ಗೋವಾ ವಿಮೋಚನಾ ಚಳವಳಿಯ ಪ್ರೇರಣಾಶಕ್ತಿ ಜಗನ್ನಾಥರಾವ್

KannadaprabhaNewsNetwork |  
Published : Jun 25, 2025, 11:47 PM IST
ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಗನ್ನಾಥರಾವ್ ಜೋಶಿ ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಗದಗ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಗನ್ನಾಥರಾವ್ ಜೋಶಿ ಅವರ 105ನೇ ಜನ್ಮದಿನಾಚರಣೆ ನಡೆಯಿತು. ಈ ವೇಳೆ ಜಗನ್ನಾಥ ರಾವ್ ಜೋಶಿ ಅವರ ಹೋರಾಟದ ಕುರಿತು ಗಣ್ಯರು ವಿವರಿಸಿದರು.

ಗದಗ: ನರಗುಂದ ನೆಲದಲ್ಲಿ ಹುಟ್ಟಿ ಬೆಳೆದ ಮಹಾನ್ ದೇಶಭಕ್ತ, ಕರ್ನಾಟಕದ ಕೇಸರಿ ಜಗನ್ನಾಥರಾವ್ ಜೋಶಿ ಅವರು ಗೋವಾ ವಿಮೋಚನಾ ಚಳವಳಿಯ ಪ್ರೇರಣಾಶಕ್ತಿಯಾಗಿದ್ದರು ಎಂದು ಬಿಜೆಪಿ ಮುಖಂಡ ಎಂ.ಎಸ್. ಕರಿಗೌಡ್ರ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಗನ್ನಾಥರಾವ್ ಜೋಶಿ ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗೋವಾವನ್ನು ಪೋರ್ಚುಗೀಸರು ಆಳುತ್ತಿದ್ದ ಕಾಲದಲ್ಲಿ ಆ ರಾಜ್ಯದ ಪ್ರವೇಶಕ್ಕೆ ಅನುಮತಿ ಕಡ್ಡಾಯವಾಗಿತ್ತು. ಚಳವಳಿ ನೇತೃತ್ವ ವಹಿಸಿದ್ದ ಜಗನ್ನಾಥ ರಾವ್‌ ಅವರನ್ನು ಅಕ್ರಮ ಪ್ರವೇಶದ ಹೆಸರಲ್ಲಿ ಸಾವಂತ್ವಾಡ ಅರಣ್ಯ ಪ್ರದೇಶದಲ್ಲಿ ಬಂಧಿಸಿ ಕಾರಾಗೃಹದಲ್ಲಿಟ್ಟು ಹಿಂಸಿಸಲಾಯಿತು. ಎಷ್ಟೋ ದಿನಗಳ ನಂತರ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಜೋಶಿ ಅವರು ನಾನು ನಿಮ್ಮನ್ನು ಗೋವಾದಿಂದ ಹೊರ ಹೋಗಲು ಹೇಳಲು ಬಂದಿರುವೆ, ಇದು ನನ್ನ ಮಾತೃಭೂಮಿಯ ಅವಿಭಾಜ್ಯ ಅಂಗ, ಇಲ್ಲಿ ನಿಮಗೇನು ಕೆಲಸ? ಗೋವಾ ಬಿಟ್ಟು ತೊಲಗಿ ಎಂದು ಸಿಂಹ ಗರ್ಜನೆ ಮಾಡಿದರು. ಅದು ಪೋರ್ಚುಗೀಸರ ಜಂಘಾಬಲವೇ ಉಡುಗಿಹೋಗಲು ಕಾರಣವಾಯಿತು ಎಂದರು.

ನಾಡಿನ ಒಳಿತಿಗಾಗಿ, ಸಮುದಾಯಗಳ ಸೌಹಾರ್ದತೆಗಾಗಿ ಸಂಘಟನೆ, ಪಕ್ಷ, ಸರ್ಕಾರಗಳ ಪ್ರತಿನಿಧಿಯಾಗಿ ಸಂಪೂರ್ಣ ಸಮರ್ಪಣಾ ಭಾವದಿಂದ ಜನಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು ಎಂದರು.

ಹಿರಿಯ ಮುಖಂಡ ಶ್ರೀಪತಿ ಉಡುಪಿ ಮಾತನಾಡಿ, ಕರ್ನಾಟಕದಲ್ಲಿ ಜನಸಂಘ ಹಾಗೂ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಜಗನ್ನಾಥ ರಾವ್‌ ಅವರ ಸಂಘಟನಾ ಪ್ರವಾಸ, ಅಧ್ಯಯನ, ಪರಿಶ್ರಮ, ಶ್ರದ್ಧೆ, ಸಂಕಲ್ಪ, ಹೋರಾಟಗಳು ಮಹತ್ತರ ಪಾತ್ರ ವಹಿಸಿವೆ. ಯಾವುದೇ ದೇಶ ಸುಭದ್ರವಾಗಿ ಇರಬೇಕಾದರೆ ಅಲ್ಲಿಯ ಜನರು ವೈಚಾರಿಕ ಹಾಗೂ ಸೈದ್ಧಾಂತಿಕವಾಗಿ ರೂಪಗೊಂಡಾಗ ಮಾತ್ರ ಸಾಧ್ಯ ಎಂಬುದು ಅವರ ನಂಬಿಕೆಯಾಗಿತ್ತು. ಆ ಕಾರಣದಿಂದಲ್ಲೇ ಜಗನ್ನಾಥ ರಾವ್‌ ಅವರ ಎಲ್ಲ ಕೆಲಸ-ಕಾರ್ಯಗಳು ಆ ದೃಷ್ಟಿಕೋನ ಹೊಂದಿರುತ್ತಿದ್ದವು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಬಸವಣ್ಣೆಪ್ಪ ಚಿಂಚಲಿ, ಜಗನ್ನಾಥಸಾ ಭಾಂಡಗೆ, ಎಂ.ಎಂ. ಹಿರೇಮಠ, ನಾಗರಾಜ ಕುಲಕರ್ಣಿ, ಕೆ.ಪಿ. ಕೋಟಿಗೌಡ್ರ, ಸುರೇಶ ಮರಳಪ್ಪನವರ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಸುಧೀರ ಕಾಟೀಗರ, ಅಶೋಕ ಕುಡತಿನಿ, ಸಂತೋಷ ಅಕ್ಕಿ, ಸಿದ್ದು ಮೊರಬದ, ರಮೇಶ ಸಜ್ಜಗಾರ, ಶಂಕರ ಖಾಕಿ, ದೇವೇಂದ್ರಪ್ಪ ಗೋಟುರ, ಅಪ್ಪಣ್ಣ ಟೆಂಗಿನಕಾಯಿ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ರ, ಕವಿತಾ ಬಂಗಾರಿ, ದೇವೇಂದ್ರಪ್ಪ ಹೂಗಾರ, ಕುಮಾರ ಮಾರನಬಸರಿ, ಸಂತೋಷ ಕಲ್ಯಾಣಿ, ರಾಚಯ್ಯ ಹೊಸಮಠ, ವಿನೋದ ಹಂಸನೂರ ಮುಂತಾದ ಗಣ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರೀಕೆರೆಯಲ್ಲಿಂದು ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ನೂತನ ರಥೋತ್ಸವ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ ಸಂಚಾರ