ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರಿನಲ್ಲಿ ಬುಧವಾರ ನಡೆದ ವಿಶ್ವ ಹಿಂದೂ ಪರಿಷದ್ ನೂತನ ಜಿಲ್ಲಾ ಕಾರ್ಯಾಲಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ವಿಹಿಂಪ ರಾಷ್ಟ್ರೀಯ ನಾಯಕ ಗೋಪಾಲ್ ಜೀ ಅವರ ಕಾಲಿಗೆ ನಮಸ್ಕರಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಅಶೋಕ್ ರೈ ಅವರನ್ನು ಸಂಘಟಕರು ಶಾಲು ಹೊದಿಸಿ ಗೌರವಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯಿಂದ ಬಂದಿರುವ ಅಶೋಕ್ ರೈ ಮತ್ತು ಶಕುಂತಳಾ ಶೆಟ್ಟಿ ಇವರಿಬ್ಬರೂ ಬಿಜೆಪಿ ಪಕ್ಷದಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡವರು. ಕಾಂಗ್ರೆಸ್ಸನ್ನು ಕಟುವಾಗಿ ವಿರೋಧಿಸುವ ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹಾಲಿ ಮತ್ತು ಮಾಜಿ ಕಾಂಗ್ರೆಸ್ ಶಾಸಕರು ತಮ್ಮ ಸಂಘ ನಿಷ್ಠೆಯನ್ನು ಬಹಿರಂಗ ಪಡಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುಬ್ರಹ್ಮಣ್ಯ ನರಸಿಂಹ ಸಂಪುಟದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ನವರತ್ನ ಮತ್ತು ಅಕ್ಷತೆಯನ್ನು ಹಾಕುವ ಮೂಲಕ ನೂತನ ಕಾರ್ಯಾಲಯ ಕಾಮಗಾರಿಗೆ ಚಾಲನೆ ನೀಡಿದರು.ವಿಹಿಂಪ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ವಿಹಿಂಪ ಕೇಂದ್ರಿಯ ಕಾರ್ಯದರ್ಶಿ ಗೋಪಾಲ್ ಜಿ ಮತ್ತು ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ ಜೊತೆಗಿದ್ದರು. ಕಲ್ಲಾರ ಶ್ರೀ ಗುರು ರಾಘವೇಂದ್ರ ಮಠದ ಅರ್ಚಕ ವೇದಮೂರ್ತಿ ರಾಘವೇಂದ್ರ ಉಡುಪ ಭೂಮಿಪೂಜೆ ನೆರವೇರಿಸಿದರು. ವಿ.ಹಿಂ.ಪ ಶ್ರೀಧರ್ ತೆಂಕಿಲ, ಗ್ರಾಮಾಂತರ ಸಂಚಾಲಕ ರವಿ ಕೈತ್ತಡ್ಕ, ವಿಶಾಖ್ ರೈ, ಭರತ್ ಕುಮುಡೇಲು, ಜನಾರ್ದನ ಬೆಟ್ಟ ಅತಿಥಿಗಳನ್ನು ಗೌರವಿಸಿದರು. ವಿಹಿಂಪ ಜಿಲ್ಲಾಧ್ಯಕ್ಷ ಮತ್ತು ಕಟ್ಟಡ ಸಮಿತಿ ಕಾರ್ಯದರ್ಶಿ ಡಾ. ಕೃಷ್ಣಪ್ರಸನ್ನ ಸ್ವಾಗತಿಸಿದರು. ನವೀನ್ ನೆರಿಯ ವಂದಿಸಿದರು. ವಿಹಿಂಪ ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಸುಳ್ಯಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಮತ್ತಿತರರು ಉಪಸ್ಥಿತರಿದ್ದರು.