‘ಸಿಂದೂರ’ ಕದನ ವಿರಾಮಕ್ಕೆ ಕಾಂಗ್ರೆಸ್‌ ನಾಯಕರ ಅಪಸ್ವರ

KannadaprabhaNewsNetwork | Updated : May 13 2025, 09:02 AM IST
Follow Us

ಸಾರಾಂಶ

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಯುದ್ಧದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಸ್ಥಿಕೆಯಿಂದ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಕಾಂಗ್ರೆಸ್‌ ನಾಯಕರು ಅಪಸ್ವರ ಎತ್ತಿದ್ದಾರೆ.

 ಕಲಬುರಗಿ/ಚಿತ್ರದುರ್ಗ : ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಯುದ್ಧದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಸ್ಥಿಕೆಯಿಂದ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಕಾಂಗ್ರೆಸ್‌ ನಾಯಕರು ಅಪಸ್ವರ ಎತ್ತಿದ್ದಾರೆ.

ಕಲಬುರಗಿ ಪ್ರವಾಸದಲ್ಲಿರುವ ಪ್ರಿಯಾಂಕ್‌ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಭಯೋತ್ಪಾದಕ ತಾಣಗಳನ್ನು ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕದನ ವಿರಾಮದ ನಿರ್ಧಾರದಿಂದ ಸೇನೆಗೆ ಹಾಗೂ ಭಾರತೀಯ ಸಾಮಾನ್ಯ‌ ನಾಗರಿಕರಿಗೆ ನಿರಾಸೆ ತಂದಿದೆ ಎಂದರು.

‘ಕಾಶ್ಮೀರ ವಿಚಾರ ದ್ವೀಪಕ್ಷೀಯ ವಿಷಯವಾಗಿದ್ದು ಪಾಕಿಸ್ತಾನ ಹಾಗೂ ಭಾರತ ನಡುವಿನ ವಿಚಾರವನ್ನು ಈಗ ಅಮೆರಿಕ ಮಧ್ಯೆ ಪ್ರವೇಶಿಸುವ ಮೂಲಕ ಅಂತಾರಾಷ್ಟ್ರೀಯ ವಿಚಾರವನ್ನಾಗಿ ಮಾಡಲಾಗಿದೆ. ಕದನ ವಿರಾಮ ಘೋಷಣೆ ಮಾಡಲು ಟ್ರಂಪ್ ಯಾರು? ಅವರ ಟ್ವಿಟ್ ನಲ್ಲಿರುವ ಅಂಶಗಳನ್ನು ಗಮನಿಸಿದ್ದೀರಾ? ಕಾಮನ್ ಸೆನ್ಸ್ ಎನ್ನುವ ಪದ ಬಳಸಿ, ಭಾರತಕ್ಕೆ ಬುದ್ಧಿ ಹೇಳಿರುವ ರೀತಿಯಲ್ಲಿ ಟ್ವಿಟ್ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ, ವಿದೇಶಾಂಗ ಸಚಿವರು ಹಾಗೂ ರಾಷ್ಟ್ರೀಯ ಭದ್ರತೆ ಸಲಹೆಗಾರರು ಕದನ ವಿರಾಮದ ಬಗ್ಗೆ ಯಾಕೆ ಜನರಿಗೆ ವಾಸ್ತವ ತಿಳಿಸುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ಇನ್ನು ಚಿತ್ರದುರ್ಗದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಪಾಕ್ ಭಾರತ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪಾಕ್‌ನ ಕದನ ವಿರಾಮ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ತಲೆಯೆತ್ತಿದೆ. ಮೊದಲು ನಾವು ಎಲ್ಲಾ ವಿಷಯವನ್ನು ಅವಲೋಕಿಸಿ ಯುದ್ಧ ಮಾಡಬೇಕು. ಆರಂಭ ಮಾಡಿದ ಮೇಲೆ ಅವರಿಗೆ ಪಾಠ ಕಲಿಸಬೇಕಾಗಿರುವುದು ನಮ್ಮ ಗುರಿ ಎಂದರು.

 ಪಾಕಿಸ್ತಾನ ನಂಬಿಕೆಗೆ ಅರ್ಹ ರಾಷ್ಟ್ರವಲ್ಲ. ನಮ್ಮ ನಾಗರಿಕರ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ನೆಲೆಗಳ ಮೇಲೆ ಸೈನಿಕರು ದಾಳಿ ಮಾಡಿ‌ ನಾಶ ಮಾಡಿದ್ದಾರೆ. ಆದರೆ, ಕದನ ವಿರಾಮ ಘೋಷಿಸಲಾಗಿದೆ. ಅದನ್ನು ಯಾರು ಘೋಷಿಸಬೇಕು? ಯಾವ ಮಾನದಂಡಗಳ ಅಡಿಯಲ್ಲಿ ಮಾಡಲಾಗಿದೆ? ಕದನ ವಿರಾಮ ಉಲ್ಲಂಘನೆ ಮಾಡಿದರೆ ಯಾವ ಕ್ರಮ ಕೈಗೊಳ್ಳಬೇಕು? ಎನ್ನುವ ಬಗ್ಗೆ ಸರ್ಕಾರ ಅಧಿವೇಶನ ಕರೆದು ರಾಷ್ಟ್ರದ ಜನರಿಗೆ ವಾಸ್ತವ ತಿಳಿಸಲಿ ಎಂದು ಒತ್ತಾಯಿಸಿದರು. 

  ನನ್ನ ಪತ್ರಕ್ಕೆ ಪ್ರಧಾನಿಯಿಂದ ರೆಸ್ಪಾನ್ಸ್‌ ಬಂದಿಲ್ಲ: ಖರ್ಗೆಕಾಂಗ್ರೆಸ್‌ ಪಕ್ಷ ದೇಶದ ಹಿತಾಸಕ್ತಿ‌ ಕಾಪಾಡಲು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ಘೋಷಿಸಿದೆ. ಪೆಹಲ್ಗಾಂ ಭಯೋತ್ಪಾದಕ ದಾಳಿ, ಹಾಗೂ ಪಾಕಿಸ್ತಾನ ಜೊತೆಗಿನ ಕದನ ವಿರಾಮದ ಬಗ್ಗೆ ಪ್ರದಾನಿ ಸಂಸತ್ತಿನ ಅಧಿವೇಶನ ಕರೆದು‌ ದೇಶದ ನಾಗರಿಕರಿಗೆ ತಿಳಿಸಲಿ ಎಂದು ತಾವು ಪತ್ರ ಬರೆದು ಆಗ್ರಹಿಸಿದ್ದಾಗಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

 ಈ ವಿಚಾರದ ಬಗ್ಗೆ ಚರ್ಚೆಗೆ ಬೇಗನೇ ಸಂಸತ್‌ ಸಭೆ ಕರೆಯಿರಿ ಮಾತಾಡೋಣ ಅಂತ ಪ್ರಧಾನಿಗೆ ಪತ್ರ ಬರೆದಿದ್ದೇವೆ. ಪ್ರಧಾನಿ ಅವರು ಟಿವಿಯಲ್ಲಿ ಮಾತಾಡೋದು ಬಿಟ್ಟು ಸದನದಲ್ಲಿ ಮಾತಾಡಲಿ ಅಂತ ನಾನು ರಾಹುಲ್ ಗಾಂಧಿ ಕೂಡಾ ಪತ್ರ ಬರೆದಿದ್ದೇವೆ. ಆದರೆ ಪ್ರಧಾನಿ ಅವರಿಂದ ಇದುವರೆಗೂ ನಮ್ಮ ಪತ್ರಗಳಿಗೆ ಸ್ಪಂದನೆ ದೊರಕಿಲ್ಲ. ದಿಡೀರ್‌ ಕದನ ವಿರಾಮದ ಘೋಷಣೆ ಬಗ್ಗೆ ಈ ವಿಷಯದ ಕುರಿತು ಮಾಧ್ಯಮದ ಮೂಲಕ ಮಾತನಾಡಲಾರೆ, ಸಂದರ್ಭ ಬಂದಾಗ ನಮ್ಮ ವಿಚಾರ ಹೇಳುವೆ ಎಂದು ಖರ್ಗೆ ಹೇಳಿದರು.