ಕನ್ನಡಪ್ರಭ ವಾರ್ತೆ ರಾಮದುರ್ಗ
ರಾಜ್ಯ ಸರ್ಕಾರ ಸುಮಾರು 500 ಮಠಗಳಿಗೆ ಬರಬೇಕಿದ್ದ ಅನುದಾನವನ್ನು ರಾಜ್ಯದ ಬೇರೆ ಬೇರೆ ಮಸೀದಿ, ಚರ್ಚ್‌ಗಳಿಗೆ ಹಂಚಿಕೆ ಮಾಡಿ ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ಜಾತಿ ಆಧಾರಿತ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗುತ್ತಿದೆ ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ.ಪಾಟೀಲ ಕಿಡಿಕಾರಿದರು.ತಾಲೂಕಿನ ಎಂ.ಚಂದರಗಿಯ ಗಡದೇಶ್ವರ ಮಠದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷ ಯಾವುದೇ ಇರಲಿ, ವೀರಶೈವ ಲಿಂಗಾಯತರು ಒಂದಾಗಿ ವೀರಶೈವ ಧರ್ಮ ಉಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಎಲ್ಲ ಮಠಗಳು ಬೆಂಬಲ ಸೂಚಿಸಿಬೇಕಿದೆ ಎಂದು ಕೋರಿದರು.ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ರೇಣುಕ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜೀವನದಲ್ಲಿ ತಾಯಿಯೇ ಮೊದಲ ಗುರು. ಜೀವನದಲ್ಲಿ ಸಮಾಜ ಸೇವೆ ಮಾಡಲು ಪೂಜ್ಯರಿಂದ ರೇಣುಕಶ್ರೀ ಪ್ರಶಸ್ತಿಯೂ ಹೆಚ್ಚಿನ ಪ್ರೇರಣೆ ಸಿಕ್ಕಂತಾಗಿದೆ. ಇದರಿಂದ ನಮ್ಮ ಜೀವನಕ್ಕೆ ಹೆಚ್ಚಿನ ಬಲ ಬಂದಿದೆ ಎಂದು ತಿಳಿಸಿದರು.ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಬರುವಾಗ ತಮ್ಮ ಮಕ್ಕಳನ್ನು ಕರೆ ತಂದು ಸಂಸ್ಕಾರ ಕಲಿತುಕೊಳ್ಳಲು ಪ್ರೋತ್ಸಾಹಿಸಬೇಕು. ತಮ್ಮ ದಿನನಿತ್ಯದ ಕೆಲಸಗಳನ್ನು ಸಲೀಸಾಗಿ ಮಾಡಿಕೊಳ್ಳಲು ಮಕ್ಕಳ ಕೈಗೆ ಮೊಬೈಲ್ ನೀಡಬಾರದು ಎಂದು ಮನವಿ ಮಾಡಿದರು.ಕಟಕೋಳ-ಚಂದರಗಿಯ ಗಡದೇಶ್ವರ ಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇದೇ 21, 22 ರಂದು ದಾವಣಗೆರೆಯಲ್ಲಿ ನಡೆಯುವ ಪಂಚಾಚಾರ್ಯರ ಮತ್ತು ಶಿವಾಚಾರ್ಯರ ಶೃಂಗಸಭೆಗೆ ನಾಡಿನ ಎಲ್ಲ ಮಠಗಳ ಮಠಾಧೀಶರು ಪಾಲ್ಗೊಂಡು ಧರ್ಮ ರಕ್ಷಣೆಗೆ ಮುಂದಾಗಲಿದ್ದಾರೆ. ಸಮಾಜದ ಎಲ್ಲರೂ ಅಲ್ಲಿ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಗುಡಗುಂಟಿ ಶುಗರ್ಸ್‌ನ ಎಂಡಿ ವಿರೂಪಾಕ್ಷಯ್ಯ ಗುಡಗುಂಟಿ, ಡಾ.ಗುರುಪಾದಯ್ಯಾ ಸಾಲಿಮಠ, ಅಂದಾನಯ್ಯಸ್ವಾಮಿ ಹಿರೇಮಠ, ಡಾ.ಎಸ್.ವಿ.ವಾಲಿ, ಸಂಗನಗೌಡ ಪಾಟೀಲ, ಎಂ.ಎನ್.ದೇಸಾಯಿ, ಸಿ.ಎ.ದೇಸಾಯಿ, ಟಿ.ಪಿ.ಮನ್ನೋಳಿ, ಈರಣ್ಣ ಕಮ್ಮಾರ, ಶಿವಪ್ಪ ನವರಕ್ಕಿ ಇತರರು ಇದ್ದರು.ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಸುಮಾರು 90 ಸಾವಿರ ಭಕ್ತರಿಗೆ ಲಿಂಗಧೀಕ್ಷೆ ನೀಡಿರುವ ಕೀರ್ತಿ ಚಂದರಗಿಯ ಗಡದೇಶ್ವರ ಮಠಕ್ಕೆ ಸಲ್ಲುತ್ತದೆ. ಗೊಡಚಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗುರುಕುಲ ಕಟ್ಟಡ ನಿರ್ಮಾಣವಾದ ಮೇಲೆ ಅಲ್ಲಿ ನಿರಂತರ ಧರ್ಮದಾಸೋಹ ನಡೆಯಲಿದೆ.-ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ,
ಕಟಕೋಳ-ಚಂದರಗಿಯ ಗಡದೇಶ್ವರ ಮಠ.ದಾವಣಗೆರೆಯಲ್ಲಿ ನಡೆಯುವ ಶೃಂಗಸಭೆಯಲ್ಲಿ ಸರ್ಕಾರ ನಡೆಸುವ ಜಾತಿ ಗಣತಿಯಲ್ಲಿ ಯಾವ ರೀತಿ ಬರೆಸಬೇಕು ಎನ್ನುವ ದೃಢ ನಿರ್ಧಾರ ತೆಗೆದುಕೊಂಡು ಗೊಂದಲದಲ್ಲಿರುವ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ಧಾರ್ಮಿಕ ಕಾರ್ಯಕ್ರಮಕ್ಕೆ ಕೇವಲ ವಯಸ್ಸಾದವರು ಮಾತ್ರ ಬರುತ್ತಿದ್ದು, ಯುವಕರು ಮತ್ತು ಮಕ್ಕಳನ್ನು ಕರೆ ತಂದು ಧರ್ಮ ಧಾರ್ಮಿಕ ವಿಚಾರ ತಿಳಿ ಹೇಳುವ ಮೂಲಕ ಧರ್ಮ ಜಾಗೃತಿ ಮೂಡಿಸಲು ಎಲ್ಲರೂ ಶ್ರಮಿಸಬೇಕು.-ಸಿ.ಸಿ.ಪಾಟೀಲ, ಮಾಜಿ ಸಚಿವ.ತಮ್ಮ ಕುಟುಂಬ ಕಳೆದ 70 ವರ್ಷಗಳಿಂದಲೂ ಮಠಗಳ ಬೆಳವಣಿಗೆ ಮತ್ತು ಜೀರ್ಣೋದ್ಧಾರಕ್ಕೆ ಶ್ರಮಿಸುತ್ತ ಬಂದಿದೆ. ಗುರು ಪರಂಪರೆ ಉಳಿಸಲು ತಮ್ಮ ಕುಟುಂಬ ನಿರಂತರ ಶ್ರಮ ವಹಿಸಲಿದೆ. ಜೀವನದಲ್ಲಿ ಮನುಷ್ಯನಿಗೆ ಹಿಂದೆ ಗುರು ಇದ್ದು, ಮುಂದೆ ಗುರಿ ಹೊಂದಿರಬೇಕಾಗಿದೆ. ಅಂದಾಗ ಧರ್ಮದಿಂದ ನಡೆಯಲು ಸಾಧ್ಯವಾಗಲಿದೆ.
-ಮಹಾಂತೇಶ ಕವಟಗಿಮಠ, ಮಾಜಿ ಎಂಎಲ್ಸಿ.