)
ದಾವಣಗೆರೆ: ಸತೀಶಣ್ಣನಿಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಲೋಕೋಪಯೋಗಿ ಸಚಿವ ಸ್ಥಾನ ಎರಡನ್ನೂ ನೀಡಿ, ನಂತರ ಅಧ್ಯಕ್ಷ ಸ್ಥಾನ ಕಿತ್ತುಕೊಂಡರೂ ಏನನ್ನೂ ಕೇಳಲಿಲ್ಲ. ಸಿಎಂ ಆಗುವ ಆಸೆಯಿಂದ ಶೇ.7ರಷ್ಟು ಮೀಸಲಾತಿ ಬಗ್ಗೆ ಸತೀಶಣ್ಣ ಬಾಯಿ ಬಿಡಲಿಲ್ಲ ಎಂದು ಬಿಜೆಪಿ ಮಾಜಿ ಸಚಿವ ರಾಜು ಗೌಡ ಕಾಂಗ್ರೆಸ್ಸಿನ ಹಿರಿಯ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ.7ರಿಂದ ಶೇ.3ಕ್ಕೆ ಇಳಿಕೆ ಮಾಡಿದೆ. ಶೇ.4 ಮೀಸಲಾತಿ ಕಡಿತ ಮಾಡಿದರೂ ಕಾಂಗ್ರೆಸ್ಸಿನಲ್ಲಿರುವ ಸಮುದಾಯದ 15 ಶಾಸಕರ ಪೈಕಿ ಒಬ್ಬರೇ ಒ್ಬಬರೂ ಬಾಯಿ ಬಿಡುತ್ತಿಲ್ಲ. ಅಧಿಕಾರದ ಆಸೆಗೆ ಬಿದ್ದು ನಮ್ಮ ಸಮುದಾಯದ ಶಾಸಕರು ಸುಮ್ಮನಾಗಿದ್ದಾರೆ. ಟಾಂಗಾ ಕುದುರೆಯನ್ನು ಮುಂದೆ ಹುಲ್ಲು ತೋರಿಸಿ, ಓಡಿಸುವಂತೆ ನಿಂಗೆ ಮಂತ್ರಿ ಮಾಡ್ತೀವಿ, ನಿನಗೇ ಮಂತ್ರಿ ಮಾಡ್ತೀವಿ ಅಂದಾ ಮೂಗಿಗೆ ತುಪ್ಪ ಸವರುತ್ತಾ ಕಾಂಗ್ರೆಸ್ ಸರ್ಕಾರ ನಮ್ಮ ಸಮುದಾಯದ ಶಾಸಕರನ್ನೆಲ್ಲಾ ನಿಯಂತ್ರಿಸುತ್ತಿದೆ ಎಂದು ಅವರು ಕುಟುಕಿದರು.
ಯಡಿಯೂರಪ್ಪನವರ ಸರ್ಕಾರದಲ್ಲಿ ಶ್ರೀರಾಮುಲು, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಎಸ್.ವಿ. ರಾಮಚಂದ್ರ, ನಾನೂ ಸೇರಿದಂತೆ ಎಲ್ಲರೂ ವಿಧಾನಸಭೆಯಲ್ಲಿ ಹೋರಾಡಿ, ಸ್ಪೀಕರ್ ವಿರುದ್ಧವೇ ತಿರುಗಿ ಬಿದ್ದಿದ್ದೆವು. ನಮ್ಮೆಲ್ಲರ ಹೋರಾಟದ ಫಲವಾಗಿ ಶೇ.3ರಷ್ಟಿದ್ದ ಮೀಸಲಾತಿಯನ್ನು ಶೇ.7ಕ್ಕೆ ಏರಿಸಿದ್ದೆವು. ನಮಗೆ ಮಂತ್ರಿ ಸ್ಥಾನ ಬೇಡವೇ ಬೇಡ. ನಮ್ಮ ವಾಲ್ಮೀಕಿ ಸಮುದಾಯಕ್ಕೆ ಶೇ.7 ಮೀಸಲಾತಿ ಕೊಡಿ ಅಂತಾ ಹಠಕ್ಕೆ ಬಿದ್ದು, ಅದನ್ನು ಜಾರಿಗೆ ತಂದಿದ್ದೆವು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಾಲ್ಮೀಕಿ ಸಮುದಾಯದ ಶೇ.7 ಮೀಸಲಾತಿಯನ್ನೇ ಕಸಿಯಿತು ಎಂದು ಆರೋಪಿಸಿದರು.- - -
ಸಿದ್ದರಾಮಯ್ಯ ಬೆನ್ನಿಗೆ ಕುರುಬ ಸಮುದಾಯ ನಿಂತಿದ್ದರಿಂದ ಮುಖ್ಯಮಂತ್ರಿಯಾದರು. ಬಿ.ಎಸ್.ಯಡಿಯೂಪ್ಪ ಹಿಂದೆ ವೀರಶೈವ ಲಿಂಗಾಯತ ಸಮುದಾಯ ಇದ್ದುದರಿಂದ ಮುಖ್ಯಮಂತ್ರಿ ಆದರು. ನಮ್ಮ ಸಮುದಾಯ ನಮ್ಮ ಹಿಂದೆ ಇದೆಯೆಂಬುದು ಗೊತ್ತಾದಾಗ ಮಾತ್ರವೇ ನಮಗೆ ಅಧಿಕಾರ ಸಿಗುತ್ತದೆ. ಇನ್ನೂ ಕಾಲ ಮಿಂಚಿಲ್ಲ. ವಾಲ್ಮೀಕಿ ಸಮುದಾಯಕ್ಕೆ ಶೇ.7 ಮೀಸಲಾತಿ ಕೊಡಿಸಲು ಕಾಂಗ್ರೆಸ್ಸಿನ ಎಸ್ಟಿ ಸಮುದಾಯದ ಸಚಿವರು, ಶಾಸಕರು ಇನ್ನಾದರೂ ಧ್ವನಿ ಎತ್ತಿ.
- - -