ಪೊಲೀಸರು, ತಾಲೂಕು ಆಡಳಿತದ ವಿರುದ್ಧ ದಸಂಸ ಕಾರ್ಯಕರ್ತರ ಪ್ರತಿಭಟನೆ

KannadaprabhaNewsNetwork |  
Published : Jun 25, 2025, 11:47 PM IST
25ಕೆಎಂಎನ್ ಡಿ26  | Kannada Prabha

ಸಾರಾಂಶ

ತಾಲೂಕಿನಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಜನರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದರೂ ಇದನ್ನು ತಡೆಯುವಲ್ಲಿ ಡಿವೈಎಸ್‌ಪಿ ಚಲುವರಾಜು ಮತ್ತು ಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ವಿಫಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲ ಮತ್ತು ಪ್ರಕರಣ ದಾಖಲು ಮಾಡಲು ವಿಳಂಬ ಮಾಡಿರುವ ಪೊಲೀಸ್ ಅಧಿಕಾರಿಗಳು ಹಾಗೂ ಬಗರ್ ಹುಕುಂ ಸಾಗುವಳಿ ಸಮಿತಿಯಲ್ಲಿ ಪರಿಶಿಷ್ಟ ಜಾತಿ, ವರ್ಗಗಳ ಜನರಿಗೆ ಅನ್ಯಾಯ ಎಸಗಿರುವ ತಾಲೂಕು ಆಡಳಿತದ ಕ್ರಮ ಖಂಡಿಸಿ, ದಸಂಸ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ತಮಟೆ ಚಳವಳಿ ನಡೆಸಿದರು.

ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಟೆ ಚಳವಳಿಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ದಸಂಸ ಕಾರ್ಯಕರ್ತರು, ತಾಲೂಕು ಆಡಳಿತ ಸೌಧದ ಎದರು ಧರಣಿ ನಡೆಸಿದರು.

ದಲಿತ ಮುಖಂಡ ಕಂಚಿನಕೋಟೆ ಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಜನರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದರೂ ಇದನ್ನು ತಡೆಯುವಲ್ಲಿ ಡಿವೈಎಸ್‌ಪಿ ಚಲುವರಾಜು ಮತ್ತು ಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ವಿಫಲರಾಗಿದ್ದಾರೆ ಎಂದು ದೂರಿದರು.

ಜೂ.16ರ ಕುಂದುಕೊರತೆ ಸಭೆಯಲ್ಲಿ ಜಾತಿ ನಿಂದನೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಉಲ್ಲೇಖವಾಗಿದ್ದರೂ ಕೂಡ ಆರೋಪಿಗಳನ್ನು ಬಂಧಿಸುವಂತಿಲ್ಲ ಎಂದು ಡಿವೈಎಸ್‌ಪಿ ಚಲುವರಾಜು ಸುಳ್ಳು ಹೇಳಿಕೆ ನೀಡಿದ್ದರು. ಆದರೆ, ಜೂ.19ರಂದು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿ ದೂರು ದಾಖಲಾದ ದಿನವೇ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಪೊಲೀಸರು ತಮಗಿಷ್ಟ ಬಂದಂತೆ ಕಾನೂನನ್ನು ಬಳಸಿಕೊಳ್ಳುತ್ತಿದ್ದಾರೆ. ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ದೂರು ದಾಖಲು ಮಾಡಿಕೊಳ್ಳಲು ವಿಳಂಬ ಮಾಡಿ ಪ್ರಕರಣ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ದಲಿತ ಉಪನ್ಯಾಸಕರಿಗೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿರುವ ಆರೋಪಿ ಧನಂಜಯ ಅವರನ್ನು ಈ ಕೂಡಲೇ ಬಂಧಿಸಬೇಕು. ದಲಿತ ವಿಜಯ್‌ಕುಮಾರ್ ಎಂಬುವರ ಅಂಗಡಿ ಧ್ವಂಸ ಮಾಡಿದ ಆರೋಪಿಗಳ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿ ಸಂತ್ರಸ್ತ ವಿಜಯಕುಮಾರ್‌ಗೆ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಂತೋಷ್ ಪ್ರಕರಣದಲ್ಲಿ ರಾಜಾರಾಂ ಟ್ರೇಡರ್‍ಸ್ ಮಾಲೀಕನನ್ನು ಬಂಧಿಸಬೇಕು. ಡಿವೈಎಸ್‌ಪಿ ಚಲುವರಾಜು ಮತ್ತು ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತು ಮಾಡಬೇಕು. ಬಗರ್‌ಹುಕುಂ ಸಾಗುವಳಿ ಸಮಿತಿಯಲ್ಲಿ ದಲಿತರಿಗೆ ಜಮೀನು ಹಂಚಿಕೆ ವಿಷಯದಲ್ಲಿ ಮಾಡಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.ತಹಸೀಲ್ದಾರ್ ಜಿ.ಆದರ್ಶ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಡೀಸಿ ಮತ್ತು ಎಸ್ಪಿ ಸ್ಥಳಕ್ಕಾಗಮಿಸಿ ನ್ಯಾಯ ಕೊಡಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಾಕಿದರು. ನಂತರ ಸ್ಥಳಕ್ಕಾಗಮಿಸಿದ ಎಎಸ್‌ಪಿ ತಿಮ್ಮಯ್ಯ ಮನವಿ ಆಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಎಎಸ್‌ಪಿ ಮತ್ತು ತಹಸೀಲ್ದಾರ್ ಗೆ ಪ್ರತ್ಯೇಕ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ದಸಂಸ ಭೀಮವಾದ ಬಣದ ರಾಜ್ಯಾಧ್ಯಕ್ಷ ಡಾ.ಆರ್.ಮೋಹನ್‌ರಾಜ್, ಮುಖಂಡರಾದ ಮುಳಕಟ್ಟೆ ಶಿವರಾಮಯ್ಯ, ಜಿಪಂ ಮಾಜಿ ಸದಸ್ಯ ಮುತ್ತಣ್ಣ, ಕಬ್ಬಿನಕೆರೆ ಶ್ರೀನಿವಾಸ್, ಚಂದ್ರು ಸೇರಿ ಹಲವರು ಪಾಲ್ಗೊಂಡಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ