ಪಿಎಸ್‌ಐ ಕುಟುಂಬಕ್ಕೆ ಸಾಂತ್ವನ ಹೇಳಿದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪ
ಪಿಎಸ್‌ಐ ಸಾವಿಗೆ ಕಾರಣರಾಗಿರುವ ಯಾದಗಿರಿ ಶಾಸಕ ಮತ್ತು ಅವರ ಪುತ್ರನನ್ನು ಮೊದಲು ಬಂಧಿಸಿ ನಂತರ ಮೃತ ಪಿಎಸ್‌ಐ ಕುಟುಂಬವನ್ನು ರಾಜ್ಯ ಗೃಹ ಸಚಿವರು ಭೇಟಿ ಮಾಡಲಿ, ಇವರಿಬ್ಬರ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ದಲಿತ ಸಂಘಟನೆಗಳು ಹೋರಾಟ ಮಾಡಲಿ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಕರೆ ನೀಡಿದರು.
ಇತ್ತೀಚೆಗೆ ಸಾವನ್ನಪ್ಪಿದ ಪಿಎಸ್‌ಐ ಪರುಶರಾಮ ಅವರ ಸೋಮನಾಳ ಗ್ರಾಮದಲ್ಲಿ ಕುಟುಂಬವನ್ನು ಮಂಗಳವಾರ ಭೇಟಿಯಾಗಿ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಲಂಚಕ್ಕೆ ಬೇಡಿಕೆಯಿಟ್ಟಿದ್ದೇ ಪರುಶರಾಮನ ಸಾವಿಗೆ ಪ್ರಮುಖ ಕಾರಣವಾಗಿದೆ. ಆದರೆ, ಆ ಸಾವಿಗೆ ಕಾರಣರಾದ ಶಾಸಕ ಚನ್ನಾರೆಡ್ಡಿ ಹಾಗೂ ಅವರ ಮಗನ ಬೆಂಬಲ, ರಕ್ಷಣೆಗೆ ಎಐಸಿಸಿ ನಿಂತಿರುವುದು ವಿಪರ್ಯಾಸ. ಆದರೆ, ನೀವು ರಕ್ಷಣೆಗೆ ನಿಂತಿರಬಹುದು. ಆದರೆ ನಾವು ಮಾತ್ರ ಅವರ ಕುಟುಂಬದ ಜೊತೆಗಿದ್ದು, ಅಪರಾಧಿ ಸ್ಥಾನದಲ್ಲಿರುವ ಚನ್ನಾರೆಡ್ಡಿ ಮತ್ತು ಆತನ ಮಗನ ಬಂಧನವಾಗುವವರೆಗೆ ರಾಜ್ಯಾದ್ಯಂತ ದಲಿತ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡಲಿವೆ ಎಂದರು.
ಪಿಎಸ್‌ಐ ಪರುಶರಾಮ ಕಳೆದ ಏಳು ತಿಂಗಳ ಹಿಂದೆ ಶಾಸಕ ಚನ್ನಾರೆಡ್ಡಿಗೆ ₹೩೦ ಲಕ್ಷ ದುಡ್ಡು ಕೊಟ್ಟಿರೋದನ್ನ ನನ್ನ ಬಳಿ ಹೇಳಿದ್ದ. ಆಗ ನಾನು ಬೈದಿದ್ದೆ. ನನಗೆ ಹೇಳಬಾರದೇ ಎಂದು ತಿಳಿಸಿದ್ದೆ. ಆಗಲೂ ಹೇಳಲಿಲ್ಲ. ಈಗಲೂ ಅಷ್ಟೇ ಏಳು ತಿಂಗಳಿಗೆ ಎತ್ತಂಗಡಿ ಮಾಡಿದ್ದಾರೆ, ಮುಂದುವರೆಯಬೇಕಿದ್ರೆ ₹೩೦ ಲಕ್ಷ ಕೊಡಿ ಅಂತ ಹೇಳಿದ್ದಾರೆ ಆಗ, ಏಳು ತಿಂಗಳಿಗೆ ವರ್ಗಾವಣೆ ಪ್ರಶ್ನೆ ಮಾಡಿದ್ದಕ್ಕೆ ಜಾತಿ ನಿಂದನೆ ಮಾಡಿದ್ದಾರೆ. ಇದಕ್ಕೆ ಮನನೊಂದು ನನ್ನ ಸಹೋದರ ಇವತ್ತು ನಮ್ಮನ್ನೆಲ್ಲ ಬಿಟ್ಟುಹೋಗಿದ್ದಾನೆ. ಆದರೆ ಎರಡನೇ ಬಾರಿ ದುಡ್ಡು ಕೇಳಿದಾಗಲಾದರೂ ನನ್ನ ಹತ್ತಿರ ಹೇಳಿದ್ದರೆ ಆತನಿಗಾಗಿ ನಾನು ಧ್ವನಿ ಎತ್ತುತ್ತಿದ್ದೆ ಎಂದು ನಾರಾಯಣಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್, ನಿವೃತ್ತ ಐಜಿಪಿ ಭಾಸ್ಕರ್‌ರಾವ್, ಮಾಜಿ ಶಾಸಕರಾದ ಬಸವರಾಜ ದಢೇಸೂಗೂರು, ಪರಣ್ಣ ಮುನವಳ್ಳಿ ಪ್ರಮುಖರಾದ ಬಸವರಾಜ ಕ್ಯಾವಟರ್, ವೀರೇಶ್ ಸಾಲೋಣಿ, ನಾಗರಾಜ ಬಿಲ್ಗಾರ್, ಮಂಜುನಾಥ್ ಮಸ್ಕಿ, ಗುರುಸಿದ್ದಪ್ಪ ಯರಕಲ್ ಇತರರಿದ್ದರು.