ಕಾಂಗ್ರೆಸ್‌ನಿಂದ ವಿದ್ಯಾರ್ಥಿಗಳ ಗರ್ಜನೆ ಅಭಿಯಾಣ: ಆ. 1ಕ್ಕೆ ಡಿಸಿ ಕಚೇರಿ ಮುತ್ತಿಗೆ

KannadaprabhaNewsNetwork |  
Published : Jun 28, 2026, 02:45 AM IST
ಚಿತ್ರ 27ಬಿಡಿಆರ್‌2ಬೀದರ್‌ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳ ಜೀವನದ ವಿರುದ್ಧ ಚಲ್ಲಾಟವಾಡಿರುವ ಕೇಂದ್ರ ಸರ್ಕಾರದ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಂಗ್ರೆಸ್‌ ದೇಶಾದ್ಯಂತ ‘ಛಾತ್ರೋಂ ಕಿ ಗೂಂಜ್‌’ (ವಿದ್ಯಾರ್ಥಿಗಳ ಗರ್ಜನೆ) ಅಭಿಯಾನಕ್ಕೆ ಚಾಲನೆ ನೀಡಿದ್ದು, ಆಗಸ್ಟ್‌ 1ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ವಿದ್ಯಾರ್ಥಿಗಳ ಜೀವನದ ವಿರುದ್ಧ ಚಲ್ಲಾಟವಾಡಿರುವ ಕೇಂದ್ರ ಸರ್ಕಾರದ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಂಗ್ರೆಸ್‌ ದೇಶಾದ್ಯಂತ ‘ಛಾತ್ರೋಂ ಕಿ ಗೂಂಜ್‌’ (ವಿದ್ಯಾರ್ಥಿಗಳ ಗರ್ಜನೆ) ಅಭಿಯಾನಕ್ಕೆ ಚಾಲನೆ ನೀಡಿದ್ದು, ಆಗಸ್ಟ್‌ 1ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದರು.

ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, 28 ಪ್ರಮುಖ ನಗರಗಳಲ್ಲಿ 40 ದಿನಗಳ ಕಾಲ ನಡೆಯಲಿರುವ ಈ ಅಭಿಯಾನವು ವಿದ್ಯಾರ್ಥಿಗಳ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವ ಉದ್ದೇಶ ಹೊಂದಿದೆ, ದೇಶದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ಅವರ ಪರವಾಗಿ ಹೋರಾಟ ರೂಪಿಸಿದ್ದೇವೆ ಎಂದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಬೇಕು. ಹಾಗೆಯೇ ವಾರ್ಷಿಕ ಪರೀಕ್ಷೆಗಳು ಮತ್ತು ನೇಮಕಾತಿಗಳಿಗಾಗಿ ನಿಗದಿತ ಕ್ಯಾಲೆಂಡರ್‌ ಜಾರಿಗೆ ತಂದು ದಿನಾಂಕಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಅಭಿಯಾನದ ಅಂಗವಾಗಿ ಜೂ. 30ರಿಂದ ದೇಶದ 28 ನಗರಗಳಲ್ಲಿ ಕರಪತ್ರ ವಿತರಣೆ, ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮಗಳು ಹಾಗೂ ಬೀದಿ ಸಭೆಗಳು ನಡೆಯಲಿವೆ. ಜುಲೈ ತಿಂಗಳಿಡೀ ಕ್ಯಾಂಪಸ್‌ ಸಂಪರ್ಕ ಅಭಿಯಾನ ಮತ್ತು ವಿವಿಧ ವಿದ್ಯಾರ್ಥಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆಗಸ್ಟ್‌ 1ರಂದು ಜಿಲ್ಲಾಧಿಕಾರಿಗಳ ಕಚೇರಿಗಳ ಮುತ್ತಿಗೆ ಹಾಗೂ ಆಗಸ್ಟ್ 9ರಂದು ದೆಹಲಿಯಲ್ಲಿ ಸಂಸತ್‌ ಮುತ್ತಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದ ಪ್ರಕಾರ, ಕೋಚಿಂಗ್‌ ಕೇಂದ್ರಗಳು, ಕಾಲೇಜು ಕ್ಯಾಂಪಸ್‌ಗಳು, ಹಾಸ್ಟೆಲ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ ಅವರ ಧ್ವನಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಪ್ರಾಮಾಣಿಕವಾಗಿ ಓದುವ ಪ್ರತಿಯೊಬ್ಬ ವಿದ್ಯಾರ್ಥಿಗೂ ನ್ಯಾಯಯುತ ಪರೀಕ್ಷೆಯ ಅವಕಾಶ ಸಿಗಬೇಕು ಎಂಬುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಹಾನಿಗೊಳಗಾಗಿದೆ.

ಪತ್ರಿಕೆ ಸೋರಿಕೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಪರಿಣಾಮ ಅನುಭವಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಶಿಕ್ಷಣ ಕ್ಷೇತ್ರದ ಸಮಸ್ಯೆಯಲ್ಲ; ಇದು ಯುವಜನರ ಭವಿಷ್ಯ ಮತ್ತು ಉದ್ಯೋಗದ ಪ್ರಶ್ನೆಯಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೊಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾರ್ಜ್‌ ಫರ್ನಾಂಡಿಸ್‌, ಬೀದರ್‌ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಪ್ರೊ. ವಿಠಲದಾಸ ಪ್ಯಾಗೆ, ಅಬ್ದುಲ್‌ ಸತ್ತಾರ, ಶಿವನಾಥ ಪಾಟೀಲ್‌, ಸಚಿನ್‌ ಮಲ್ಕಾಪುರೆ, ಪಕ್ಷದ ಪ್ರಚಾರ ಸಮಿತಿಯ ಮುಖಂಡರಾದ ಸುನಿಲ‌ ಬಚ್ಚನ್‌, ಸಂಜು ಡಿ.ಕೆ, ರವಿಂದ್ರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ: ಡಾ.ಸಿ.ಎಂ.ಅರವಿಂದ್