕೋಪ ಸಂಭವಿಸಿದಾಗಲಷ್ಟೇ ತುರ್ತು ಪರಿಸ್ಥಿತಿ ಹೇರುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ. ಆದರೆ ಇದ್ಯಾವುದೂ ಇಲ್ಲದೇ ಕೇವಲ ಇಂದಿರಾಗಾಂಧಿ ಅವರ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕಾಗಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ ಸಂವಿಧಾನವನ್ನೇ ಬುಡಮೇಲು ಮಾಡಲಾಯಿತು ಎಂದವರು ವಿಶ್ಲೇಷಿಸಿದರು.

ಅಂದು ಲೋಕಸಭೆಯು ಸರ್ವಾಧಿಕಾರಿಗಳು ಆಡುವ ಅಂಗಳವಾಗಿತ್ತು, ಕಾಂಗ್ರೆಸ್ ಪಕ್ಷ ಕಾನೂನನ್ನು ಕತ್ತೆಯನ್ನಾಗಿ ಮಾಡಿತ್ತು. ಮಾಧ್ಯಮಗಳ ಮೇಲೂ ನಿರ್ಬಂಧ ಹೇರಿತ್ತು. ತುರ್ತು ಪರಿಸ್ಥಿತಿ ವಿರೋಧಿಸಿದ್ದ ರಾಮ್‌ಮನೋಹರ್ ಲೋಹಿಯ, ವಾಜಪೇಯಿ, ಆಡ್ವಾಣಿ, ದೇವೇಗೌಡ, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ದೇಶದಾದ್ಯಂತ 36,000 ಕ್ಕೂ ಹೆಚ್ಚು ಜನರನ್ನು ಜೈಲಿಗಟ್ಟಲಾಗಿತ್ತು. 2,000ಕ್ಕೂ ಹೆಚ್ಚು ಜನರ ಹತರಾದರು, ಲಕ್ಷಾಂತರ ಜನರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಯಿತು, ಅದಕ್ಕಾಗಿಯೇ ಈ ತುರ್ತು ಪರಿಸ್ಥಿತಿಯನ್ನು ದೇಶ ಸ್ವಾತಂತ್ರ್ಯದ ನಂತರದ ಕರಾಳ ಪರಿಸ್ಥಿತಿ ಎಂದು ಕರೆಯಲಾಗುತ್ತಿದೆ, ಇದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ವೇದಿಕೆಯಲ್ಲಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ರೇಶ್ಮಾ ಉದಯ ಶೆಟ್ಟಿ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಅಲೆವೂರು ವಂದಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ