ಕನ್ನಡಪ್ರಭ ವಾರ್ತೆ ಕಾರ್ಕಳ
ಆರೋಪಗಳನ್ನು ದಾಖಲೆ ಆಧಾರದ ಮೇಲೆ ಮಾಡಬೇಕು ಎನ್ನುವ ಸಾಮಾನ್ಯ ಜ್ಞಾನ ಕೂಡ ಕಾಂಗ್ರೆಸಿನ ನಾಯಕರಿಗೆ ಇಲ್ಲದಿರುವುದು ಬಹಳ ಶೋಚನೀಯ ಸಂಗತಿ. ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಶಾಸಕರ ಮುತುವರ್ಜಿಯಿಂದ ಸ್ಥಾಪನೆಯಾದ ಪರಶುರಾಮ ಥೀಮ್ ಪಾರ್ಕಿನ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಈ ಪರಿಸರ ಪ್ರವಾಸಿ ತಾಣವನ್ನಾಗಿ ಮಾಡುವ ಅವಕಾಶಕ್ಕೆ ಕಲ್ಲು ಹಾಕಿದ್ದಾರೆ. ಸ್ವತಃ ಶಾಸಕರೇ ಪರಶುರಾಮ ಥೀಮ್ ಪಾರ್ಕ್ ಕೇವಲ ಪ್ರವಾಸೋದ್ಯಮದ ದೃಷ್ಟಿಯಿಂದ ಸ್ಥಾಪಿಸಲಾಗುತ್ತದೆ ಹೊರತು ಅದು ಆರಾಧನಾ ಕೇಂದ್ರವಲ್ಲವೆಂದು ಸ್ಪಷ್ಟಪಡಿಸಿದ್ದರು.
ಯೋಜನೆಯ ಕೆಲವು ಕಾಮಗಾರಿಗಳು ಬಾಕಿಯಾಗಿ ಥೀಮ್ ಪಾರ್ಕಿನ ಉದ್ಘಾಟನೆಗೆ ಸಮಸ್ಯೆಯಾಗಬಾರದೆಂದು ಅದನ್ನು ಉದ್ಘಾಟಿಸಿದ್ದು, ಈ ಸಂದರ್ಭದಲ್ಲಿ ಶಾಸಕರು ನೀತಿ ಸಂಹಿತೆಯ ಮುಗಿದು 3-4 ತಿಂಗಳೊಳಗೆ ಥೀಮ್ ಪಾರ್ಕಿನ ಬಾಕಿ ಉಳಿದ ಕಾಮಗಾರಿಗಳನ್ನು ಹಾಗೂ ವಿಗ್ರಹದ ಮುಂದುವರಿದ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಸ್ಪಷ್ಟವಾಗಿ ಹೇಳಿರುತ್ತಾರೆ. ಆದರೂ ಕಾಂಗ್ರೆಸಿನ ಕೆಲವು ವಿಘ್ನ ಸಂತೋಷಿಗಳು ಆ ಪರಶುರಾಮ ವಿಗ್ರಹದ ಬಗ್ಗೆ ಅಪಸ್ವರ ಎತ್ತಿ, ಸಮಸ್ಯೆಯನ್ನು ಜೀವಂತವಾಗಿಟ್ಟು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಜು.12ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರ ಸಮ್ಮುಖದಲ್ಲಿ ಈ ಪಾರ್ಕಿನ ವಿಷಯವನ್ನು ಎತ್ತಿ ಜನಸ್ಪಂದನ ಕಾರ್ಯಕ್ರಮವನ್ನೇ ಹಾಳುಗೆಡವಿರುತ್ತಾರೆ ಎಂದು ಮಣಿರಾಜ್ ಆರೋಪಿಸಿದ್ದಾರೆ.ಕಾಂಗ್ರೆಸ್ ನಾಯಕರಿಗೆ ಜನರ ಸಮಸ್ಯೆ ಪರಿಹರಿಸುವಲ್ಲಿ ಯಾವುದೇ ಮುತುವರ್ಜಿ ಇಲ್ಲ. ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಕಳೆದ 14 ತಿಂಗಳಿಂದ ಕಾರ್ಕಳದಲ್ಲಿ ಯಾವುದೇ ಅಭಿವೃದ್ಧಿ ನಡೆಸಲು ಅನುದಾನ ನೀಡದೇ ಜನರನ್ನು ವಂಚಿಸುತ್ತಿದ್ದಾರೆ. ಆದ್ದರಿಂದ ಕೇವಲ ರಾಜಕೀಯದ ನಾಟಕೋಸ್ಕರ ನಕಲಿ ಪ್ರತಿಭಟನೆಗಳನ್ನು ಮಾಡುವುದನ್ನು ನಿಲ್ಲಿಸಿ ಕಾರ್ಕಳ ಶಾಸಕರೊಂದಿಗೆ ಕೈಜೋಡಿಸಿ ಕಾರ್ಕಳದ ಜನತೆಯ ಹಾಗೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಮಣಿರಾಜ ಶೆಟ್ಟಿ ಪ್ರಕಟಣೆಯಲ್ಲಿ ಸಲಹೆ ಮಾಡಿದ್ದಾರೆ.