ರಾಜ್ಯದಲ್ಲಿ ಆರಂಭವಾಗಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಎನ್ಯೂಮರೇಷನ್‌ ಫಾರಂ ನೀಡಬೇಕು. ಆದರೆ, ರಾಮನಗರ, ಕುಣಿಗಲ್‌, ತೀರ್ಥಹಳ್ಳಿ, ಬೆಂಗಳೂರಿನ ಕೆಲವೆಡೆ ಕಲ್ಯಾಣ ಮಂಟಪ, ಅಂಗನವಾಡಿಗಳಲ್ಲಿ ಒಂದೇ ಕಡೆ ಮತದಾರರನ್ನು ಸೇರಿಸಿ, ಸಾಮೂಹಿಕವಾಗಿ ಎನ್ಯೂಮರೇಷನ್‌ ಫಾರಂ ತುಂಬುತ್ತಿದ್ದ ಪ್ರಕರಣಗಳು ಗುರುವಾರ ವರದಿಯಾಗಿದ್ದವು.

ದೇವಸ್ಥಾನ, ಮಸೀದಿಗಳಲ್ಲಿ ಬಿಎಲ್‌ಒಗಳು ಸಾಮೂಹಿಕವಾಗಿ ಎನ್ಯೂಮರೇಷನ್‌

ಶುಕ್ರವಾರ ಕೂಡ ಹುಬ್ಬಳ್ಳಿ, ಯಾದಗಿರಿ, ತುಮಕೂರಿನ ಕುಣಿಗಲ್‌, ಉತ್ತರಕನ್ನಡದ ಯಲ್ಲಾಪುರ, ವಿಜಯಪುರದ ಇಂಡಿಯಲ್ಲಿ ಕಲ್ಯಾಣ ಮಂಟಪ, ಅಂಗನವಾಡಿ, ದೇವಸ್ಥಾನ, ಮಸೀದಿಗಳಲ್ಲಿ ಬಿಎಲ್‌ಒಗಳು ಸಾಮೂಹಿಕವಾಗಿ ಎನ್ಯೂಮರೇಷನ್‌ ಫಾರಂ ವಿತರಿಸುತ್ತಿರುವ ಪ್ರಕರಣಗಳು ವರದಿಯಾಗಿವೆ. ಈ ಸಂಬಂಧ ಬಿಎಲ್‌ಒಗಳ ವಿರುದ್ಧ ದೂರು ಸಲ್ಲಿಕೆಯಾದರೂ, ಚುನಾವಣಾ ಆಯೋಗ ತಪ್ಪಿತಸ್ಥರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಸುಮ್ಮನಾಗಿದೆ. ಮತದಾರರಲ್ಲಿ ಸಾಕಷ್ಟು ಗೊಂದಲವಿದ್ದರೂ ಜಾಗೃತಿ ಮೂಡಿಸುವ ಬದಲಿಗೆ ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗಿದೆ ಎಂಬ ಆಕ್ರೋಶ ಸಾರ್ವಜನಿಕ, ರಾಜಕೀಯ ವಲಯಗಳಲ್ಲಿ ವ್ಯಕ್ತವಾಗುತ್ತಿದೆ.

ಎಲ್ಲೆಲ್ಲೋ ಎಸ್‌ಐಆರ್‌:

ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ 63ನೇ ವಾರ್ಡಿನ ಬೂತ್ ನಂ.16ರಲ್ಲಿ ಇಲ್ಲಿನ ಬಿಎಲ್‌ಒ ಮೇರಿ ಹರಪನಾಳ ಎಂಬುವರು ಒಂದೇ ಜಾಗದಲ್ಲಿ (ಒಂದೇ ಮನೆಯಲ್ಲಿ) 25-30 ಜನರನ್ನು ಕೂರಿಸಿಕೊಂಡು ಎನ್ಯೂಮರೇಷನ್‌ ಫಾರಂಗಳನ್ನು ಭರ್ತಿ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಬಿಎಲ್‌ಎ-2 ನೀಡಿದ ದೂರಿನ ಮೇರೆಗೆ, ಬಿಎಲ್‌ಎ-1 ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಈ ಅಕ್ರಮವನ್ನು ಸಾಕ್ಷ್ಯ ಸಮೇತ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ, ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರಿಗಳು ಅಕ್ಷಯ್ ಪಾರ್ಕ್‌ನ ಗಣೇಶ ದೇವಸ್ಥಾನ ಹಾಗೂ ಮಾವಳ್ಳಿ ಪ್ಲ್ಯಾಟ್‌ನ ತುಳಜಾಭವಾನಿ ದೇವಸ್ಥಾನಗಳಲ್ಲಿ ವಿವಿಧ ಬಡಾವಣೆಗಳ ಮತದಾರರನ್ನು ಒಂದೇ ಸ್ಥಳಕ್ಕೆ ಕರೆಸಿ ಎಸ್‌ಐಆರ್ ಪ್ರಕ್ರಿಯೆ ನಡೆಸಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಮಧ್ಯೆ, ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಅಧಿಕಾರಿಗಳು ಸ್ಟಾರ್‌ ಹೆಸರಿನ ಮದುವೆ ಮಂಟಪದಲ್ಲಿ ಮತದಾರರನ್ನು ಒಂದೇ ಕಡೆ ಸೇರಿಸಿ ಎನ್ಯೂಮರೇಷನ್‌ ಫಾರಂ ಭರ್ತಿ ಮಾಡಿಸಿದ್ದು ವರದಿಯಾಗಿದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ತಳ್ಳಿಗೇರಿಯಲ್ಲಿ ಶಾದಿಮಹಲ್‌ ಒಳಗಡೆ ಶಿಕ್ಷಕಿ ಶಾಹಿನಾ ಎಂಬುವರು ಎನ್ಯೂಮರೇಷನ್‌ ಫಾರಂ ತುಂಬುತ್ತಿದ್ದು, ಈ ಕುರಿತು ಬಿಜೆಪಿಯಿಂದ ಜಿಲ್ಲಾಡಳಿತಕ್ಕೆ ದೂರು ದಾಖಲಾಗಿದೆ.

ಇದೇ ವೇಳೆ, ಯಾದಗಿರಿಯ ಸ್ವಾಮಿ ವಿವೇಕಾನಂದ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜನರನ್ನು ಆಂಜನೇಯ ದೇವಸ್ಥಾನದಲ್ಲಿ ಒಟ್ಟಿಗೆ ಸೇರಿಸಿ ಎಸ್‌ಐಆರ್‌ ಪ್ರಕ್ರಿಯೆ ನಡೆಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹೊಸಹಳ್ಳಿ ದೊಡ್ಡಿ ಬೂತ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆ ಮತದಾರರನ್ನು ಒಟ್ಟಾಗಿ ಅಂಗನವಾಡಿಯಲ್ಲಿ ಸೇರಿಸಿ ಅರ್ಜಿ ತುಂಬುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಣಿಗಲ್‌ನ ಅಂಬೇಡ್ಕರ್ ನಗರ ವ್ಯಾಪ್ತಿಯ ಮನೆಯೊಂದರಲ್ಲಿ ಬಿಎಲ್‌ಒ ಇಂದುಮತಿ ಎಂಬುವರು ತಮಗೆ ಬೇಕಾದ ಮತದಾರನ್ನು ಒಂದೆಡೆ ಸೇರಿಸಿ ಫಾರಂ ನೀಡಿದ್ದು, ಈ ಸಂಬಂಧ ತಹಸೀಲ್ದಾರ್ ಗೆ ದೂರು ಸಲ್ಲಿಕೆಯಾಗಿದೆ. ಕುಣಿಗಲ್ ಪಟ್ಟಣದ ಮತಗಟ್ಟೆ ಸಂಖ್ಯೆ 76ರಲ್ಲಿ ಮತ್ತೊಬ್ಬ ಬಿಎಲ್‌ಒ, ಮತದಾರರಿಗೆ ಫಾರಂ ವಿತರಿಸದೇ ತಾವೇ ಫಾರಂ ಭರ್ತಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

1. ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಮದುವೆ ಕಲ್ಯಾಣಮಂಟಪದಲ್ಲಿ ಎಸ್‌ಐಆರ್‌ ಪ್ರಕ್ರಿಯೆ

2. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ತಳ್ಳಿಗೇರಿಯಲ್ಲಿ ಶಾದಿಮಹಲ್‌ನಲ್ಲಿ ಎಸ್‌ಐಆರ್‌

3. ಯಾದಗಿರಿಯ ವಿವೇಕಾನಂದ ನಗರದಲ್ಲಿ ಆಂಜನೇಯ ದೇವಸ್ಥಾನದಲ್ಲಿ ಮತಪಟ್ಟಿ ಪರಿಷ್ಕರಣೆ

4. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಹೊಸಹಳ್ಳಿ ದೊಡ್ಡಿ ಅಂಗನವಾಡಿಯಲ್ಲಿ ಪ್ರಕ್ರಿಯೆ

5. ಕುಣಿಗಲ್‌ನ ಅಂಬೇಡ್ಕರ್ ನಗರದಲ್ಲಿ ಒಂದು ಮನೆಯಲ್ಲಿ ಜನರನ್ನು ಸೇರಿಸಿ ಫಾರ್ಮ್‌ ಭರ್ತಿ

6. ಹುಬ್ಬಳ್ಳಿಯಲ್ಲಿ ಅಕ್ಷಯ್ ಪಾರ್ಕ್‌ನ ಗಣೇಶ, ತುಳಜಾಭವಾನಿ ದೇವಸ್ಥಾನಗಳಲ್ಲಿ ಎಸ್‌ಐಆರ್‌

7. ಹುಬ್ಬಳ್ಳಿ-ಧಾರವಾಡದ ಬೂತ್‌ 16ರಲ್ಲಿ ಒಂದೇ ಜಾಗದಲ್ಲಿ 30 ಜನರನ್ನು ಕೂರಿಸಿ ಅರ್ಜಿ ಭರ್ತಿ

2002ರ ಮತಪಟ್ಟಿಯ ವಿವರ

ಹುಡುಕುವುದೇ ತಲೆನೋವು!

ಎಸ್‌ಐಆರ್‌ ಪ್ರಕ್ರಿಯೆ ಸುಗಮವಾಗಿ ನಡೆಯಲು 2002ರ ಮತಪಟ್ಟಿಯಲ್ಲಿರುವ ಮತದಾರನ ಹೆಸರು ಅಥವಾ ಅವರ ಪೋಷಕರ ವಿವರ ಕೊಡಬೇಕು. ಆದರೆ, 2002ರಲ್ಲಿ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದ್ದೆ ಎಂಬುದೇ ಹೆಚ್ಚಿನವರಿಗೆ ಮರೆತುಹೋಗಿದೆ. ಏಕೆಂದರೆ, 2008ರಲ್ಲಿ ಕ್ಷೇತ್ರಗಳ ಮರುವಿಂಗಡಣೆಯಾಗಿ ಬಡಾವಣೆ, ಹಳ್ಳಿ, ನಗರಗಳು ಬೇರೆ ಬೇರೆ ಕ್ಷೇತ್ರಕ್ಕೆ ಸೇರಿವೆ. ಉದಾಹರಣೆಗೆ ಚಿತ್ರದುರ್ಗ ತಾಲೂಕಿನ ಬೀರಾವರ ಗ್ರಾಮ 2002ರಲ್ಲಿ ಭರಮಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2008ರ ನಂತರ ಅದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. 2002ರ ವಿವರಕ್ಕಾಗಿ ಈಗಲೂ ಹಲವರು ಚಿತ್ರದುರ್ಗದಲ್ಲಿ ಹುಡುಕಾಡುತ್ತಿದ್ದಾರೆ!

2002ರ ಪಟ್ಟಿಯ ಜತೆ ಹೆಸರು

ಹೋಲಿಕೆಯೇ ಆಗದೆ ಸಮಸ್ಯೆ

2002ರಲ್ಲಿ ಮತಪಟ್ಟಿಗೆ ಹೆಸರು ಸೇರ್ಪಡೆ ಮಾಡಿದ ವೇಳೆ ಆಗಿನ ಸಿಬ್ಬಂದಿಯ ಪ್ರಮಾದದಿಂದ ಅಕ್ಷರ ದೋಷಗಳು ಆಗಿವೆ. ಈಗ ಆಧಾರ್‌ ಕಾರ್ಡ್‌ ಜತೆಗಿರುವ ಹೆಸರಿನ ಜತೆ ಹಿಂದಿನ ಹೆಸರು ಹೋಲಿಕೆಯೇ ಆಗದೆ ಮ್ಯಾಪಿಂಗ್ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳನ್ನು ಕೇಳಿದರೆ, ತಾವಿರುವ ಸ್ಥಳಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ, ಕೆಲಸ ಬಿಟ್ಟು ಹೋಗುವುದು ಹೇಗೆ ಎಂದು ಬೆಂಗಳೂರಿನ ಹಲವು ನಿವಾಸಿಗಳು ದೂರಿದ್ದಾರೆ. 2002ರಲ್ಲಿ ವೋಟರ್‌ ಐಡಿ ವಿತರಣೆಯಾಗಿತ್ತು. ಹಲವು ಕಾರ್ಡ್‌ಗಳಲ್ಲಿ ನಂಬರ್‌ ಇರಲಿಲ್ಲ ಎಂಬ ದೂರುಗಳೂ ಇವೆ.