ಮುದರಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜ (55) ಅವರನ್ನು ಶುಕ್ರವಾರ ಹಾಡಹಗಲೇ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಕಾಪು: ಇಲ್ಲಿನ ಮುದರಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜ (55) ಅವರನ್ನು ಶುಕ್ರವಾರ ಹಾಡಹಗಲೇ ಗುಂಡಿಕ್ಕಿ ಕೊಲೆ ಮಾಡಲಾಗಿದೆ.ವಾರದ ಹಿಂದೆಯಷ್ಟೇ ಕುಂದಾಪುರದಲ್ಲಿ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಎಂಬವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಇದೀಗ ಇನ್ನೊಂದು ಶೂಟೌಟ್ ಕೊಲೆಯಿಂದ ಜಿಲ್ಲೆ ಆತಂಕಕ್ಕೊಳಗಾಗಿದೆ.
ಶುಕ್ರವಾರ ಮಧ್ಯಾಹ್ನ 3.30 ಸುಮಾರಿಗೆ ಇಲ್ಲಿನ ಮುದರಂಗಡಿ ಗ್ರಾಮದ ಪಿಲಾರು ಸೈಂಟ್ ಫ್ರಾನ್ಸಿಸ್ ಜೇವಿಯರ್ ಚರ್ಚ್‌ನ ಮುಂಭಾಗದಲ್ಲಿ ಈ ಕೊಲೆ ನಡೆದಿದೆ. ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ತೀರಾ ಹತ್ತಿರದಿಂದ ಡೇವಿಡ್ ಅವರ ಮೇಲೆ ಏಕಾಏಕಿ 3 ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಒಂದು ಗುಂಡು ಡೇವಿಡ್ ಡಿಸೋಜ ಅವರ ಹಣೆಗೆ ಬಡಿದಿದ್ದರೆ, ಇನ್ನೆರಡು ಅವರ ಕೈಗಳಿಗೆ ತಗುಲಿವೆ. ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಡೇವಿಡ್‌ರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಅದಾಗಲೇ ಮೃತಪಟ್ಟಿದ್ದರು. ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ. ಕಾಪು ಮತ್ತು ಪಡುಬಿದ್ರಿ ಪೊಲೀಸರ ತಂಡಗಳನ್ನು ರಚಿಸಲಾಗಿದೆ.
ಸ್ಥಳಕ್ಕೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಗುಂಡಿನ ದಾಳಿಗೆ ಸ್ಪಷ್ಟವಾಗಿಲ್ಲ.
ಹಳೆ ಆರೋಪಿ: ಡೇವಿಡ್ ಡಿಸೋಜ ಮುದರಂಗಡಿ ಗ್ರಾಪಂ ಅಧ್ಯಕ್ಷರಾಗಿದ್ದಾಗ 2019ರಲ್ಲಿ ಶಿರ್ವದ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲರಾಗಿದ್ದ ಫಾದರ್ ಮಹೇಶ್ ಡಿಸೋಜ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದರು. ಫಾದರ್ ಅವರ ಆತ್ಮಹತ್ಯೆಗೆ ಡೇವಿಡ್ ಅವರ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿತ್ತು. ನಂತರ ಡೇವಿಡ್ ಆರೋಪಮುಕ್ತರಾಗಿದ್ದರು.
ಆರೋಪಿಗಳ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆ: ಕೊಲೆಯ ದೃಶ್ಯ ಇಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳಲ್ಲಿ ಒಬ್ಬಾತ ನಡೆದುಕೊಂಡು ಬಂದು, ತಮ್ಮ ಕಾರು ಹತ್ತುತ್ತಿದ್ದ ಡೇವಿಡ್ ಅವರನ್ನು ಎಳೆದು ನೆಲಕ್ಕೆ ಕೆಡವಿ, ಹಣೆಗೆ ಕೆಲವೇ ಇಂಚು ದೂರದಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ತಕ್ಷಣ ಹತ್ತಿರದಲ್ಲಿಲ್ಲೇ ಬೈಕ್‌ನಲ್ಲಿ ಕಾಯುತಿದ್ದ ಇನ್ನೊಬ್ಬನ ಜೊತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಬೈಕು ಚಲಾಯಿಸುತಿದ್ದಾತ ಕುರುಚಲು ಗಡ್ಡಧಾರಿಯಾಗಿದ್ದು, ಕೊಲೆಗಾರ ಮುಖಕ್ಕೆ ಮಾಸ್ಕ್ ಧರಿಸಿದ್ದ. ಕೊಲೆಗಾರರಿಬ್ಬರು ತೀರಾ ನಿರ್ಭೀತಿಯಿಂದ ಕೊಲೆ ಮಾಡಿರುವ ರೀತಿಯನ್ನು ಗಮನಿಸಿದರೆ ಇಬ್ಬರೂ ಪರಿಣಿತ ವೃತ್ತಿಪರ ಕೊಲೆಗಾರರು ಎನ್ನಲಾಗುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.