ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಡಳಿತ ವೈಖರಿ ಕುರಿತ ಆಶಂಕೆಗಳಿಗೆ ಮೊದಲ ತಿಂಗಳಲ್ಲೇ ಉತ್ತರ ದೊರೆತಿದೆ. ತ್ವರಿತ ನಿರ್ಣಯಗಳ ಜತೆಗೆ ಅಭಿವೃದ್ಧಿ ಪರ, ಜನಪರ ಆಡಳಿತದ ಮೂಲಕ ಶಿವಕುಮಾರ್‌ ಅವರು ರಾಜ್ಯದ ಜನತೆಗೆ ಹೊಸ ವಿಶ್ವಾಸ ಮೂಡಿಸಿದ್ದಾರೆ.

ಬೆಂಗಳೂರು : ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಡಳಿತ ವೈಖರಿ ಕುರಿತ ಆಶಂಕೆಗಳಿಗೆ ಮೊದಲ ತಿಂಗಳಲ್ಲೇ ಉತ್ತರ ದೊರೆತಿದೆ. ತ್ವರಿತ ನಿರ್ಣಯಗಳ ಜತೆಗೆ ಅಭಿವೃದ್ಧಿ ಪರ, ಜನಪರ ಆಡಳಿತದ ಮೂಲಕ ಶಿವಕುಮಾರ್‌ ಅವರು ರಾಜ್ಯದ ಜನತೆಗೆ ಹೊಸ ವಿಶ್ವಾಸ ಮೂಡಿಸಿದ್ದಾರೆ.

ಜೂ.3ರಂದು ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದ ಶಿವಕುಮಾರ್‌ ಅವರು ಮೊದಲ ಸಂಪುಟದಲ್ಲೇ ಪ್ರಮುಖ ಆರು ಜನಪರ ಹಾಗೂ ಯುವಕರ ಪರ ನಿರ್ಣಯಗಳ ಮೂಲಕ ಮೆಚ್ಚುಗೆ ಗಳಿಸಿದ್ದರು.

ತಮ್ಮ ಜನಪರ, ಅಭಿವೃದ್ಧಿ ಪರ ಆಡಳಿತ ವೈಖರಿ ಮುಂದುವರೆಸಿರುವ ಅವರು, ಸರ್ಕಾರಿ ಉದ್ಯೋಗದತ್ತ ನಿರೀಕ್ಷೆ ಇಟ್ಟಿರುವ ಯುವಕರಿಗಾಗಿ 72,000 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದ್ದಾರೆ. ಜತೆಗೆ ಖಾಸಗಿ ವಲಯದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲು ತೀರ್ಮಾನ ಮಾಡಿದ್ದಾರೆ.

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಜತೆಗೆ ಜಾರಿ, ರಾಜ್ಯದ ಎಲ್ಲಾ ಪಂಚಾಯತಿ, ವಾರ್ಡ್‌ಗಳಲ್ಲಿ ಭಾರತ ಜೋಡೋ ಯುವಕರ ಸಂಘ ಸ್ಥಾಪನೆ ಮಾಡಿ ತಲಾ 10 ಲಕ್ಷ ರು. ನೀಡುವ ಮಹತ್ವದ ನಿರ್ಣಯ ಮಾಡಿದ್ದಾರೆ.

ಜನರ ಸಮಸ್ಯೆಗೆ ಪರಿಹಾರ:

ಸಾರ್ವಜನಿಕರ ಕುಂದುಕೊರತೆ, ಅಹವಾಲು ಆಲಿಸಲು ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದ್ದಾರೆ.

ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಿದ ಅವರು, 2500 ಅಡಿವರೆಗಿನ (ಶೇ.20 ರಷ್ಟು ವ್ಯತ್ಯಾಸದೊಂದಿಗೆ) ನೂತನ ವಸತಿ ಕಟ್ಟಡಗಳ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಒ.ಸಿ. ವಿನಾಯಿತಿ ನೀಡಿ ಹಲವು ತಿಂಗಳಿಂದ ಸಮಸ್ಯೆ ಎದುರಿಸುತ್ತಿದ್ದ ನಾಗರಿಕರು ನಿಟ್ಟುಸಿರು ಬಿಡುವಂತೆ ಮಾಡಿದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದೆಲ್ಲೆಡೆ ‘ಬಿ’ ಯಿಂದ ‘ಎ’ ಖಾತಾ ಪರಿವರ್ತನೆಗೆ ಚಾಲನೆ ನೀಡಿದ್ದಾರೆ.

ಅಭಿವೃದ್ಧಿ ಪರ ಹೊಸ ಪರ್ವ:

ಅಭಿವೃದ್ಧಿಗೆ ಆದ್ಯತೆ ನೀಡಿರುವ ಶಿವಕುಮಾರ್‌ ಅವರು ಹೂಡಿಕೆ ಆಕರ್ಷಿಸಲು ಹೊಸ ಇಲಾಖೆ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಜತೆಗೆ ಒಂದೇ ತಿಂಗಳಲ್ಲಿ ತುಂಗಭದ್ರಾ ಅಣೆಕಟ್ಟಿಗೆ ನೂತನವಾಗಿ ಅಳವಡಿಸಲಾಗಿರುವ ಸ್ಪಿಲ್ ಗೇಟ್ ಗಳ ಉದ್ಘಾಟನೆ, ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು 2 ಸಾವಿರ ಕೋಟಿ ರು, ಕೆಂಪೇಗೌಡ ಬಡಾವಣೆಯಲ್ಲಿ 10 ಪಥಗಳ ಎಸ್.ಎಂ. ಕೃಷ್ಣ ರಸ್ತೆ ಉದ್ಘಾಟನೆ, ಹೆಬ್ಬಾಳ ಬಳಿ ಸಣ್ಣ ಸುರಂಗ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ, ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬಿಡಿಎ ವತಿಯಿಂದ ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಗಿನ್ನೆಸ್‌ ದಾಖಲೆ ಮಾಡಿದ್ದಾರೆ.

ಆಡಳಿತ ಸುಧಾರಣೆ, ಸೋರಿಕೆಗೆ ಬ್ರೇಕ್‌:

ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಪ್ರದರ್ಶಿಸಿರುವ ಶಿವಕುಮಾರ್‌ ಅವರು, ಭ್ರಷ್ಟಾಚಾರ ವಿರುದ್ಧ ದೂರು ನೀಡಲು ದೂರವಾಣಿ ಸಂಖ್ಯೆ ಪ್ರಾರಂಭಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯದವರಿಗೆ ಮಾತ್ರ ಸಿಗಬೇಕು ಹಾಗೂ ಸೋರಿಕೆ ತಪ್ಪಿಸಲು ಕ್ರಮ, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ.

ನಶೆ ಮುಕ್ತ ಕರ್ನಾಟಕ ಗುರಿ:

2028ಕ್ಕೆ ನಶೆ ಮುಕ್ತ ಕರ್ನಾಟಕ ನಿರ್ಮಾಣದ ಗುರಿ ಜತೆಗೆ ಅಮಲು ಪದಾರ್ಥ ಬೆರೆಸುವ ಪಾನ್ ಮಸಾಲ, ಗುಟ್ಕಾಗಳ ನಿಷೇಧಿಸುವ ಎಚ್ಚರಿಕೆ ನೀಡಿದ್ದಾರೆ. ಜತೆಗೆ ರೌಡಿಗಳ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ರಚನೆಗೆ ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ರೈತರ ಪರ ಕೆಲಸಕ್ಕೆ ಆದ್ಯತೆ:

ಬರ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಮಾವು ಬೆಳೆಗಾರರಿಗೆ ಕಳೆದ ವರ್ಷದಂತೆ ಪ್ರೋತ್ಸಾಹ ಧನ ಮುಂದುವರಿಸಲು ತೀರ್ಮಾನ ಮಾಡಿದ್ದಾರೆ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ನಿರ್ದೇಶನ ನೀಡಿದ್ದಾರೆ. ಅಣೆಕಟ್ಟಿನಲ್ಲಿ ಹೂಳು ತೆಗೆಯಲು ಕೇಂದ್ರದಿಂದ ಯೋಜನೆ ರೂಪಿಸಿದ್ದಾರೆ.

ಜನ ಪರ, ಬಡವರ ಪರ ನಿರ್ಧಾರ:

ಬಡವರ ವಸತಿ ಯೋಜನೆಗಳ ಮಂದಗತಿಗೆ ಅಸಮಾಧಾನ, ಆದಷ್ಟು ಬೇಗ ವಸತಿ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಡವರಿಗೆ ನಿವೇಶನ ಬದಲು ಮನೆ ಕಟ್ಟಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಡಿಕೆಶಿ ತಿಂಗಳ ಸಾಧನೆ

1. ಯುವ ಪರ, ಜನಪರ ಸರ್ಕಾರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ಆದ್ಯತೆ

2. 72,000 ಸರ್ಕಾರಿ ಹುದ್ದೆ ನೇಮಕ, ಖಾಸಗಿ ವಲಯದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ

3. ವಿದ್ಯುತ್ ಪ್ರಸರಣ ಖಾಸಗೀಕರಣಕ್ಕೆ ಬ್ರೇಕ್‌, ಸರ್ಕಾರದಿಂದ ನಶೆ ಮುಕ್ತ ಕರ್ನಾಟಕ ಗುರಿ

4. 2500 ಅಡಿ ವಿಸ್ತೀರ್ಣವರೆಗಿನ ವಸತಿ ಕಟ್ಟಡಗಳಿಗೆ ಒ.ಸಿ. ಇಲ್ಲದೆ ವಿದ್ಯುತ್ ಸಂಪರ್ಕಕ್ಕೆ ವ್ಯವಸ್ಥೆ

5. ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಬಿ ಯಿಂದ ಎ ಖಾತಾ ಪರಿವರ್ತನೆ ರಾಜ್ಯಾದ್ಯಂತ ವಿಸ್ತರಣೆ

6. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ, ಭಾರತ್ ಜೋಡೋ ಯುವಕರ ಸಂಘ ಸ್ಥಾಪನೆ

7. ಸಾರ್ವಜನಿಕರ ಕುಂದುಕೊರತೆ, ಅಹವಾಲು ಆಲಿಸಲೆಂದೇ ಪ್ರತ್ಯೇಕ ‘ಪ್ರಜಾಸೇವೆ’ ಇಲಾಖೆ ರಚನೆ

8. 30 ದಿನಗಳಲ್ಲೇ ಹತ್ತಾರು ಅಭಿವೃದ್ಧಿ ಯೋಜನೆಗೆ ಚಾಲನೆ, ಟಿಬಿ ಡ್ಯಾಂನ ಹೊಸ ಗೇಟ್‌ಗಳ ಉದ್ಘಾಟನೆ

9. ಬೆಂಗಳೂರು ರಸ್ತೆಗಳಿಗೆ 2,000 ಕೋಟಿ ರು., ಕೆಂಪೇಗೌಡ ಬಡಾವಣೆಯಲ್ಲಿ ದಶಪಥ ರಸ್ತೆ, ಸುರಂಗ ರಸ್ತೆಗೆ ಚಾಲನೆ

10. ಆಡಳಿತ ಸುಧಾರಣೆಗೆ ಆದ್ಯತೆ, ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ, ಸೋರಿಕೆಗೆ ಬ್ರೇಕ್‌, ರಾಜ್ಯದವರಿಗಷ್ಟೇ ‘ಗ್ಯಾರಂಟಿ’

ಜೂ.3:

ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ ದಿನ