ಪ್ರಧಾನ ಅಂಚೆ ಕಚೇರಿಯಲ್ಲಿ ಸಂಜೆ ಅಂಚೆ ಎನ್ನುವ ಹೊಸ ಸೇವೆ ಜಾರಿ

KannadaprabhaNewsNetwork |  
Published : Jun 25, 2025, 11:47 PM IST
ಬಳ್ಳಾರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಜರುಗಿದ ಎಪಿಟಿ 2.0 ತಂತ್ರಾಂಶ ಅಳವಡಿಕೆ ಕಾರ್ಯಕ್ರಮಕ್ಕೆ ಅಂಚೆ ಅಧೀಕ್ಷಕ ಚಿದಾನಂದಪ್ಪ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಜೂ.24 ರಿಂದ ಬಳ್ಳಾರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ‘ಸಂಜೆ ಅಂಚೆ’ ಎನ್ನುವ ಹೊಸ ಸೇವೆ ಜಾರಿಗೊಳಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜೂ.24 ರಿಂದ ಬಳ್ಳಾರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ‘ಸಂಜೆ ಅಂಚೆ’ ಎನ್ನುವ ಹೊಸ ಸೇವೆ ಜಾರಿಗೊಳಿಸಲಾಗುತ್ತಿದೆ. ಗ್ರಾಹಕರು ಸಂಜೆ 4ರಿಂದ 7.30ರವರೆಗೆ ತಮ್ಮ ಸ್ಪೀಡ್ ಪೋಸ್ಟ್, ರೆಜಿಸ್ಟರ್ಡ್ ಕಾಗದ ಪತ್ರಗಳು, ಪಾರ್ಸಲ್ ಗಳನ್ನು ಕಳುಹಿಸಲು ಮತ್ತು ಅಂಚೆ ಚೀಟಿಗಳನ್ನು ಖರೀದಿಸಲು ಈ ಸೇವೆಯನ್ನು ಉಪಯೋಗಿಸಿಕೊಳ್ಳಬಹುದಾಗಿದೆ ಎಂದು ಅಂಚೆ ಅಧೀಕ್ಷಕ ಪಿ.ಚಿದಾನಂದ ತಿಳಿಸಿದರು.

ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಬಳ್ಳಾರಿ ಅಂಚೆ ವಿಭಾಗದ ಬಳ್ಳಾರಿ ಪ್ರಧಾನ ಅಂಚೆ ಕಚೇರಿ ಹಾಗೂ ಅದರಡಿ ಬರುವ ಎಲ್ಲಾ ಉಪ ಅಂಚೆ ಕಚೇರಿಗಳು ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ಎಪಿಟಿ 2.0 ತಂತ್ರಾಂಶ ಅಳವಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಚೆ ಇಲಾಖೆಯಲ್ಲಿ ಅಡ್ವಾನ್ಸಡ್ ಪೋಸ್ಟಲ್ ಟೆಕ್ನಾಲಜಿ (ಎಟಿಪಿ 2.0) ತಂತ್ರಾಂಶ ಅಂಚೆ ಇಲಾಖೆಯ ಎಲ್ಲ ಗ್ರಾಹಕರಿಗೆ ಸುಧಾರಿತ ಹಾಗೂ ತೃಪ್ತಿದಾಯಕವಾದ ಸೇವೆಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಜೂ.23ರಿಂದ ಬಳ್ಳಾರಿ ಅಂಚೆ ವಿಭಾಗದ ವ್ಯಾಪ್ತಿಗೆ ಬರುವ ಬಳ್ಳಾರಿ ಪ್ರಧಾನ ಅಂಚೆ ಕಚೇರಿ, ಬಳ್ಳಾರಿ ನಗರದಲ್ಲಿರುವ ಇತರೆ ಎಲ್ಲಾ ಅಂಚೆ ಕಚೇರಿಗಳು, ಸಿರುಗುಪ್ಪ, ಸಿರುಗುಪ್ಪ ಸದಾಶಿವನಗರ, ಹಚ್ಚೋಳ್ಳಿ, ತೆಕ್ಕಲಕೋಟೆ, ಎಮ್ಮಿಗನೂರು, ಕುರುಗೋಡು, ಸಿರಿಗೇರಿ, ಕರೂರು, ಕೋಳೂರು, ಮೋಕಾ, ಚೆಳ್ಳಗುರ್ಕಿ, ಕುಡುತಿನಿ, ಬಿಟಿಪಿಎಸ್, ತೋರಣಗಲ್ಲು, ವಿದ್ಯಾನಗರ, ಶಂಕರಹಿಲ್ ಟೌನ್, ಸಂಡೂರು, ಸಂಡೂರು ಲಕ್ಷ್ಮಿಪುರ, ದೇವಗಿರಿ, ದೋಣಿಮಲೈ ಟೌನ್ ಶಿಪ್, ಯಶವಂತನಗರ, ಉಪ ಅಂಚೆ ಕಚೇರಿಗಳು ಹಾಗೂ ಸಂಬಂಧಿತ ಶಾಖಾ ಅಂಚೆ ಕಚೇರಿಗಳಲ್ಲಿ ಅಡ್ವಾನ್ಸಡ್ ಪೋಸ್ಟಲ್ ಟೆಕ್ನಾಲಜಿ 2.0ನಲ್ಲಿಯೇ ಎಲ್ಲಾ ತರಹದ ವಹಿವಾಟುಗಳು ಜರುಗುತ್ತವೆ ಎಂದು ತಿಳಿಸಿದರು.

ಪೋಸ್ಟ್ ಮ್ಯಾನ್ ಕಾಗದ-ಪತ್ರಗಳನ್ನು ಬಟವಾಡೆ ಮಾಡುವ ಪ್ರಕ್ರಿಯೆಯನ್ನು ಸುಧಾರಿಸಲಾಗಿದ್ದು, ಗ್ರಾಹಕರ ಮನೆಯ ಬಾಗಿಲಿನಲ್ಲಿಯೇ ಕಾಗದ ಪತ್ರ ಬಟವಾಡೆಯಾದ ಬಗ್ಗೆ ಮಾಹಿತಿಯು ಪತ್ರ ಸ್ವೀಕರಿಸಿದವರ ಮೊಬೈಲ್ ಸಂಖ್ಯೆಗೂ ಹಾಗೂ ಪತ್ರವನ್ನು ಕಳುಹಿಸಿದವರ ಮೊಬೈಲ್ ಸಂಖ್ಯೆಗೂ ರವಾನೆಯಾಗಲಿದೆ ಎಂದು ತಿಳಿಸಿದರು.

ಹೊಸ ತಂತ್ರಾಂಶದಲ್ಲಿ ಅಂಚೆ ಇಲಾಖೆಯ ಗ್ರಾಹಕರು ತಮ್ಮ ಮನೆಯಿಂದಲೇ ಕಾಗದ ಪತ್ರಗಳನ್ನು ಬುಕ್ ಮಾಡಿಕೊಳ್ಳಬಹುದು ಹಾಗೂ ಅವುಗಳನ್ನು ತಮ್ಮ ಮನೆಯಿಂದಲೇ ಅಂಚೆ ಕಚೇರಿಗೆ ತೆಗೆದುಕೊಂಡು ಹೋಗುವಂತೆ ಪಿಕ್-ಅಪ್ ಸೇವೆಯನ್ನು ಸಹ ಬಳಸಿಕೊಳ್ಳಬಹುದು. ಇದು ಅತ್ಯಂತ ಆಕರ್ಷಣೀಯವಾದ ಹಾಗೂ ಗ್ರಾಹಕೋಪಯೋಗಿ ಸೇವೆಯಾಗಿದೆ ಎಂದರು.

ಬಳ್ಳಾರಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಭೀಮಸೇನ ಜೋಶಿ, ಸಹಾಯಕ ಅಂಚೆ ಪಾಲಕ ರಾಜಶೇಖರ, ವಿ.ತಿಂದಪ್ಪ ಮತ್ತು ನಾಗಭೂಷಣ, ಲೆಕ್ಕಪಾಲಕರಾದ ರಾಮಪ್ರಸಾದ, ತಾಂತ್ರಿಕ ಪರಿಣಿತರಾದ ಶರತ್ ಕುಮಾರ್, ಪ್ರತಾಪ್ ರೆಡ್ಡಿ, ಪ್ರತಾಪ್ ನಾಯಕ, ಪ್ರಧಾನ ಅಂಚೆ ಕಚೇರಿಯ ಎಲ್ಲಾ ಅಂಚೆ ಸಹಾಯಕರು, ಅಂಚೆ ಪೇದೆಗಳು, ಎಂಟಿಎಸ್ ಹಾಗೂ ಜಿಡಿಎಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ