ಉಪಾಧ್ಯಕ್ಷರ ಚುನಾವಣೆ ನಡೆದು ತಿಂಗಳು ಕಳೆದರೂ ಸಭೆ ನಡೆಸಿಲ್ಲ.
ಕನ್ನಡಪ್ರಭ ವಾರ್ತೆ, ಕೊಪ್ಪಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು ಕೊಪ್ಪ ಪಪಂನಲ್ಲಿ ಬಿಜೆಪಿ ಆಡಳಿತವಿರುವುದರಿಂದ ಶಾಸಕರ ಹೆಸರು ಕೆಡಿಸುವ ಪ್ರಯತ್ನ ಬಿಜೆಪಿಯಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಪಪಂ ಕಾಂಗ್ರೆಸ್ ಸದಸ್ಯರಾದ ವಿಜಯ್ ಕುಮಾರ್, ರಶೀದ್, ಮತ್ತು ಮೈತ್ರಾ ಗಣೇಶ್ ಆರೋಪಿಸಿದ್ದಾರೆ. ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು ತಿಂಗಳು ಕಳೆದರೂ ಸಭೆ ನಡೆಸಿಲ್ಲ. ಶಾಸಕ ಟಿ.ಡಿ. ರಾಜೇಗೌಡರ ಸಹಕಾರದಿಂದ ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಸರ್ಕಾರದಿಂದ ೨ ಕೋಟಿ ಅನುದಾನ ಪಪಂ ಗೆ ಬಿಡುಗಡೆ ಮಾಡಲಾಗಿದ್ದು ಸದರಿ ಅನುದಾನಕ್ಕೆ ೧.೮೦ ಲಕ್ಷ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧವಾಗಿ ಅನುಮೋದನೆಯಾಗಿದೆ.
ಬಾಕಿ ಉಳಿದ ೨೦ ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸಿದರೆ ಮಾತ್ರ ೨ ಕೋಟಿ ಅನುದಾನ ಬಳಕೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ೨೦ ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ತುರ್ತಾಗಿ ಅನುಮೋದನೆ ಪಡೆಯಬೇಕಾಗಿದೆ. ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲು ಮತ್ತು ೨೦ ಲಕ್ಷಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲು ಅ.೧ರಂದು ಸಭೆ ಕರೆಯುವಂತೆ ಶಾಸಕರು ಪಪಂಗೆ ಪತ್ರ ಬರೆದು ಮುಖ್ಯಾಧಿಕಾರಿ ಗಳಿಗೆ ಸೂಚಿಸಿದ್ದರು. ಪೂರ್ವ ನಿಯೋಜಿತ ಬೇರೆ ಕಾರ್ಯಕ್ರಮ ಇರುವುದರಿಂದ ಅ.೧ರಂದು ಸಭೆ ಕರೆಯಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಾಂಕ ನಿರ್ಧರಿಸಿ ತಿಳಿಸಲಾಗುವುದು ಎಂದು ಪಪಂ ನೂತನ ಅಧ್ಯಕ್ಷರು ಶಾಸಕರ ಕಚೇರಿಗೆ ಪತ್ರ ಬರೆದು ಕ್ಷೇತ್ರದ ಶಾಸಕರ ಪತ್ರವನ್ನೇ ನಿರ್ಲಕ್ಷಿಸಿದ್ದಾರೆ. ದ್ವೇಷ ರಾಜಕಾರಣ ಬದಿಗಿಟ್ಟು ಎಲ್ಲಾ ಚುನಾಯಿತ ಸದಸ್ಯರೊಂದಿಗೆ ಸೇರಿ ಪಟ್ಟಣದ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು. ಕೊಪ್ಪ ಪ.ಪಂ. ವ್ಯಾಪ್ತಿಯ ಎಲ್ಲಾ ವಾರ್ಡುಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮುಖ್ಯವಾಗಿ ಕಾಯಿ ಮಾರ್ಕೆಟ್ ರಸ್ತೆ, ಮಾರ್ಕೆಟ್ ರಸ್ತೆ, ಲಾಲ್ ಬಹುದ್ದೂರ್ ಶಾಸ್ತ್ರಿ ಕ್ರೀಡಾಂಗಣದ ಹಿಂಭಾಗದ ರಸ್ತೆಗಳನ್ನು ತುರ್ತಾಗಿ ಅಭಿವೃದ್ಧಿಪಡಿಸಬೇಕಿದೆ. ಪ.ಪಂ. ಅಭಿವೃಯ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅ.೧೫ರೊಳಗೆ ಸರ್ವ ಸದಸ್ಯರ ಸಭೆ ಆಯೋಜಿಸಿ ೨೦ ಲಕ್ಷ ರು.ಗಳ ಕ್ರಿಯಾಯೋಜನೆಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಅಗತ್ಯಕ್ರಮ ಕೈಗೊಳ್ಳಬೇಕು.ಒಂದುವೇಳೆ ಸಭೆ ಆಯೋಜಿಸದೇ ಇದ್ದಲ್ಲಿ ಪಟ್ಟಣದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾದೃಷ್ಟಿಯಿಂದ ಪ.ಪಂ. ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಪ.ಪಂ.ಯ ಚುನಾಯಿತ ಕಾಂಗ್ರೆಸ್ ಸದಸ್ಯರು ತಿಳಿಸಿದ್ದಾರೆ.